ಕೊರಟಗೆರೆ:
ಶಾಸಕರಾದ ಡಾ.ಜಿ.ಪರಮೇಶ್ವರ್ ಇಚ್ಚಾಶಕ್ತಿ ಕೊರತೆ ಮತ್ತು ಅಭಿವೃದ್ದಿ ನಿರ್ಲಕ್ಷದಿಂದ ಶಾಶ್ವತ ಯೋಜನೆಯ ಅನುಷ್ಠಾನವೇ ಸ್ಥಗೀತವಾಗಿ ಕೊರಟಗೆರೆ ಕ್ಷೇತ್ರವು ಅಭಿವೃದ್ದಿಯಿಂದ ಸಂಪೂರ್ಣವಾಗಿ ವಂಚಿತವಾಗಿದೆ ಎಂದು ಮಾಜಿ ತೆಂಗುನಾರು ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ವೆಂಕಟಾಚಲಯ್ಯ ಆರೋಪ ಮಾಡಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯಮಂಗಳಿ ಮತ್ತು ಸುವರ್ಣಮುಖಿ ನದಿಪಾತ್ರದ ರೈತರ ಶಾಶ್ವತ ನೀರಿಗಾಗಿ ಹೋರಾಟ ಸಮಿತಿ ಮತ್ತು ರೈತಸಂಘದಿಂದ ಇತ್ತೀಚಿಗೆ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಬಯಲುಸೀಮೆ ಕ್ಷೇತ್ರವಾದ ಕೊರಟಗೆರೆಗೆ ಈಗಾಗಲೇ ಹೇಮಾವತಿ ನೀರು ಮರೀಚಿಕೆ ಆಗಿದೆ. ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ನಿರ್ಲಕ್ಷದಿಂದ ಈಗ ಎತ್ತಿನಹೊಳೆ ಯೋಜನೆಯ ಬಫರ್‍ಡ್ಯಾಂ ಸಹ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತೀದೆ. ಮೇ.16ರಂದು ಕೊರಟಗೆರೆ ಪಟ್ಟಣದಲ್ಲಿ ಶಾಶ್ವತ ನೀರಿಗಾಗಿ ಸಾವಿರಾರು ರೈತರಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತಸಂಘದ ಕೊರಟಗೆರೆ ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು ಮಾತನಾಡಿ ಬಹುರ್ ಹುಕ್ಕುಂ ಕಮಿಟಿ ರಚನೆಯಾಗಿ ಈಗಾಗಲೇ 4ತಿಂಗಳು ಕಳೆದಿದೆ. ಕಳೆದ 4ವರ್ಷದಿಂದ ಒಬ್ಬರಿಗೂ ಸಾಗುವಳಿ ಚೀಟಿ ನೀಡಿಲ್ಲ. ಚುನಾವಣೆಯ ಉದ್ದೇಶಕ್ಕಾಗಿ ರೈತರಿಗೆ ಸಾಗುವಳಿ ಚೀಟಿ ನೀಡುತ್ತೀಲ್ವಾ. 2018ರಲ್ಲಿ ಅಂದಿನ ಶಾಸಕ ಸುಧಾಕರಲಾಲ್ ನೀಡಿದಂತಹ ಸಾಗುವಳಿ ಚೀಟಿಗೆ ಖಾತೆ ಮತ್ತು ಪಹಣಿ ಮಾಡದಿರುವ ಹಿಂದಿನ ಹುನ್ನಾರವೇನು ಎಂಬುದನ್ನು ರೈತರಿಗೆ ತಿಳಿಸಬೇಕಿದೆ ಎಂದು ಆಗ್ರಹ ಮಾಡಿದರು. ಕೊರಟಗೆರೆ ಕ್ಷೇತ್ರದ ನೀರಾವರಿ ಯೋಜನೆಗಾಗಿ ರೈತಾಪಿವರ್ಗ ಕಳೆದ 75ವರ್ಷದಿಂದ ಹೋರಾಟ ಮಾಡುತ್ತೀದ್ದಾರೆ. ಶಾಸಕರೇ ನಿಮ್ಮ ಕೆಲಸವು ಪತ್ರಿಕೆಯಲ್ಲಿ ಸುದ್ದಿಗೆ ಮಾತ್ರ ಸೀಮಿತವಾಗಿದೆ. ಮಾನ್ಯ ಶಾಸಕರೇ ನೀವೇ ಹೇಳಿದ್ದೀರಾ ರೈತರ ಪರವಾಗಿ ಇರುತ್ತೇನೆ ಎಂದು ಈಗ ಎಲ್ಲಿದ್ದೀರಾ ನೀವೇ ಉತ್ತರಿಸಿ. ಕೊರಟಗೆರೆ ಕ್ಷೇತ್ರಕ್ಕೆ ಶಾಶ್ವತವಾಗಿ ಯೋಜನೆ ತರುವಲ್ಲಿ ನೀವು ಸಂಪೂರ್ಣ ವಿಫಲ ಆಗಿದ್ದೀರಾ. ನೀರಾವರಿ ವಿಚಾರದಲ್ಲಿ ನಿರ್ಲಕ್ಷ ಮಾಡಬೇಡಿ ಎಂದು ಒತ್ತಾಯ ಮಾಡಿದರು.
ಜಯಮಂಗಳಿ ಮತ್ತು ಸುವರ್ಣಮುಖಿ ನದಿಪಾತ್ರದ ರೈತರ ಶಾಶ್ವತ ನೀರಿಗಾಗಿ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತಸಂಘದಿಂದ ಮೇ.16ರಂದು ಸೋಮವಾರ 10ಗಂಟೆಗೆ ಸಂತೆ ಮೈದಾನದಿಂದ ಕೊರಟಗೆರೆ ಕಂದಾಯ ಇಲಾಖೆಯ ವರೇಗೆ ಎತ್ತಿನಹೊಳೆ, ಹೇಮಾವತಿ ನೀರು ಹಾಗೂ ಸಾಗುವಳಿ ಚೀಟಿಗಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘ ಸುದ್ದಿಗೋಷ್ಟಿಯಲ್ಲಿ ಮನವಿ ಮಾಡಿದೆ.

(Visited 3 times, 1 visits today)