ತುಮಕೂರು :

      ಜಿಲ್ಲೆಯಲ್ಲಿ ಮಾತ್ರವಲ್ಲದೆ ಹೊರ ಜಿಲ್ಲೆಗಳಲ್ಲೂ ಸಹ ಕೋವಿಡ್‍ನಿಂದ ಸಂಕಷ್ಟಕ್ಕೊಳಗಾದವರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಸ್ವಾಮಿ ಜಪಾನಂದಾಜೀ ತಿಳಿಸಿದರು.

      ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜಿಲ್ಲಾ ಮುದ್ರಣಕಾರರ ಸಂಘದಿಂದ ನಗರದಲ್ಲಿರುವ ಮುದ್ರಣಕಾರರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇದುವರೆಗೂ ಸುಮಾರು 20 ಸಾವಿರಕ್ಕೂ ಅಧಿಕ ಆಹಾರದ ಕಿಟ್‍ಗಳನ್ನು ವಿತರಿಸಲಾಗಿದ್ದು, ಇಂದೂ ಕೂಡ ಮಧುಗಿರಿಯಲ್ಲಿ ಕುಂಚ ಕಲಾವಿದರು ಮತ್ತು ಛಾಯಾಗ್ರಾಹಕರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿ ಬಂದಿದ್ದೇನೆ ಎಂದರು.

      ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮ ಮುದ್ರಣ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಮಧುವೆ, ನಾಮಕರಣ, ಗೃಹಪ್ರವೇಶ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲೇ ಹೆಚ್ಚು ನಡೆಯುತ್ತಿದ್ದವು, ಆದರೆ ಕಳೆದ ವರ್ಷವೂ ಇದೇ ಸಮಯಕ್ಕೆ ಲಾಕ್‍ಡೌನ್ ಮಾಡಲಾಗಿತ್ತು, ಈ ವರ್ಷವೂ ಸಹ ಲಾಕ್‍ಡೌನ್ ಮಾಡಿ ಮುದ್ರಣಕಾರರನ್ನು ಕೊರೋನ ಎಂಬ ಮಹಾಮಾರಿ ಸಂಕಷ್ಟಕ್ಕೆ ದೂಡಿದೆ ಎಂದರು.

      ಆಫ್‍ಸೆಟ್, ಡಿಜಿಟಲ್, ಸ್ಕ್ರೀನ್ ಪ್ರಿಂಟಿಂಗ್ ಹಾಗೂ ಫ್ಲೆಕ್ಸ್ ಮುದ್ರಣ ಯಂತ್ರಗಳು ಬಣ್ಣ ಕಾಣದೆ ಹಲವು ತಿಂಗಳುಗಳೇ ಕಳೆದಿವೆ. ಉತ್ತಮ ಸೀಸನ್ ಮಾರ್ಚ್‍ನಿಂದ ಮೇ ತಿಂಗಳವರೆಗೆ ಹಗಲು-ರಾತ್ರಿ ಬಿಡುವಿಲ್ಲದೆ ದುಡಿಯುತ್ತಿದ್ದ ಮುದ್ರಣ ಕೆಲಸಗಾರರು ಈಗ ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಅನೇಕ ಮುದ್ರಣಕಾರರು ರಾಷ್ಟ್ರೀಕೃತ ಬ್ಯಾಂಕ್, ಸೌಹಾರ್ದ ಸಹಕಾರಿ ಬ್ಯಾಂಕ್ ಹಾಗೂ ಫೈನಾನ್ಸ್‍ಗಳಿಂದ ಸಾಲ ಪಡೆದು, ಕಂತು ಕಟ್ಟಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಮಳಿಗೆಗಳ ಬಾಡಿಗೆ, ಮನೆ ಬಾಡಿಗೆ, ಕಾರ್ಮಿಕರ ವೇತನ, ಸಾಲ ಮರುಪಾವತಿ ಮಾಡುವುದು ಮುದ್ರಣಕಾರರರಿಗೆ ದೊಡ್ಡ ಸವಾಲಾಗಿದೆ. ಕಷ್ಟಕರ ದಿನಗಳನ್ನು ಎದುರಿಸುತ್ತಿರುವ ಮುದ್ರಣ ಕ್ಷೇತ್ರದವರ ಕಡೆ ರಾಜ್ಯ ಸರ್ಕಾರ ಗಮನ ಹರಿಸಿ ಆರ್ಥಿಕ ನೆರವು ನೀಡಬೇಕಿದೆ ಎಂದರು.
ಡಾ.ದೇವಿಶೆಟ್ಟಿಯವರ ಪ್ರಕಾರ ಕೊರೋನ 3ನೇ ಅಲೆಯಿಂದ ರಾಜ್ಯದಲ್ಲಿ 3.50 ಲಕ್ಷ ಮಕ್ಕಳಿಗೆ ಅಪಾಯವಿದೆ ಎನ್ನಲಾಗಿದೆ. ಪೋಷಕರು ಆದಷ್ಟು ಮಕ್ಕಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.

