ಪರಿಚಯಸ್ಥರಿಂದಲೇ ಹೆಚ್ಚಿನ ಲೈಂಗಿಕ ದೌರ್ಜನ್ಯ!

ತುಮಕೂರು:

      ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಪರಿಚಯಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರೇ ಆಗಿರುತ್ತಾರೆ. ಇಂತಹ ಪ್ರಕರಣಗಳು ಮಕ್ಕಳ ಮೇಲೆ ಮಾನಸಿಕವಾಗಿ ಗಂಭೀರ ಪರಿಣಾಮ ಬೀರುತ್ತಿರುವುದು ಆಘಾತಕಾರಿ ಅಂಶವಾಗಿದ್ದು, ಇದಕ್ಕೆ ಪೋಷಕರ ನಿರ್ಲಕ್ಷ್ಯ ಹಾಗೂ ಮಕ್ಕಳಿಗೆ ಈ ಕುರಿತು ಅರಿವು ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ  ಪ್ರೊಬೇಷನರಿ ಅಧಿಕಾರಿ ಕವಿತಾ ತಿಳಿಸಿದರು.

      ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತುಮಕೂರು ಇವರ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ 2012 ಹಾಗೂ ಮಕ್ಕಳ ಮಾರಾಟ ಹಾಗೂ ಸಾಕಾಣಿಕೆ ಕುರಿತು ಮಾತನಾಡಿದ ಅವರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಪರಿಚಯಿಸಿದರು. ಬಾಲ್ಯ ವಿವಾಹ ಮತ್ತು ಪೋಕ್ಸೋ ಕಾಯ್ದೆ ಕುರಿತು ಉದಾಹರಣೆಗಳೊಂದಿಗೆ ವಿವರಿಸುತ್ತಾ ಬಾಲ್ಯ ವಿವಾಹ ನಿಷೇಧ ಕಾಯ್ದೆಯಲ್ಲಿ ಬಾಲ್ಯ ವಿವಾಹ ಮಾಡಿದರೆ ಯಾರೆಲ್ಲಾ ಶಿಕ್ಷೆಗಳಿಗೆ ಗುರಿಯಾಗುತ್ತಾರೆ ಹಾಗೂ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.

      ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆರೋಗ್ಯ ನಿರೀಕ್ಷಕ ಲಕ್ಷ್ಮೀಕಾಂತ್ ಮಾತನಾಡಿ ಮಕ್ಕಳ ದುರ್ಘಟನೆಗೆ ಒಳಗಾದಾಗ ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳಿಗೆ ಸೂಕ್ತ ಚಿಕಿತ್ಸೆ ಇರುವುದಿಲ್ಲ. ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದರು. ಮನಸ್ಸಿನ ಅಂತರಾಳದಲ್ಲಿ ನೋವು ಮಡುಗಟ್ಟಿರುತ್ತದೆ. ಕಾರಣ ಮಕ್ಕಳು ತೊಂದರೆಗೆ ಸಿಲುಕದಂತೆ ಎಚ್ಚರ ವಹಿಸುವುದು ಅವಶ್ಯಕ ಎಂದರು.

      ಪ್ರಾಂಶುಪಾಲರಾದ ಡಿ.ಎಂ.ನಾಗರಾಜು ಮಾತನಾಡಿ ವಿದ್ಯಾರ್ಥಿಗಳು ಕಾಲೇಜಿಗೆ ಬರುವಂತಹ ಸಂದರ್ಭದಲ್ಲಿ ಹಾಗೂ ಮರಳಿ ಮನೆಗಳಿಗೆ ಹೋಗುವ ಸಂದರ್ಭಗಳಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಮೊಬೈಲ್‍ಗಳನ್ನು ಅವಶ್ಯಕತೆಗನುಗುಣವಾಗಿ ಬಳಕೆ ಮಾಡಿಕೊಂಡು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸದುಪಯೋಗ ಮಾಡಿಕೊಳ್ಳಬೇಕು.

      ಸಮೂಹ ಮಾಧ್ಯಮಗಳಲ್ಲಿ ಬರುವಂತಹ ಹಲವಾರು ಚಲನಚಿತ್ರಗಳಲ್ಲಿ ಇರುವಂತಹ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೇ ಹೊರತು ಕೆಟ್ಟ ಅಂಶಗಳನ್ನು ಅಲ್ಲಿಯೇ ಬಿಡಬೇಕು. ಎಲ್ಲರೂ ಕೂಡ ದಿನನಿತ್ಯ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ ಎಂದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ 130 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾಜ ಕಾರ್ಯಕರ್ತ ವೈ.ಕೆ. ಕಿರಣ್ ನಿರೂಪಿಸಿ ಸ್ವಾಗತಿಸಿದರು.

(Visited 15 times, 1 visits today)

Related posts

Leave a Comment