ತುಮಕೂರು :

     ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಉದಾಸೀನ ಬೇಡ ಎಂದು ಮುಖ್ಯ ಚುನಾವಣಾ ವೀಕ್ಷಕರಾದ ಡಾ.ರವಿಕುಮಾರ್ ಸುರಪುರ ಚುನಾವಣಾ ವೀಕ್ಷಕರಿಗೆ ಸೂಚನೆ ನೀಡಿದರು.

      ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮಂಗಳವಾರ ಚುನಾವಣಾ ವೀಕ್ಷಕರಿಗಾಗಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯು ಎಂದಿನಂತೆ ನಡೆಯುವ ಸಾರ್ವತ್ರಿಕ ಚುನಾವಣಾ ಕ್ರಮಕ್ಕಿಂತ ಭಿನ್ನವಾಗಿದ್ದು, ವೀಕ್ಷಕರು ಉದಾಸೀನ ಮಾಡುವಂತಿಲ್ಲ ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಚುನಾವಣೆ ಪ್ರಕ್ರಿಯೆಗಳು ನಿಯಮಾನುಸಾರ ನಡೆಯಬೇಕಿದ್ದು, ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಈಗಾಗಲೇ ಪ್ರತೀ ಮತದಾನ ಕೇಂದ್ರಕ್ಕೆ ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ಮತಗಟ್ಟೆ ಅಧಿಕಾರಿಗಳ ಸಮನ್ವಯ-ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಿ ಎಂದು ಅವರು ತಿಳಿಸಿದರು.

     ಮತದಾನದ ದಿನ ಮತಾಧಿಕಾರದ ಗೌಪ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಸಾಂವಿಧಾನಿಕ ಕರ್ತವ್ಯವಾಗಿದ್ದು, ವೈಯಕ್ತಿಕ ಆಸಕ್ತಿಗಳಿಗೆ ಮನ್ನಣೆ ನೀಡುವಂತಿಲ್ಲ ಎಂದರಲ್ಲದೆ, ಅಂಧರು, ವಿಶೇಷ ಚೇತನರು, ಅಶಕ್ತರೊಂದಿಗೆ ಮತ ಚಲಾವಣೆಗೆ ಬರುವವರ ಕುರಿತ ಮಾಹಿತಿಯನ್ನು ಮೊದಲೇ ತಿಳಿಸಿರಬೇಕು. ಯಾವುದೇ ಅಹಿತಕರ ಘಟನೆ ನಡೆಯುವ ಮುನ್ಸೂಚನೆ ಸಿಕ್ಕ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

      ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಚುನಾವಣಾ ಸಂಬಂಧ ನೇಮಕಗೊಂಡಿರುವ ಸಿಬ್ಬಂದಿಗಳು ಮತದಾನದ ದಿನ ಕಡ್ಡಾಯ ಹಾಜರಾತಿಯೊಂದಿಗೆ ಮತದಾನ ಕೇಂದ್ರಗಳಲ್ಲಿ ಪೂರ್ಣ ಸಮಯದವರೆಗೂ ಕರ್ತವ್ಯ ನಿರ್ವಹಿಸಬೇಕು. ಆಯಾ ತಾಲೂಕು ಸಿಬ್ಬಂದಿಗಳಿಗೆ ಆಯಾ ತಾಲೂಕಿನಲ್ಲೇ ಕರ್ತವ್ಯಕ್ಕೆ ನೇಮಕ ಮಾಡಲಾಗಿದ್ದು, ಯಾವುದೇ ಗೊಂದಲಗಳಿಗೆ, ಪಕ್ಷಪಾತಕ್ಕೆ ಎಡೆ ಮಾಡಿಕೊಡದೆ ಪಾರದರ್ಶಕವಾಗಿ ಮತದಾನ ನಡೆಯುವಂತೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ ಚುನಾವಣಾ ನೀತಿ-ನಿಯಮಾನುಸಾರ ಶಿಸ್ತು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.

      ತರಬೇತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲ ಮಂಜುನಾಥ್ ಹಾಜರಿದ್ದರು.

(Visited 32 times, 1 visits today)