ತುಮಕೂರು


ಒಂದು ಕಾಲದಲ್ಲಿ ರಾಜಾಧಿರಾಜರಾಗಿ ಮೆರೆದ ಕ್ಷತ್ರಿಯ ಸಮಾಜ ಇಂದು ಮೀಸಲಾತಿಗಾಗಿ ಬೇಡುವಂತಹ ಸ್ಥಿತಿಗೆ ಬಂದಿದ್ದರೆ, ಅದಕ್ಕೆ ಸ್ವಾತಂತ್ರ ನಂತರದಲ್ಲಿ ನಮ್ಮ ಸಮಾಜದ ಇತಿಹಾಸ, ಪರಂಪರೆಯನ್ನು ಮರೆತಿದ್ದೇ ಕಾರಣ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟ(ರಿ)ರಾಜ್ಯಾಧ್ಯಕ್ಷ ಉದಯಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೊಲ್ಲಾಪುರದಮ್ಮ ಸಮುದಾಯಭವನದಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಆಯೋಜಿಸಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ರಾಜರಾಗಿ, ಸಾಮಂತರಾಗಿ, ಒಡೆಯರಾಗಿ ಆಳ್ವಿಕೆ ನಡೆಸಿದ ಕ್ಷತ್ರಿಯ ಸಮಾಜ ಪ್ರಜಾಪ್ರಭುತ್ವ ಬಂದು ಕೇವಲ 70-80ವರ್ಷದಲ್ಲಿ ದಯನೀಯ ಸ್ಥಿತಿಗೆ ಬಂದಿದ್ದೇವೆ.ನಮ್ಮ ತನವನ್ನೇ ಮರೆತಿದ್ದು ಮತ್ತು ನಮ್ಮೊಳಗಿನ ಉಪಪಂಗಡಗಳ ನಡುವಿನ ವೈಮನಸ್ಸು ಇಂದಿನ ಸ್ಥಿತಿಗೆ ಕಾರಣವಾಗಿದೆ ಎಂದರು.
ರಾಜ್ಯದಲ್ಲಿರುವ ಸುಮಾರು 36 ಕ್ಷತ್ರಿಯ ಉಪಪಂಗಡಗಳು ಒಂದುಗೂಡಿದರೆ ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ22ರಷ್ಟಿದೆ. ಅಂದರೆ 1.50 ಕೋಟಿ ಜನರಿದ್ದೇವೆ. ತಿಗಳ, ಅಗ್ನಿವಂಶ ತಿಗಳ, ಆಗ್ನಿಕುಲ, ಶಂಭುಕುಲ,ವೈನಿಕುಲ ಎಂದು ವಿಭಾಗವಾದಷ್ಟು ರಾಜಕೀಯ ಅಧಿಕಾರದಿಂದ ದೂರವೇ ಉಳಿಯುತ್ತಿವೆ. ನಾವು ಇಂದು ಅನುಭವಿಸುತ್ತಿರುವ ಅರ್ಥಿಕ, ಸಮಾಜಿಕ ಶೈಕ್ಷಣಿಕ ಸಮಸ್ಯೆಗೆ ರಾಜಕೀಯ ಅಧಿಕಾರವೇ ಪರಿಹಾರವಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಅಧಿಕಾರ ಪಡೆಯುವತ್ತ ನಾವೆಲ್ಲರೂ ಒಗ್ಗೂಡಬೇಕಾಗಿದೆ. ಉತ್ತರ ಭಾರತದಲ್ಲಿ ನಮ್ಮ ಪ್ರಾಭಲ್ಯ ಹೆಚ್ಚಿದೆ.ಹಾಗೆಯೇ ಮಹಾರಾಷ್ಟ್ರ, ತಮಿಳುನಾಡು, ಪಾಂಡುಚೇರಿಗಳಲ್ಲಿ ನಮ್ಮವರ ಸಂಖ್ಯೆ ಅಧಿಕವಾಗಿದೆ.ಈ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ, ಮುಂದಿನ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸಿ, ಬೃಹತ್ ಕ್ಷತ್ರಿಯ ಸಮಾವೇಶ ಆಯೋಜಿಸಲಾಗುತ್ತಿದೆ. ಈ ಸಂಬಂಧ ಇಡೀ ರಾಜ್ಯದ ಪ್ರವಾಸ ಕೈಗೊಂಡಿರುವುದಾಗಿ ಉದಯಸಿಂಗ್ ತಿಳಿಸಿದರು.
ವಕೀಲರಾದ ನಾರಾಯಣಸ್ವಾಮಿ ಮಾತನಾಡಿದರು.
ಹಿರಿಯರಾದ ಎಂ.ಆಂಜನೇಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಪ್ರೆಸ್ ರಾಜಣ್ಣ,ಯಜಮಾನರುಗಳಾದ ಹನುಮಂತರಾಜು, ಶಿವಕುಮಾರ್,ಮಂಜಣ್ಣ, ದಾಸೇಗೌಡ,ಕರ್ನಾಟಕ ಕ್ಷತ್ರಿಯ ಒಕ್ಕೂಟದ ತಾರಾಸಿಂಗ್,ಮುಖಂಡರಾದ ಟಿ.ಎಲ್.ಕುಂಭಯ್ಯ,ಎನ್.ಎಸ್.ಶಿವಣ್ಣ, ಟಿ.ಜಿ.ವಸಂತಕುಮಾರ್ ಭಾಗವಹಿಸಿದ್ದರು.

(Visited 1 times, 1 visits today)