ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಂದ ವಿಶೇಷ ಮುತುವರ್ಜಿ, ಜಿಲ್ಲಾಡಳಿಕ್ಕೆ ಸದಾ ಮಾರ್ಗದರ್ಶನ, ಸೋಂಕಿನಿಂದ ಮಕ್ಕಳ ರಕ್ಷಣೆಗೆ ಪಣ

ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಣಕ್ಕೆ ತಂದಿರುವ ತುಮಕೂರು ಜಿಲ್ಲಾಡಳಿತ ಈಗ ಸಂಭಾವ್ಯ ಮೂರನೇ ಅಲೆ ನಿಯಂತ್ರಣಕ್ಕೆ ಸಕಲ ರೀತಿಯಲ್ಲಿಯೂ ಸನ್ನದ್ಧವಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತ ಮೂರನೇ ಅಲೆ ತಡೆಗೆ ವಿಶೇಷ ಯೋಜನೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಂಭಾವ್ಯ ಮೂರನೆ ಅಲೆಯ ಸೋಂಕಿನಿಂದ ಮಕ್ಕಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿದೆ.

ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮ ವಹಿಸಿರುವ ಜಿಲ್ಲಾಡಳಿತ ಈಗಾಗಲೇ ಮಕ್ಕಳ ರಕ್ಷಣೆ ಕುರಿತು ವೈದ್ಯರಿಗೆ ವಿಶೇಷ ಕಾರ್ಯಾಗಾರ ನಡೆಸಿದೆ. ಇದರ ಜೊತೆಗೆ ಆಮ್ಲಜನಕ, ಹಾಸಿಗೆ ಸೇರಿದಂತೆ ಚಿಕಿತ್ಸಾ ಸೌಲಭ್ಯಗಳ ಸಿದ್ಧತೆಗೆ ಸಂಪೂರ್ಣ ವ್ಯವಸ್ಥೆ ಮಾಡಿಕೊಂಡಿದೆ.

ವಿಶೇಷ ಕಾರ್ಯಾಗಾರ:

ಸಂಭಾವ್ಯ ಕೋವಿಡ್ ಮೂರನೇ ಅಲೆಯು ಮಕ್ಕಳನ್ನು ಕಾಡುವ ನಿರೀಕ್ಷೆ ಹಿನ್ನೆಲೆಯಲ್ಲಿ ಕೋವಿಡ್ ಮೂರನೆ ಅಲೆ ನಿಯಂತ್ರಣಕ್ಕೆ ಪೂರ್ವ ಸಿದ್ಧತೆ ಮತ್ತು ಮಕ್ಕಳ ರಕ್ಷಣೆ, ಆರೈಕೆ ಹಾಗೂ ಚಿಕಿತ್ಸೆ ಕುರಿತು ಜಿಲ್ಲೆಯಲ್ಲಿನ ಮಕ್ಕಳ ವೈದ್ಯರಿಗೆ ವಿಶೇಷ ಕಾರ್ಯಾಗಾರದ ಮೂಲಕ ಜಿಲ್ಲಾಡಳಿತ ಅರಿವು ಮೂಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವಿಶೇಷ ಕಾಳಜಿ ವಹಿಸಿ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞರಾದ ಡಾ. ಸುಪ್ರಜಾ ಚಂದ್ರಶೇಖರ್ ಮತ್ತು ಡಾ. ಗುರುದತ್ ಅವರನ್ನು ಕರೆಸಿ ನಡೆಸಿದ್ದ ಕಾರ್ಯಾಗಾರದಲ್ಲಿ ಮೂರನೇ ಅಲೆಯ ಸೋಂಕಿನಿಂದ ಮಕ್ಕಳನ್ನು ಮುಕ್ತರನ್ನಾಗಿಸುವ ಕುರಿತು ಜಿಲ್ಲೆಯ ಮಕ್ಕಳ ತಜ್ಞರಿಗೆ ಜಾಗೃತಿ ಮೂಡಿಸಲಾಯಿತು.

