ತುಮಕೂರು :


2022-23ನೇ ಮುಂಗಾರು ಹಂಗಾಮಿನಲ್ಲಿ ಬೆಳೆದ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು, ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಈ ಆಪ್ ಬಳಸಿಕೊಂಡು ರೈತರು ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಛಾಯಾಚಿತ್ರ ಮತ್ತು ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಬೇಕಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ತಿಳಿಸಿದ್ದಾರೆ.
ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್‍ನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ತಮ್ಮ ಜಮೀನುಗಳ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ನಲ್ಲಿ ಕೂಡಲೇ ಅಪ್‍ಲೋಡ್ ಮಾಡಲು ಕೋರಿದೆ. ಬೆಳೆ ಸಮೀಕ್ಷೆ ಅಪ್‍ಲೋಡ್ ವಿವರವನ್ನು ಬೆಳೆ ವಿಸ್ತೀರ್ಣ, ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಸಾಲ, ಬೆಂಬಲ ಬೆಲೆ ಖರೀದಿ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಉಪಯೋಗಿಸಲಾಗುವುದು.
ರೈತರು ಬೆಳೆ ವಿವರಗಳನ್ನು ತಾವೇ ಸ್ವತಃ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ಸಹಾ ತಪ್ಪಿಸಬಹುದಾಗಿದ್ದು, ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಳಸಲು ಗ್ರಾಮಗಳಿಗೆ ನೇಮಕವಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 1 times, 1 visits today)