ತುಮಕೂರು :

      ಬಹುದಿನದ ಬೇಡಿಕೆಯಾಗಿದ್ದ ನಗರದ ಗುಬ್ಬಿಗೇಟ್‍ನಿಂದ ದಿಬ್ಬೂರು ಮೂಲಕ ಶಿರಾಗೇಟ್ ಸಂಪರ್ಕಿಸುವ ರಿಂಗ್‍ರಸ್ತೆ ನಗರದ ಜನರಿಗೆ ಉಪಯೋಗವಾಗಲಿದೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

      ರಿಂಗ್‍ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಮೂಲಕವೇ ಭಾರೀ ಗಾತ್ರದ ವಾಹನಗಳು ಓಡಾಡುವ ಪರಿಸ್ಥಿತಿ ಇದ್ದರಿಂದ ನಗರದೊಳಗೆ ವಾಹನ ಸಂಚಾರ ದಟ್ಟಣೆ ಆಗುವುದರಿಂದ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗೂ ಈ ರಿಂಗ್ ರಸ್ತೆ ಪರಿಹಾರ ದೊರಕಲಿದೆ ಎಂದು ಅಭಿಪ್ರಾಯಪಟ್ಟರು.

      ಬಹುದಿನಗಳಿಂದ ನೆನೆಗುಂದಿಗೆ ಬಿದ್ದಿದ್ದ ರಿಂಗ್ ರಸ್ತೆಯನ್ನು ತುಮಕೂರು ಅಭಿವೃದ್ಧಿ ಪ್ರಾಧಿಕಾರ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು 9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದು, ಸಿರಾ-ಮಧುಗಿರಿ ರಸ್ತೆಯಿಂದ, ಕುಣಿಗಲ್ ಕಡೆಯಿಂದ ಬರುವ ಭಾರೀ ವಾಹನಗಳು ನಗರವನ್ನು ಪ್ರವೇಶಿಸದೇ ಹೆದ್ದಾರಿಯ ಸಂಪರ್ಕವನ್ನು ಹೊಂದಬಹುದಾಗಿದೆ ಎಂದರು.
ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್ ಮಾತನಾಡಿ, ನಗರದ ಜನರ ಬಹುದಿನದ ಬೇಡಿಕೆಯಾಗಿದ್ದ ಈ ರಿಂಗ್‍ರಸ್ತೆಯನ್ನು ಅಭಿವೃದ್ಧಿಪಡಿಸಲು, 5 ಕೋಟಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದ ಅವರು, ಸರ್ಕಾರದ ವತಿಯಿಂದ ಹೆಚ್ಚುವರಿ ಅನುದಾನವನ್ನು ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

      ಟೂಡಾ ಅಧ್ಯಕ್ಷರ ಮನವಿ ಮೇರೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಒಳನಾಡು ಸಾರಿಗೆ ಸಚಿವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಈ ರಸ್ತೆಯ ಅಭಿವೃದ್ಧಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಮನವಿ ಮಾಡಿದರು, ಸಚಿವರ ಮನವಿಗೆ ಸ್ಪಂದಿಸಿದ ಅವರು ಅಗತ್ಯ ಅನುದಾನ ನೀಡುವ ಭರವಸೆ ನೀಡಿದರು.

     ಈ ವೇಳೆ ಸಂಸದ ಜಿ.ಎಸ್.ಬಸವರಾಜು, ನಗರ ಶಾಸಕ ಜ್ಯೋತಿಗಣೇಶ್, ಎಂಎಲ್ಸಿ ರಾಜೇಂದ್ರ, ಟೂಡ ಸದಸ್ಯರಾದ ಜೆ.ಜಗದೀಶ್, ಹನುಮಂತಪ್ಪ, ಶಿವಕುಮಾರ್, ವೀಣಾಕುಮಾರ್, ಮೇಯರ್ ಬಿ.ಜಿ.ಕೃಷ್ಣಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ಕುಮಾರ್, ನಯಾಜ್ ಅಹಮದ್, ನರಸಿಂಹರಾಜು, ಟೂಡಾ ಆಯುಕ್ತರಾದ ಯೋಗಾನಂದ್, ಮುಖಂಡರಾದ ಹೆಬ್ಬಾಕ ರವಿಶಂಕರ್, ಮನೋಹರ್‍ಗೌಡ, ಗುತ್ತಿಗೆದಾರ ನಾರಾಯಪ್ಪ ಟೂಡ ಎಇಇ ಬಡಪ್ಪ, ಪಿಡಬ್ಲ್ಯೂಡಿ ಎಂಜನಿಯರ್‍ಗಳಾದ ಇಇ ರಘುನಂದನ್, ಎಇಇ ಶಂಭು, ಎಇ ಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.

 

(Visited 10 times, 1 visits today)