ತುಮಕೂರು :

      ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರಾದ ಅಶ್ವತ್ಥ್ ನಾರಾಯಣ್ ಅವರ ಉದ್ಧಟತನ ತೋರಿ, ವೇದಿಕೆಯಲ್ಲಿ ಗಂಡಸ್ತನದ ಬಗ್ಗೆ ಮಾತನಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಟೌನ್‍ಹಾಲ್ ವೃತ್ತದಲ್ಲಿ ಸಂಕ್ರಾಂತಿಯ ಎಳ್ಳು ಬೆಲ್ಲ, ಸಕ್ಕರೆ ಅಚ್ಚು ಹಂಚುವ ಮೂಲಕ ವಿನೂತವಾಗಿ ಬುಧವಾರ ಪ್ರತಿಭಟನೆ ನಡೆಸಿದರು.

      ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ದಿಕ್ಕಾರ ಕೂಗಿ ಘೋಷಣೆಗಳನ್ನು ಕೂಗಿದರು.

      ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು, ರಾಮನಗರದಲ್ಲಿ ನಡೆದ ಕೆಂಪೇಗೌಡರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೆ ಸ್ಥಳೀಯರನ್ನು ಮತ್ತು ದಲಿತರನ್ನು ಆಹ್ವಾನ ಮಾಡದೆ ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದು ಸಂಸದರ ತಪ್ಪೇ.? ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷವನ್ನು ಪ್ರಚಾರ ಮಾಡಲಿಕ್ಕೆ ವೇದಿಕೆಯನ್ನು ಉಪಯೋಗಿಸಿಕೊಂಡಿರುವ, ಶಿಕ್ಷಕರಿಗೆ ಮದರಿಯಾಗಿ, ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿರುವಂತಹ ಉನ್ನತವಾದ ಶಿಕ್ಷಣ ಸಚಿವರಿಗೆ ಇಂತಹ ದುರಹಂಕಾರದ ಪರಮಾವಧಿ ಸರಿಯಲ್ಲ, ಇವರ ವಿರುದ್ಧ ಇಡೀ ರಾಜ್ಯಾದಾದ್ಯಂತ ಅಶ್ವತ್ಥನಾರಾಯಣ ಅವರ ರಾಜೀನಾಮೆಗೆ ಒತ್ತಾಯ ಮಾಡುತ್ತಿದ್ದೇವೆ ಎಂದರು.

       ಸ್ಥಳೀಯ ಪಂಚಾಯಿತಿ ಕಟ್ಟೆ ಮೇಲೂ ಸಹ ಇಂತಹ ಕೆಟ್ಟ ಕೆಟ್ಟ ಭಾಷೆಯನ್ನು ಬಳಕೆ ಮಾಡುವುದಿಲ್ಲ, ಉನ್ನತ ಶಿಕ್ಷಣ ಖಾತೆಯಲ್ಲಿದ್ದು, ಅವರ ಘನತೆಗೆ ತಕ್ಕ ನಡೆದುಕೊಳ್ಳುವುದನ್ನು ಬಿಟ್ಟು, ಮುಖ್ಯಮಂತ್ರಿಗಳ ಎದುರೇ ಗಂಡಸ್ತನದ ಬಗ್ಗೆ ಮಾತನಾಡುವ ನಿಮ್ಮ ಸಂಸ್ಕೃತಿಗೆ ದಿಕ್ಕಾರ ಎಂದರು.

      ಕೂಡಲೇ ಸಂಸದರಾದ ಡಿ.ಕೆ.ಸುರೇಶ್ ಮತ್ತು ದಲಿತ ಮುಖಂಡರ ಕ್ಷಮೆ ಕೇಳಬೇಕು, ನೀವಾಗಿಯೇ ನಿಮ್ಮ ಖಾತೆಗೆ ರಾಜೀನಾಮೆ ನೀಡಬೇಕು, ಇಲ್ಲವಾದರೆ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದರು.