ಕಾರ್ಯಾಗಾರದಲ್ಲಿ ಬೆಂಗಳೂರು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸುಪ್ರಜಾ ಚಂದ್ರಶೇಖರ್, ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡುವ ಕ್ರಮ, ನಂತರದಲ್ಲಿ ಅವರ ಆರೈಕೆ, ಮನೆಯಲ್ಲಿ ಚಿಕಿತ್ಸೆ, ಆಸ್ಪತ್ರೆಯಲ್ಲಿ ಚಿಕಿತ್ಸೆ, ಹಾಸಿಗೆಗಳ ವ್ಯವಸ್ಥೆ ಸೇರಿದಂತೆ ಇತರೆ ಮಕ್ಕಳ ರಕ್ಷಣೆ ಕುರಿತು ಅರಿವು ಮೂಡಿಸಿದ್ದಾರೆ.

ಮತ್ತೊಬ್ಬ ಮಕ್ಕಳ ತಜ್ಞ ಡಾ.ಗುರುದತ್, ಮಕ್ಕಳ ಮಾಸ್ಕ್ ಬಳಕೆ, ಸೋಂಕಿನ ಲಕ್ಷಣಗಳು, ಲಕ್ಷಣಗಳ ಆಧಾರದ ಮೇಲೆ ಹಂತ ಹಂತವಾಗಿ ನೀಡುವ ಚಿಕಿತ್ಸೆ, ಕೊವೀಡ್‍ನ ವಿವಿಧ ಲಕ್ಷಣಗಳುಳ್ಳ ಪ್ರಕರಣಗಳಲ್ಲಿ ಹೇಗೆ ಚಿಕಿತ್ಸೆ ನೀಡಬೇಕು ಎಂಬುದು ಸೇರಿದಂತೆ ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣೆ, ನಂತರ ತಾಲೂಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುವ ಕ್ರಮ ಹೇಗೆ, ಗಂಭೀರ ಸ್ಥಿತಿ ತಲುಪಿದ ಮಕ್ಕಳಿಗೆ ಚಿಕಿತ್ಸೆ ನೀಡುವುದು ಹೇಗೆ ಎಂಬುದು ಸೇರಿದಂತೆ ಒಟ್ಟಾರೆ ಮಕ್ಕಳ ರಕ್ಷಣೆಗೆ ಹೇಗೆಲ್ಲಾ ಸಜ್ಜಾಗಬೇಕೆಂಬ ಬಗ್ಗೆ ವೈದ್ಯರಿಗೆ ಮಾಹಿತಿ ತುಂಬಿದ್ದಾರೆ.

ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ:

ಕೋವಿಡ್ ಮೂರನೇ ಅಲೆಯು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಬಾಧಿಸುವ ಸಾಧ್ಯತೆ ಇರುವುದರಿಂದ ಈ ಕುರಿತು ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ 6 ವರ್ಷದೊಳಗಿನ ಅಪೌಷ್ಠಿಕ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾಗೂ ವಿವಿಧ ಆರೋಗ್ಯದ ಸಮಸ್ಯೆ ಇರುವ 6 ರಿಂದ 16 ವರ್ಷದೊಳಗಿನ ಮಕ್ಕಳನ್ನು ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯಿಂದ ಗುರುತಿಸಿ, ಪೌಷ್ಠಿಕ/ ಆರೋಗ್ಯದ ಸಮಸ್ಯೆ ಇರುವ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅಂಗನವಾಡಿ ಕಾರ್ಯಕರ್ತೆ/ಶಾಲಾ ಶಿಕ್ಷಕರು/ಸ್ವಯಂ ಸೇವಕರ ಮುಖಾಂತರ ಪೌಷ್ಠಿಕ ಆರೋಗ್ಯದ ಅರಿವು ನೀಡಲು ಕ್ರಮ ಕೈಗೊಂಡಿದೆ. ಇದಲ್ಲದೆ, ಗುರುತಿಸಲಾದ ಮಕ್ಕಳಿಗೆ ಜಿಲ್ಲಾಡಳಿತ/ಸಂಘ ಸಂಸ್ಥೆಗಳ ನೆರವಿನಿಂದ ಸೂಕ್ಷ್ಮ ಪೋಷಕಾಂಶಗಳುಳ್ಳ ಪೌಷ್ಠಿಕ ಆಹಾರ ನೀಡಲು ನಿರ್ಧಾರ ತೆಗೆದುಕೊಂಡಿದೆ.