      3ನೇ ಅಲೆಗೂ ಮುನ್ನ ರಾಜ್ಯದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದು, ಆ ಮಕ್ಕಳಿಗೆ ಪೌಷ್ಠಿಕ ನ್ಯೂಟ್ರೀಷಿಯನ್ ಆಹಾರ ನೀಡಿ ಪ್ರತಿ ತಿಂಗಳು ಮಕ್ಕಳ ಪಾಲನೆ ಮಾಡಲಾಗುತ್ತದೆ. ಈ ಎರಡೂ ಜಿಲ್ಲೆಗಳಿಂದ ಸುಮಾರು 1500ಕ್ಕೂ ಹೆಚ್ಚು ಮಕ್ಕಳನ್ನು ಅಲ್ಲಿನ ಜಿಲ್ಲಾಡಳಿತಗಳು ಗುರುತಿಸಿದ್ದು, ಅವರಿಗೆ ಪ್ರತಿನಿತ್ಯ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಇದೇ ರೀತಿ ಆರು ತಿಂಗಳ ಕಾಲ ಮಕ್ಕಳ ಪೋಷಣೆ ಜವಾಬ್ದಾರಿ ಹೊತ್ತಿದ್ದು, ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವವರೆಗೂ ಅವರಿಗೆ ಉತ್ತಮವಾದ ಆಹಾರ ನೀಡಲಾಗುತ್ತದೆ. ತದನಂತರ ಮುಂದಿನ ಆರು ತಿಂಗಳವರೆಗೂ ಈ ಕಾರ್ಯಕ್ರಮ ವಿಸ್ತರಣೆಯಾಗಲಿದೆ ಎಂದು ತಿಳಿಸಿದರು.
ಅತ್ಯಂತ ಅಪೌಷ್ಟಿಕದಿಂದ ಬಳಲುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲಿ ಎಂಬುದೇ ನಮ್ಮ ಉದ್ದೇಶವಾಗಿದೆ ಎಂದರು.

      ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ, ರಾಜ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಜಪಾನಂದಾಜೀ ಅವರಿಗೆ ಉತ್ತಮ ರಾಷ್ಟ್ರಪ್ರಶಸ್ತಿ ದೊರಕಲಿ ಎಂದು ಆಶಿಸಿದರು.
ಈಗಾಗಲೇ ಜಿಲ್ಲೆಯ 5 ತಾಲೂಕುಗಳಲ್ಲಿ ಪತ್ರಕರ್ತರಿಗೆ ದಿನಸಿ ಕಿಟ್‍ಗಳನ್ನು ಸ್ವಾಮೀಜಿಯವರು ವಿತರಿಸಿದ್ದು, ಉಳಿದ 5 ತಾಲ್ಲೂಕುಗಳಿಗೆ ಶೀಘ್ರದಲ್ಲೇ ಆಹಾರದ ಕಿಟ್‍ಗಳನ್ನು ವಿತರಿಸುವ ಭರವಸೆ ನೀಡಿದ್ದಾರೆ ಎಂದರು.

      ಸಂಕಷ್ಟದಲ್ಲಿರುವ ಜನರಿಗೆ ಮಾತ್ರವಲ್ಲದೆ ಮೂಕ ಪ್ರಾಣಿಗಳಿಗೂ ಆಹಾರ, ನೀರು ಕೊಡುವ ಕಾರ್ಯವನ್ನು ಮಾಡುತ್ತಿರುವ ಸ್ವಾಮಿ ಜಪಾನಂದಾಜೀ ಅವರು, ಜನುವಾರುಗಳಿಗೆ ನಿರಂತರ ಮೇವು ಕೊಡುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಮುದ್ರಣಕಾರರ ಸಂಘದ ಉಪಾಧ್ಯಕ್ಷ ಸಿ.ರಂಗನಾಥ್, ಕಾರ್ಯದರ್ಶಿ ಶಿವಸ್ವಾಮಿ, ಕೆಯುಡಬ್ಲುಜೆ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ್, ಪತ್ರಕರ್ತರಾದ ತೋ.ಸಿ.ಕೃಷ್ಣಮೂರ್ತಿ, ಎಸ್.ಹರೀಶ್ ಆಚಾರ್ಯ ಹಾಜರಿದ್ದರು.

(Visited 5 times, 1 visits today)