ತುಮಕೂರು:

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ಸಲುವಾಗಿ ಗ್ರಾಮ ಕಾಯಕ ಮಿತ್ರ ಹುದ್ದೆಗೆ ಮಹಿಳೆಯರನ್ನೇ ಆಯ್ಕೆ ಮಾಡಲಾಗಿದ್ದು, ಅವರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮೊದಲನೇ ಸುತ್ತಿನ ಗ್ರಾಮ ಕಾಯಕ ಮಿತ್ರರ ಬುನಾದಿ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಬಯಸುವ ಗ್ರಾಮೀಣ ಜನರಿಂದ ನಮೂನೆ-1ರಲ್ಲಿ ಅರ್ಜಿಗಳನ್ನು ಸ್ವೀಕರಿಸುವುದು, ಸ್ವೀಕೃತಿ ನೀಡುವ ಮತ್ತು ಉದ್ಯೋಗ ಚೀಟಿ ದೊರಕಿಸಿಕೊಡುವಲ್ಲಿ ಗ್ರಾಮ ಕಾಯಕ ಮಿತ್ರರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಅಂತೆಯೇ ಕೂಲಿ ಕೆಲಸ ಬಯಸುವ ಕೂಲಿಕಾರರಿಂದ ನಮೂನೆ-6ರಲ್ಲಿ ಕೆಲಸದ ಬೇಡಿಕೆ ಸ್ವೀಕರಿಸುವುದರೊಂದಿಗೆ ಕಾಲಮಿತಿಯೊಳಗೆ ಕೂಲಿಕಾರರಿಗೆ ಕೆಲಸ ದೊರೆಯುವಂತೆ ಕಾಯಕ ಮಿತ್ರರು ನೋಡಿಕೊಳ್ಳಬೇಕು ಎಂದು ಸಿಇಓ ತಿಳಿಸಿದರು.
ನರೇಗಾ ಕಾಮಗಾರಿಗಳ ಕಡತ ಮತ್ತು 1 ರಿಂದ 7ರವರೆಗಿನ ಕಾಮಗಾರಿ ಕಡತಗಳ ನಿರ್ವಹಣೆ, ಕೂಲಿಕಾರರು ಕೆಲಸ ನಿರ್ವಹಿಸಿದ ವಿವರಗಳನ್ನು ಉದ್ಯೋಗ ಚೀಟಿಗಳಲ್ಲಿ ನಮೂದಿಸುವುದು, ಕಾಯಕ ಬಂಧುಗಳ ಮೇಲ್ವಿಚಾರಣೆ ಮಾಡುವಲ್ಲಿ ಗ್ರಾಮ ಕಾಯಕ ಮಿತ್ರರ ಪಾತ್ರ ಪ್ರಮುಖವಾಗಿದೆ. ಅವರ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕಾಯಕ ಮಿತ್ರರಿಗೆ ಸಿಇಓ ಕಿವಿಮಾತು ಹೇಳಿದರು.
ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಅಧಿಕ ಮಾನವ ದಿನಗಳನ್ನು ಸೃಜನೆ ಮಾಡಿರುವ 165 ಗ್ರಾಮ ಪಂಚಾಯಿತಿಗಳಿದ್ದು, ಅವುಗಳ ಪೈಕಿ ಮೊದಲನೇ ಹಂತದಲ್ಲಿ ಆಯ್ಕೆಯಾದ 85 ಮಂದಿಗೆ ಗ್ರಾಮ ಕಾಯಕ ಮಿತ್ರರಿಗೆ ಬುನಾದಿ ತರಬೇತಿ ನೀಡಿದ್ದು, 2ನೇ ಹಂತದಲ್ಲಿ ಉಳಿದ 80 ಮಂದಿ ಗ್ರಾಮ ಕಾಯಕ ಮಿತ್ರರಿಗೆ ತರಬೇತಿ ನೀಡಲಾಗುವುದು ಎಂದು ಸಿಇಓ ತಿಳಿಸಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಟಿ.ಕೆ.ರಮೇಶ್ ಮಾತನಾಡಿ, ಗ್ರಾಮ ಕಾಯಕ ಮಿತ್ರರು ನರೇಗಾ ಯೋಜನೆಯ ಸಮರ್ಪಕ ಅನುಷ್ಟಾನದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಅವರು ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮೀಣ ಜನರ ನಡುವಿನ ಸಂಪರ್ಕ ಸೇತುವೆಯಂತೆ ಕೆಲಸ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಅವುಗಳ ಬಗ್ಗೆ ಗ್ರಾಮೀಣ ಜನರಿಗೆ ಹೆಚ್ಚಿನ ಅರಿವು ಮೂಡಿಸುವಂತೆ ಕರೆ ನೀಡಿದ ಅವರು, ಮಳೆಗಾಲದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ನರೇಗಾ ಯೋಜನೆಯಡಿ ಕೃಷಿ ಹೊಂಡ, ಬದು ನಿರ್ಮಾಣ, ಬಚ್ಚಲುಗುಂಡಿ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ವರ್ಷದಲ್ಲಿ 100 ದಿನ ಉದ್ಯೋಗವನ್ನು ಪಡೆಯಲು ಅವಕಾಶವಿದೆ ಎಂದು ಸಾರ್ವಜನಿಕರಿಗೆ ತಿಳಿಸುವಂತೆ ಸೂಚಿಸಿದರು. ಜಿಲ್ಲಾ ಐಇಸಿ ಸಂಯೋಜಕ ಉಮೇಶ್ ಹುಲಿಕುಂಟೆ ಹಾಗೂ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕ ಕೆ.ಚಂದ್ರಣ್ಣ, ತಾಲ್ಲೂಕು ಐಇಸಿ ಸಂಯೋಜಕ ಟಿ.ಕೆ.ವಿನುತ್, ಶಿವಕುಮಾರ್, ರಾಘವೇಂದ್ರ, ಎಫ್‍ಇಎಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಸೋಮಕುಮಾರ್ ಅವರು ನರೇಗಾ ಯೋಜನೆ ಕುರಿತು ಗ್ರಾಮ ಕಾಯಕ ಬಂಧುಗಳಿಗೆ ತರಬೇತಿ ನೀಡಿದರು.

(Visited 18 times, 1 visits today)