ತುಮಕೂರು:


ಸಮರ್ಥನಂ ಅಂಗವಿಕಲರ ಸಂಸ್ಥೆ ವತಿಯಿಂದ ತುಮಕೂರು ಜಿಲ್ಲೆಯ ಯುವ ವಿಕಲಚೇತನರಿಗಾಗಿ ಜೂ.25 ರಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಉದ್ಯೋಗ ಅಧಿಕಾರಿ ಸತೀಶ್ ಕೆ. ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 18 ವರ್ಷದಿಂದ 35 ವರ್ಷದ ಒಳಗಿನ ಎಸ್.ಎಸ್.ಎಲ್.ಸಿ ಉತ್ತೀರ್ಣ, ಪಿ.ಯು.ಸಿ., ಡಿಪೆÇ್ಲಮಾ ಮತ್ತು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ವಿಕಲಚೇತನರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ದೇಶಾದ್ಯಂತ ಒಟ್ಟು 48 ಉದ್ಯೋಗ ಮೇಳಗಳನ್ನು ಆಯೋಜನೆ ಮಾಡುವ ಜೊತೆಗೆ ಕನಿಷ್ಟ 10 ಸಾವಿರ
ವಿಕಲಚೇತನರಿಗೆ ಉದ್ಯೋಗ ಕೊಡಿಸುವ ಉದ್ದೇಶವನ್ನು ಸಮರ್ಥನಂ ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಕೊವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕೆಲಸ ಕಳೆದುಕೊಂಡಿರುವ ವಿಕಲಚೇತನ (ಯುವಕರಿಗೆ) ಹಾಗೂ ವಿಕಲಚೇತನ ಉದ್ಯೋಗಾಕಾಂಕ್ಷಿಗಳಿಗೆ ಮರಳಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಉದ್ಯೋಗದಾತರ ಹಾಗೂ ಯುವ ವಿಕಲಚೇತನ ಉದ್ಯೋಗಾಕಾಂಕ್ಷಿಗಳ ನಡುವೆ ಅಮೂಲ್ಯವಾದ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ ಎಂದರು.
ಈಗಾಗಲೇ ಬೆಂಗಳೂರಿನಲ್ಲಿ ಮೂರು, ಮೈಸೂರು, ದಾವಣಗೆರೆ ಸೇರಿದಂತೆ ಒಟ್ಟು 41 ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗಿದೆ. ತುಮಕೂರು ರಾಜ್ಯದಲ್ಲಿಯೇ 3ನೇ ಅತಿದೊಡ್ಡ ಜಿಲ್ಲೆಯಾದ್ದರಿಂದ ಇಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಉದ್ಯೋಗ ಮೇಳಕ್ಕೆ 300 ರಿಂದ 400 ಉದ್ಯೋಗಾಕಾಂಕ್ಷಿಗಳು ಬರುವ ನಿರೀಕ್ಷೆಯಿದ್ದು, 15 ರಿಂದ 20 ಕಂಪನಿಗಳು ಭಾಗವಹಿಸುತ್ತಿವೆ. ಮುಖ್ಯವಾಗಿ ಬಿ.ಪಿ.ಓ. ರೀಟೆಲ್, ಐಟಿ, ಹಾಗೂ ಬ್ಯಾಂಕಿಂಗ್ ವಿಭಾಗದಲ್ಲಿನ ಕಂಪನಿಗಳು ಭಾಗವಹಿಸುತ್ತಿವೆ ಎಂದು ತಿಳಿಸಿದರು.
ಸಮರ್ಥನಂ ಸಂಸ್ಥೆಯು ಯುವ ವಿಕಲಚೇತನರ ಸಬಲೀಕರಣ ಮಾಡುವ ಉದ್ದೇಶದಿಂದ ಬಾಕ್ರ್ಲೇಸ್ ಸಹಕಾರದೊಂದಿಗೆ ಭಾರತ ದೇಶಾದ್ಯಂತ ಯುವ ವಿಕಲಚೇತನರಿಗಾಗಿ ಸರಣಿ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.
ಮೇಳದಲ್ಲಿ ಭಾಗವಹಿಸುವವರು ಬಯೋಡೇಟಾದ 3 ಪ್ರತಿಗಳು, 3 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು, ಶೈಕ್ಷಣಿಕ ಅರ್ಹತೆಯ ನಕಲು ಪ್ರತಿಗಳು, ಅಂಗವಿಕಲರ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ತರಬೇಕು, ತುಮಕೂರು ಜಿಲ್ಲಾಡಳಿತ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮತ್ತು ತುಮಕೂರು ವಿಶ್ವ ವಿದ್ಯಾನಿಲಯ ಈ ಉದ್ಯೋಗ ಮೇಳಕ್ಕೆ ಸಹಕಾರ ನೀಡುತ್ತಿವೆ ಎಂದು ಹೇಳಿದರು.
ಜೂ.25 ರಂದು ಬೆಳಿಗ್ಗೆ 9 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಉಚಿತ ನೊಂದಾಣಿ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಯವರೆಗೂ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.6364867818, 9480812121, 9449864693 ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅಂಧರ ಕ್ರಿಕೆಟ್ ತರಬೇತುದಾರ ಜವರೇಗೌಡ, ಸಮರ್ಥನಂ ಸಂಸ್ಥೆಯ ಮೈಸೂರು ವಿಭಾಗದ ಸಂಚಾಲಕ ಶಿವರಾಜ್ ಉಪಸ್ಥಿತರಿದ್ದರು.

(Visited 2 times, 1 visits today)