ಮಕ್ಕಳ ಕುಟುಂಬಗಳಿಗೆ ಮಕ್ಕಳು ಸೇವಿಸಬಹುದಾದ ಆಹಾರ/ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳು, ಸೋಂಕು ತಗುಲಿದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರಳವಾಗಿ ಅರ್ಥ ಮಾಡಿಕೊಳ್ಳುವ ಚಿತ್ರಗಳುಳ್ಳ ಆಕರ್ಷಕ ಬಣ್ಣದ ಕರಪತ್ರಗಳನ್ನು ಮುದ್ರಸಿ ವಿತರಿಸಲು, ಗುರುತಿಸಲಾದ ಅಪೌಷ್ಠಿಕ/ಆರೋಗ್ಯ ಸಮಸ್ಯೆ ಇರುವ ಮಕ್ಕಳ ವಿವರಗಳನ್ನು ಆಯಾ ಗ್ರಾಮ ಪಂಚಾಯತಿ/ವಾರ್ಡ್‍ಗಳ ಟಾಸ್ಕ್ ಫೋರ್ಸ್ ಸಮಿತಿಗಳಲ್ಲಿರಿಸಿ ಸದರಿ ಸಮಿತಿಯು ಮಕ್ಕಳ ಮನೆಗಳಿಗೆ ಭೇಟಿ ನೀಡಿ ನಿಗಾ ವಹಿಸಲು ಕ್ರಮ ಕೈಗೊಂಡಿದೆ.

ಅಪೌಷ್ಠಿಕ/ಆರೋಗ್ಯದ ಸಮಸ್ಯೆ ಇರುವ ಮಕ್ಕಳ ಪೋಷಕರು/ ಕುಟುಂಬದವರು ಆದ್ಯತೆಯ ಮೇರೆಗೆ ವ್ಯಾಕ್ಸಿನ್ ಪಡೆಯುವಂತೆ ಅಂಗನವಾಡಿ/ಆಶಾ ಕಾರ್ಯಕರ್ತೆ ಮತ್ತು ಶಾಲಾ ಶಿಕ್ಷಕರ ಮುಖಾಂತರ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತೀ ತಾಲ್ಲೂಕಿನಲ್ಲಿ ವಾರ್ ರೂಂ ತೆರೆದು ಮಕ್ಕಳ ತಜ್ಞ ವೈದ್ಯರಿಂದ ಅಗತ್ಯ ಸಮಾಲೋಚನೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲೂ ಸಿದ್ಧತೆ ಮಾಡಿಕೊಂಡಿದೆ.

ಮಾಧುಸ್ವಾಮಿ ಅವರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಗಾರ:

ತಜ್ಞರ ನಿರೀಕ್ಷೆಯಂತೆ ಕೋವಿಡ್ ಮೂರನೇ ಅಲೆ ಬಂದರೆ ನಿಯಂತ್ರಣ ಮಾಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮಾರ್ಗದರ್ಶದಲ್ಲಿ ಬೆಂಗಳೂರಿನ ತಜ್ಞ ವೈದ್ಯರಿಬ್ಬರಿಂದ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಸರ್ಕಾರಿ ಹಾಗೂ ಖಾಸಗಿ ಮಕ್ಕಳ ವೈದ್ಯರಿಗೆ ಅರಿವು ಮೂಡಿಸಲಾಯಿತು.
ಮಕ್ಕಳಿಗೆ ಸೋಂಕು ತಗುಲಿಸದರೆ ಎಷ್ಟು ಹಾಸಿಗೆ, ಐಸಿಯು ಸಿದ್ಧ ಮಾಡಿಕೊಳ್ಳಬೇಕು. ಕೋವಿಡ್‍ನ ವಿವಿಧ ಸೋಂಕಿನ ಲಕ್ಷಣಕ್ಕೆ ಯಾವ ರೀತಿ ಚಿಕಿತ್ಸೆ ಕೊಡಬೇಕು ಎಂಬುದರ ಕುರಿತು ತಿಳುವಳಿಕೆ ಮೂಡಿಸಲಾಗಿದೆ. ತಂತ್ರಜ್ಞರ ನಿರ್ದೇಶನದಂತೆ ಮೂರನೇ ಅಲೆಯನ್ನು ಯಾವುದೇ ತೊಂದರೆಯಿಲ್ಲದಂತೆ ನಿಭಾಯಿಸಲು ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

 

(Visited 10 times, 1 visits today)