ತುಮಕೂರು :

        ರಾಜ್ಯದಲ್ಲಿ ಕೋವಿಡ್ ಹಾಗೂ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಿರುವ ಆಕ್ಸಿಜನ್ ಪ್ಲಾಂಟ್‍ಗಳನ್ನು ತುರ್ತಾಗಿ ಸಕ್ರಿಯಗೊಳಿಸಬೇಕೆಂದು ಕಾನೂನು ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಕಟ್ಟು-ನಿಟ್ಟಿನ ಸೂಚನೆ ನೀಡಿದರು.

        ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಕೋವಿಡ್ ಪಾಸಿಟೀವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ. ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್, ಬೆಡ್ ಪೂರೈಕೆ ಸೇರಿದಂತೆ ಪ್ರತಿ ಆಸ್ಪತ್ರೆಯಲ್ಲಿರುವ ವೆಂಟಿಲೇಟರ್‍ಗಳನ್ನು ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

      ಕೋವಿಡ್ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ನೀಡುವುದನ್ನು ವಿನಾ ಕಾರಣ ಮುಂದೂಡುವಂತಿಲ್ಲ. ಲಸಿಕೆ ಪಡೆಯಲು ಹಿಂಜರಿಯುವ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯ ಹಾಗೂ ಕೋವಿಡ್ ಪರಿಣಾಮಗಳ ಕುರಿತು ಅರಿವು ಮೂಡಿಸುವ ಮೂಲಕ ಲಸಿಕೆ ನೀಡಬೇಕು ಎಂದರಲ್ಲದೆ 15 ರಿಂದ 18 ವರ್ಷದ ಮಕ್ಕಳಿಗೆ ನೀಡುವ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳಲ್ಲಿ ಈಗಾಗಲೇ ಜಿಲ್ಲೆಯಲ್ಲಿ 49653 (ಶೇ.40) ಮಕ್ಕಳಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದು, ಬಾಕಿಯಿರುವ ಲಸಿಕೆಗಳನ್ನು ನಿಗಧಿತ ಅವಧಿಯಲ್ಲಿ ನೀಡುವ ಮೂಲಕ ಶೇ. 100ರಷ್ಟು ಗುರಿ ಸಾಧಿಸಬೇಕು ಎಂದರು.

        ಪಾವಗಡ ತಾಲೂಕಿನಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಶೇ.86 ಹಾಗೂ ಎರಡನೇ ಡೋಸ್ ಶೇ.69 ಹಾಗೂ ಸಿರಾ ತಾಲೂಕಿನಲ್ಲಿ ಎರಡನೇ ಡೋಸ್ ಶೇ.75ರಷ್ಟು ಮಾತ್ರ ಗುರಿ ಸಾಧಿಸಿದ್ದು, ನಿರೀಕ್ಷಿತ ಗುರಿಯನ್ನು ನಿಗಧಿತ ವೇಳೆಯಲ್ಲಿ ಸಾಧಿಸದೇ ಸಬೂಬು ಹೇಳುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

       ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಸ್ಥಾಪಿಸಬೇಕು. ಪಾಸಿಟೀವ್ ಪ್ರಕರಣಗಳು ಹೆಚ್ಚಾಗುವ ಪ್ರದೇಶಗಳಲ್ಲಿ ಶಾಲಾ-ಕಾಲೇಜಿನ ಕಟ್ಟಡಗಳನ್ನು ಕೋವಿಡ್ ಸೆಂಟರ್‍ಗಳನ್ನಾಗಿ ಮಾರ್ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಹೆಚ್ಚು ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ಸಮಾರಂಭ, ಸಂತೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರಿ ಹಾಗೂ ಖಾಸಗಿ ಬಸ್‍ಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆಯಾಗದಂತೆ ಹಾಗೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮ ಪಾಲನೆಯಲ್ಲಿ ವ್ಯತ್ಯಯವಾಗದಂತೆ ಕ್ರಮವಹಿಸಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

         ಜಿಲ್ಲೆಯಲ್ಲಿ ಲಭ್ಯವಿರುವ ಲ್ಯಾಬ್‍ಗಳನ್ನು ಬಳಸಿಕೊಂಡು ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವುದರೊಂದಿಗೆ ಪರೀಕ್ಷೆಗೊಳಪಟ್ಟವರ ವರದಿಗಳನ್ನು 24 ಗಂಟೆಯೊಳಗಾಗಿ ಸಂಬಂಧಪಟ್ಟವರಿಗೆ ತಲುಪಿಸಬೇಕು. ಪ್ರತಿದಿನ ಕನಿಷ್ಟ 6000 ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕು. ಎಲ್ಲಾ ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದರಲ್ಲದೆ ಸಾಧ್ಯವಾದಷ್ಟು ಸ್ಥಳೀಯವಾಗಿ ಚಿಕಿತ್ಸೆ ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ ಈವರೆಗೂ ಒಟ್ಟಾರೆಯಾಗಿ ಮೊದಲ ಡೋಸ್ ಶೇ.97 ಹಾಗೂ ಎರಡನೇ ಡೋಸ್ ಶೇ.78ರಷ್ಟು ಲಸಿಕಾಕರಣ ಪೂರ್ಣಗೊಂಡಿದ್ದು, ಶೀಘ್ರ ಲಸಿಕಾಕರಣ ಪೂರ್ಣಗೊಳಿಸಲಾಗುವುದು. ಸರ್ಕಾರದ ಆದೇಶದನ್ವಯ ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಗಧಿಯಾಗಿರುವ ಜಾತ್ರೆ, ಉತ್ಸವ ಸೇರಿದಂತೆ ಸಾರ್ವಜನಿಕ ಸಮಾರಂಭಗಳನ್ನು ಕೂಡಲೇ ರದ್ದುಗೊಳಿಸಬೇಕು. ಕೋವಿಡ್ ಕಂಟ್ರೋಲ್ ರೂಂ, ಸಹಾಯವಾಣಿ ಪುನರಾರಂಭಿಸಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಟಾಂ-ಟಾಂ ಹಾಗೂ ನಗರ ಪ್ರದೇಶಗಳಲ್ಲಿ ಅನೌನ್ಸ್‍ಮೆಂಟ್ ಮೂಲಕ ಜನಜಾಗೃತಿ ಮೂಡಿಸುವುದರ ಕುರಿತು ತಹಸೀಲ್ದಾರ್, ಇಓ ಸೇರಿದಂತೆ ಅಧಿಕಾರಿಗಳು ಜಾಗೃತರಾಗಿರಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 76 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 0.4 ಪಾಸಿಟಿವಿಟಿ ರೇಟ್ ದಾಖಲಾಗಿದೆ. ಈ ಪೈಕಿ 56 ಹೋಂ ಐಸೋಲೇಷನ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 6 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ.

       ಮುಂಜಾಗ್ರತಾ ಕ್ರಮವಾಗಿ ಐಸಿಯು ಬೆಡ್ಸ್, ವೆಂಟಿಲೇಟರ್ ಸಹಿತ ಆಕ್ಸಿಜನ್ ಬೆಡ್ಸ್ ಸೇರಿದಂತೆ ಒಟ್ಟು 600 ಬೆಡ್‍ಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪುರವಾಡ್, ಡಿಹೆಚ್‍ಒ ಡಾ: ನಾಗೇಂದ್ರಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 16 times, 1 visits today)