ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ : ಲೋಪದೋಷಗಳಿಗೆ ಆಸ್ಪದ ನೀಡದಂತೆ ಜಿಲ್ಲಾಧಿಕಾರಿ ಎಚ್ಚರಿಕೆ

ತುಮಕೂರು:
ಸಾರ್ವಜನಿಕ ಶಿಕ್ಷಣ ಇಲಾಖೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಮೇ 21 ಹಾಗೂ 22, 2022ರಂದು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯು ಜಿಲ್ಲೆಯ 11 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಗೌಪ್ಯತೆ, ಸುರಕ್ಷತೆ ಮತ್ತು ವ್ಯವಸ್ಥಿತವಾಗಿ ಯಾವುದೇ ಸಣ್ಣ ಲೋಪದೋಷಕ್ಕೂ ಆಸ್ಪದ ನೀಡದಂತೆ ನಿಯಮಾನುಸಾರ ನಡೆಸಲು ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಎಲ್ಲಾ ಕೇಂದ್ರಗಳ ಪ್ರತಿಯೊಂದು ಪರೀಕ್ಷಾ ಆವರಣ ಮತ್ತು ಕೊಠಡಿಗಳಲ್ಲೂ ಸಹ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮತ್ತು ಎಲ್ಲಾ ಕೇಂದ್ರಗಳಲ್ಲೂ ಮೆಟಲ್ ಡಿಟೆಕ್ಟರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯದ ಉಸ್ತುವಾರಿಗಳನ್ನಾಗಿ ನೇಮಿಸುವಂತೆ ಮತ್ತು ಗ್ರೂಪ್-ಎ ಅಧಿಕಾರಿಗಳನ್ನು ಸಿಟ್ಟಿಂಗ್ ಸ್ಕ್ವಾಡ್‍ಗಳಾಗಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.
ಪರೀಕ್ಷಾರ್ಥಿಗಳಲ್ಲದ ಪರೀಕ್ಷಾ ಉಸ್ತುವಾರಿ ಇಲ್ಲದ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಅಥವಾ ಯಾವುದೇ ಅನಧೀಕೃತ ವ್ಯಕ್ತಿ ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶಿಸುವಂತಿಲ್ಲ. ನಿಯಮ ಉಲ್ಲಂಘಿಸಿ ಪ್ರವೇಶಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸೂಚಿಸಿದರು.
ಪರೀಕ್ಷಾ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ಸ್ಮಾರ್ಟ್ ಫೋನ್ ಅಥವಾ ಯಾವುದೇ ಮೊಬೈಲ್‍ಗಳನ್ನು ಬಳಸುವಂತಿಲ್ಲ ಎಂದು ತಿಳಿಸಿದ ಅವರು, ಅಗತ್ಯವಿದ್ದಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸುವಂತೆ ತಿಳಿಸಿದರು.
ಖಾಸಗೀ ಅನುದಾನಿತ/ ಅನುದಾನ ರಹಿತ ಸಂಸ್ಥೆಗಳ ಕಟ್ಟಡಗಳನ್ನು ಪರೀಕ್ಷಾ ಕೇಂದ್ರಗಳಾಗಿ ನಿಗಧಿಪಡಿಸಿದ್ದಲ್ಲಿ ಆ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳನ್ನು ಪರೀಕ್ಷಾ ಕಾರ್ಯದಿಂದ ಹೊರತುಪಡಿಸುವುದು ಮತ್ತು ಇವರಿಗೆ ಪರೀಕ್ಷೆಯ ಯಾವುದೇ ಕಾರ್ಯಕ್ಕೆ ನಿಯುಕ್ತಿಗೊಳಿಸತಕ್ಕದ್ದಲ್ಲ ಎಂದು ತಿಳಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷೆಯ ಸಂಬಂಧ ಸಂಪೂರ್ಣ ನಿಯಂತ್ರಣ ಸಾಧಿಸಿ ಕಾನೂನು ಸುವ್ಯವಸ್ಥೆಯೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಪರೀಕ್ಷಾ ಕೇಂದ್ರದ ಸುತ್ತಮುತ್ತ ಕನಿಷ್ಠ 200 ಮೀಟರ್ ವ್ಯಾಪ್ತಿಯೊಳಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುವುದು ಎಂದರು.
ಪರೀಕ್ಷಾ ಕೇಂದ್ರವು ಸಾಧಾರಣ, ಸೂಕ್ಷ್ಮ, ಅತೀಸೂಕ್ಷ್ಮ ಕೇಂದ್ರಗಳಾಗಿದ್ದಲ್ಲಿ ಅವುಗಳಿಗೆ ಅಗತ್ಯವಿರುವ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುವುದು ಮತ್ತು ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ಗಸ್ತುಪಡೆಯನ್ನು ನಿಯೋಜಿಸಿ ಯಾವುದೇ ಅಕ್ರಮ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ ವಾಡ್ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಈ ಮೇಲ್ಕಂಡ ವಿಷಯಗಳಲ್ಲದೆ ಗೌಪ್ಯ ಸಾಮಗ್ರಿಗಳನ್ನು ಸ್ವೀಕರಿಸುವ ಬಗ್ಗೆ, ಮಾರ್ಗಾಧಿಕಾರಿಗಳ ಕರ್ತವ್ಯದ ಬಗ್ಗೆ, ಪರೀಕ್ಷಾ ದಿನಗಳಂದು eóÉರಾಕ್ಸ್ ಅಂಗಡಿಗಳನ್ನು ಬಂದ್ ಮಾಡುವ ಬಗ್ಗೆ, ಪ್ರಶ್ನೆ ಪತ್ರಿಕೆಗಳಿಗೆ ಪೊಲೀಸ್ ಬೆಂಗಾವಲು ನೀಡುವ ಬಗ್ಗೆ, ಪರೀಕ್ಷಾ ಕಾರ್ಯಕ್ಕೆ ವಾಹನಗಳ ವ್ಯವಸ್ಥೆ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಡಿಡಿಪಿಐಗಳಾದ ನಂಜಯ್ಯ, ರೇವಣ್ಣ ಸಿದ್ದಪ್ಪ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ಮುನಿರೆಡ್ಡಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 2 times, 1 visits today)

Related posts