      ಇಂತಹ ದುರಂತಹಕಾರದ ಸಚಿವರ ವಿರುದ್ಧ ಮಹಿಳಾ ಕಾಂಗ್ರೆಸ್ ಘಟಕದಿಂದ ಇಂದು ಎಳ್ಳು ಬೆಲ್ಲ ಸಕ್ಕರೆ ಅಚ್ಚು ತಂದು ಬಿಜೆಪಿಯವರಿಗೆ ಕೊಟ್ಟು, ನಿಮಗೆ ಸಂಸ್ಕಾರ ಕೊಡಲಿ, ನಿಮ್ಮ ನಡವಳಿಕೆ ಚನ್ನಾಗಿರಲಿ, ನೀವು ಆಡುವಂತಹ ಭಾಷೆ, ಮಾತು ಉತ್ತಮವಾಗಿರಲಿ ಎಂದು ಹೇಳಿ ಅವರಿಗೆ ದಿಕ್ಕಾರ ಕೂಗಿ, ದೇವರು ಅವರಿಗೆ ಸದ್ಬುದ್ದಿ ಕೊಡಲಿ ಎಂದು ಹೇಳಿದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವರು ನಡೆದುಕೊಂಡ ರೀತಿಯನ್ನು ಖಂಡಿಸಿ ಇಂದು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಶಿಕ್ಷಣ ಸಚಿವರಿಗೆ ಸಂಸ್ಕøತಿಯೇ ಇಲ್ಲವಾಗಿದೆ. ಅವರು ಭಾಷಣದಲ್ಲಿ ಗಂಡಸ್ತನದ ಬಗ್ಗೆ ಮಾತನಾಡಬೇಕಾದರೆ ಅವರು ಮಂತ್ರಿನಾ ಅಥವಾ ಅನಾಗರೀಕರ ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸಬೇಕು ಎಂದರು.

      ಒಬ್ಬ ಮುಖ್ಯಮಂತ್ರಿ ಎದುರಿಗೇ ಆ ಭಾಷೆಯನ್ನು ಬಳಸಿದಾಗ ಮುಖ್ಯಮಂತ್ರಿಗಳು ಅದನ್ನು ತಡೆಯಲು ಸಮರ್ಥರಾ ಅಥವಾ ಅಸಮರ್ಥರಾ ಎಂಬುದು ಅವರೇ ನಿರ್ಧಾರಮಾಡಬೇಕು, ದಲಿತ ಮುಖಂಡರನ್ನು ಆಹ್ವಾನ ಮಾಡದೆ, ಸ್ಥಳೀಯ ನಾಯಕರುಗಳನ್ನು ಆಹ್ವಾನ ಮಾಡದೆಯೇ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಬೇಕಾದಾಗ ದಲಿತರ ಮುಖಂಡರು ಪ್ರಶ್ನಿಸಿದಾಗ ಅದನ್ನು ಸಹಿಸಿಕೊಳ್ಳಲಾಗದೆ ಗಂಡಸ್ತನ ಇದ್ದರೆ ಬನ್ನಿ ಎಂದು ಹೇಳುವ ಅಶ್ವತ್ಥನಾರಾಯಣ ಹೇಳಿಕೆ ಖಂಡನೀಯ, ಇಂದು ಕಾಂಗ್ರೆಸ್ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ತಾಲ್ಲೂಕು ಮತ್ತು ಬ್ಲಾಕ್‍ಗಳನ್ನು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

      ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್ ಮಾತನಾಡಿ, ಪೆಟ್ರೋಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಬಿಜೆಪಿಯವರು ಈ ರೀತಿಯ ಹೇಳಿಕೆಗಳನ್ನು ನೀಡಿ ಪ್ರಚೋದಿಸುತ್ತಿರುವುದು ಖಂಡನೀಯ ಎಂದರು.

       ಪ್ರತಿಭಟನೆಯಲ್ಲಿ ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಜೆ.ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋರಾಜು, ಮೆಹಬೂಬ್ ಪಾಷ, ಮುಖಂಡರಾದ ಚಂದ್ರಶೇಖರ ಗೌಡ, ರೇವಣ್ಣಸಿದ್ಧಯ್ಯ, ರೆಡ್ಡಿ ಚಿನ್ನಯಲ್ಲಪ್ಪ, ಅತೀಕ್ ಅಹಮ್ಮದ್, ಇಕ್ಬಾಲ್ ಅಹಮ್ಮದ್, ಸಿದ್ಧಲಿಂಗೇಗೌಡ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾರುದ್ರೇಶ್, ತರುಣೇಶ್, ಮಂಜುನಾಥ್, ಸಂಜೀವ್‍ಕುಮಾರ್, ವೈ.ಎನ್.ನಾಗರಾಜ್, ಸುಜಾತ, ಪ್ರಕಾಶ್, ಗೀತಮ್ಮ, ಶಾಬುದ್ದೀನ್, ಬುರಾನ್ ಸೇರಿದಂತೆ ಕಾಂಗ್ರೆಸ್‍ನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

(Visited 21 times, 1 visits today)