ತುಮಕೂರು:


ಸ್ಮಾರ್ಟ್‍ಸಿಟಿ ಲಿಮಿಟೆಡ್ ವತಿಯಿಂದ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸುಸಜ್ಜಿತವಾದ ಹಾಗೂ ನೈರ್ಮಲ್ಯಯುತವಾದ ಆಹಾರ ನೀಡಲು ರೂ. 65 ಲಕ್ಷ ವೆಚ್ಚದಲ್ಲಿ ಆಹಾರ ಮಾರಾಟದ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಈ ಮಳಿಗೆಗಳನ್ನು ಇಂದು ಸಂತೋಷದಿಂದ ಲೋಕಾರ್ಪಣೆಗೊಳಿಸುತ್ತಿದ್ದೇನೆ ಎಂದು ನಗರಾಭಿವೃದ್ಧಿ ಸಚಿವರಾದ ಬಿ.ಎ. ಬಸವರಾಜು(ಭೈರತಿ) ತಿಳಿಸಿದರು.
ತುಮಕೂರು ನಗರ ಅತ್ಯಾಧುನಿಕ ನಗರವಾಗಿ ಹೊರ ಹೊಮ್ಮುತ್ತಿದೆ, ಬೆಂಗಳೂರಿಗೆ ಹತ್ತಿರದಲ್ಲಿರುವ ಕಾರಣ ತುಮಕೂರು ನಗರಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸುಸುಜ್ಜಿತ ಆಧುನಿಕ ಬಸ್ ನಿಲ್ದಾಣ ಮತ್ತು ಸ್ಟೇಡಿಯಂ ಸೇರಿದಂತೆ ಇತರೆ ಪೂರ್ಣಗೊಂಡ ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಆಹಾರ ಮಳಿಗೆಗಳ ಫಲಾನುಭವಿಗಳು ಮಳಿಗೆಗಳನ್ನು ತಮ್ಮ ಮನೆಯ ರೀತಿಯಲ್ಲಿ ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಕರೆ ನೀಡಿದ ಸಚಿವರು ಮತ್ತು ಅಧಿಕಾರಿಗಳು ಈ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ನೀಡಲಿದ್ದು, ಈ ಮೂಲಕ ಫಲಾನುಭವಿಗಳು ತಮ್ಮ ಜೀವನೋಪಾಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯದೆಲ್ಲೆಡೆ ಸ್ಮಾರ್ಟ್‍ಸಿಟಿ ಯೋಜನೆಗಳ ಕಾಮಗಾರಿಗಳು ಶೇ. 85ರಷ್ಟು ಪೂರ್ಣಗೊಂಡಿದ್ದು, ಬಸ್‍ಸ್ಟ್ಯಾಂಡ್, ಕ್ರೀಡಾಂಗಣ ಮುಂತಾದ ದೊಡ್ಡ ಸಂಕೀರ್ಣಗಳ ಕಾಮಗಾರಿಗಳನ್ನು ಹೊರತು ಪಡಿಸಿದರೆ, ಉಳಿದಂತೆ ವಿದ್ಯುತ್ ದೀಪ, ರಸ್ತೆ, ಮುಂತಾದ ಬಹುತೇಕ ಯೋಜನೆಗಳು ಪೂರ್ಣಗೊಂಡಿವೆ ಎಂದರು.
ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಮಳೆ ಬಂದಂತಹ ಸಂದರ್ಭ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ ಗೊಳ್ಳುವಂತಹ ಪ್ರದೇಶಗಳನ್ನು ಗುರುತಿಸಿ ಶೀಘ್ರವೇ ನೀಲಿ ನಕ್ಷೆಯನ್ನು ಸಿದ್ಧಪಡಿಸಿ ಪರಿಹಾರ ಮಾರ್ಗೋಪಾಯಗಳನ್ನು ರಚಿಸುವಂತೆ ಪಾಲಿಕೆಯ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು. ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ, ತುಮಕೂರು ನಾಗರಿಕರಿಗೆ ಅನುಕೂಲವಾಗುವಂತೆ ಪರಿಸರ ಸ್ನೇಹಿ ಬೈಸಿಕಲ್ ಹಾಗೂ ಇ-ಬೈಕ್ ಸವಾರಿಯ ಅವಕಾಶವನ್ನು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕಲ್ಪಿಸಲಾಗಿದೆ. ನಗರದಲ್ಲಿ ಒಟ್ಟು 15 ಕಡೆ ನಿಲುಗಡೆ ಪ್ರದೇಶಗಳನ್ನು ಗುರುತಿಸಿ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 120 ಇ-ಬೈಕ್ ಹಾಗೂ 30 ಬೈಸಿಕಲ್‍ಗಳೊಂದಿಗೆ ಯೋಜನೆಯ ಅನುಷ್ಠಾನ ಕೈಗೊಳ್ಳಲಾಗಿದೆ ಎಂದರು.
ಪರಸರ ಸ್ನೇಹಿಯಾದ ಈ ಯೋಜನೆಯಿಂದ ತುಮಕೂರು ನಾಗರಿಕರಿಗೆ ಅನುಕೂಲವಾಗಲಿದ್ದು, ಬಸ್ ಮತ್ತು ರೈಲ್ವೆ ನಿಲ್ದಾಣಕ್ಕೆ ಸಂಚರಿಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅತೀ ಕಡಿಮೆ ದರದಲ್ಲಿ ತೆರಳಲು ಇವು ನೆರವಾಗಲಿದೆ. ಇ-ಬೈಕ್ ಸವಾರಿಯನ್ನು ಉಪಯೋಗಿಸಲು ಬಯಸುವವರು ನಿಗಧಿತ 15 ನಿಲ್ದಾಣಗಳಲ್ಲಿ ತಮ್ಮ ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆಯನ್ನು ನೀಡಿ ಹೆಸರನ್ನು ನೋಂದಾಯಿಸಬೇಕು. ಆನ್‍ಲೈನ್ ಅಪ್ಲಿಕೇಶನ್‍ನಲ್ಲಿ ಪೂರ್ವ ಪಾವತಿ ಮೂಲಕ ತಮಗೆ ಬೇಕಾದ ನಿಲ್ದಾಣದಿಂದ ಬೈಸಿಕಲ್ ಬೈಕ್‍ನ್ನು ಪಡೆದು ಉಪಯೋಗಿಸಬಹುದು ಎಂದರು.
ಮಂಜುನಾಥ ಸಮುದಾಯ ಭವನದ ಪಕ್ಕದಲ್ಲಿರುವ ಫುಡ್‍ಸ್ಟ್ರೀಟ್ ಬಹಳ ಕಿರಿದಾಗಿದ್ದು, ಇಲ್ಲಿ ಅತೀ ಹೆಚ್ಚು ವಾಹನ ದಟ್ಟಣೆ ಇದ್ದ ಕಾರಣ ಇಲ್ಲಿನ ಆಹಾರ ಮಾರಾಟಗಾರರನ್ನು ಗುರುತಿಸಿ, ನೋಂದಣಿ ಮಾಡಿಸಿ, ಅವರಿಗೆ ಕೋತಿತೋಪಿನಲ್ಲಿ ಸುಸಜ್ಜಿತವಾದ ಆಹಾರ ಮಳಿಗೆಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳಿಗೆಗಳನ್ನು ನಿರ್ಮಿಸಿ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪಾಲಿಕೆ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ, ಕಾರ್ಪೋರೇಟರ್‍ಗಳಾದ ರೂಪಾ ಶೆಟ್ಟಳ್ಳಿ ಹಾಗೂ ಶ್ರೀನಿವಾಸ್, ಸ್ಮಾರ್ಟ್ ಸಿಟಿ ಎಂ.ಡಿ. ರಂಗಸ್ವಾಮಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)