ತುಮಕೂರು:


ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ, ಬದುಕು ಕಟ್ಟಿಕೊಳ್ಳುವಂತೆ ಪ್ರೇರೆಪಿಸುವ ವ್ಯಕ್ತಿಯೇ ನಿಜವಾದ ಶಿಕ್ಷಕ, ಅದೇ ನಿಜವಾದ ಶಿಕ್ಷಣ ಎಂದು ಚಿಂತಕ ಕೆ.ದೊರೈರಾಜು ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಭವನದಲ್ಲಿ ಶ್ರೀಸಿದ್ದಾರ್ಥ ಪಿಯು ಕಾಲೇಜು ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ನಿವೃತ್ತ ಪ್ರಾಂಶಪಾಲರಾದ ಎಂ.ರಾಜಯ್ಯ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ, ಬದುಕು ಕಟ್ಟಿಕೊಡುವಂತಹ ಮಾನವೀಯ ಸಂಬಂಧಗಳನ್ನು ಎಂ.ರಾಜಯ್ಯ ರೂಢಿಸಿಕೊಂಡಿದ್ದರು. ಇದರ ಫಲವಾಗಿಯೇ ಇಂದು ಅವರ ಶಿಷ್ಯ ವೃಂದ ಮತ್ತು ಸಹಪಾಠಿಗಳು ಸೇರಿ ಅಭಿನಂದಿಸುತ್ತಿರುವುದು ಅಪರೂಪದ ಕಾರ್ಯಕ್ರಮ ಎಂದರು.
ವರ್ತಮಾನದ ಎಚ್ಚರಿಕೆ ಇಲ್ಲದೆ, ಭವಿಷ್ಯ ಕಟ್ಟಲು ಸಾಧ್ಯವಿಲ್ಲ.ಹಾಗಾಗಿ ಶಿಕ್ಷಕರಾದವರಿಗೆ ವರ್ತಮಾನದ ತಲ್ಲಣಗಳಿಗೆ ಉತ್ತರ ಹುಡುಕುತ್ತಾ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಆಗಬೇಕಾಗಿದೆ. ನನ್ನ ಜೊತೆಗೆ, ನಾನು ಬದುಕುತ್ತಿರುವ ಸಮಾಜವೂ ಚನ್ನಾಗಿರಬೇಕು ಎಂಬ ಅಂಬೇಡ್ಕರ್ ಅವರ ತತ್ವವನ್ನು ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ.ಶೋಷಿತ ಸಮುದಾಯಗಳಿಗೆ, ಬಡತನದಿಂದ ಬದುಕುತ್ತಿರುವ ಯುವಜನರಿಗೆ ಶಿಕ್ಷಣವೇ ಬಂಡವಾಳ. ಆದರೆ ಶಿಕ್ಷಣ ಉದ್ಯಮಿಕರಣದಿಂದಾಗಿ ಬಡವರಿಗೆ ಶಿಕ್ಷಣ ಕೈಗೆಟುಕದಂತಾಗಿದೆ.ಇದರ ಬಗ್ಗೆಯೂ ಶಿಕ್ಷಕರಾದವರು ಆಲೋಚಿಸಬೇಕಿದೆ ಎಂದು ಕೆ.ದೊರೈರಾಜು ತಿಳಿಸಿದರು.
ಪಿಯು ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ,ತುಳಿತಕ್ಕೆ ಒಳಗಾದ ಜನಾಂಗದ ಮುಖಂಡರೆಲ್ಲಾ ಒಂದಾದರೆ ರಾಜರಾಗಬಹುದು ಎಂಬ ಹಿರಿಯರ ಮಾತನ್ನು ಎಂ.ರಾಜಯ್ಯ ನಿಜ ಮಾಡಿದ್ದಾರೆ. ಹಳ್ಳಿ ಹಳ್ಳಿಗಳನ್ನು ಸುತ್ತಿ, ಬಡ ಮಕ್ಕಳನ್ನು ಆಯ್ಕೆ ಮಾಡಿಕೊಂಡು, ಅವರಿಗೆ ಒಳ್ಳೆಯ ಶಿಕ್ಷಣದ ಜೊತೆಗೆ, ಆತ್ಮಸ್ಥೈರ್ಯ ತುಂಬಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿದ್ದಾರೆ. ಅವರು ಇತರೆ ಶಿಕ್ಷಕರಿಗೆ ಮಾದರಿ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಎಂ.ರಾಜಯ್ಯ ಮಾತನಾಡಿ,ನಾನು ಅನುಭವಿಸಿದ ಬಡತನ ಮತ್ತು ಅಪಮಾನಗಳು ಇಂದು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಹದ್ಯೋಗಿಗಳು, ಸಿಬ್ಬಂದಿಗಳ ಸಹಕಾರ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹದಿಂದಾಗಿ ಸಿದ್ದಾರ್ಥ ಕಾಲೇಜು ಫಲಿತಾಂಶದಲ್ಲಿ ಉಳಿದೆಲ್ಲಾ ಕಾಲೇಜುಗಳಿಗಿಂತ ಮುಂದೆ ಇರುವಂತೆ ಮಾಡಿವೆ.ಎಂದಿಗೂ ನಮ್ಮ ವಯುಕ್ತಿಕ ಭಾವನೆಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳದೆ,ಅವರ ಅರ್ಥಿಕ, ಸಾಮಾಜಿಕ ಹಿನ್ನೆಲೆಯಲ್ಲಿ ತಿಳಿದು,ಅವರಿಗೆ ಧೈರ್ಯ ತುಂಬುವ ಮೂಲಕ ಅವರಲ್ಲಿ ಏನ್ನನಾದರೂ ಸಾಧಿಸುವ ಹಂಬಲ ತುಂಬಿದ್ದೇನೆ.ನನ್ನ ಸ್ವಂತ ಕರ್ಚಿನಲ್ಲಿ ಸುಮಾರು 60 ಕಿ.ಮಿ.ಗಳವರೆಗೆ ಸುತ್ತಿ, ಹತ್ತಾರುಸಾವಿರ ಕರಪತ್ರ ಹಂಚಿ, ಬಡಮಕ್ಕಳಿಗೆ ಉಚಿತ ಶಿಕ್ಷಣದ ಭರವಸೆ ನೀಡಿ, ಕಾಲೇಜು ಸುಸೂತ್ರವಾಗಿ ನಡೆದುಕೊಂಡು ಹೋಗುವಂತೆ ಮಾಡಿದ್ದೇನೆ. ಇದರ ಫಲವೇ ಇಂದಿನ ಅಭಿನಂದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು.ವೇದಿಕೆಯಲ್ಲಿ ನಿವೃತ್ತಿ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಜಯರಾಮ್, ಮಹದೇವಪ್ಪ, ಗಂಗಾಧರ್, ಶ್ರೀಸಿದ್ದಾರ್ಥ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ನಾಗೇಶ್, ಟಿ.ಆರ್., ನಂದೀಶ್,ಎಂ., ಡಾ.ಜಿ.ಹರ್ಷದರ್, ಮೂರ್ತಿ, ಹೇಮಂತಕುಮಾರ್, ರವೀಂದ್ರ, ಜಿ.ಎಂ.ಮುರುಳಿ, ಸತೀಶ್.ಎಸ್.ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 2 times, 1 visits today)