ತುಮಕೂರು :

      ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಇವಿಪಿ)ಯು ನವೆಂಬರ್ 18ರವರೆಗೆ ನಡೆಯಲಿದ್ದು, ಮತದಾರರ ಪಟ್ಟಿಯಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್ ಕುಮಾರ್ ಅವರು ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗವು 2020ರ ಜನವರಿ 1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯು ಕಳೆದ ಸೆಪ್ಟೆಂಬರ್ 1ರಿಂದ ಆರಂಭಗೊಂಡಿದ್ದು, ನವೆಂಬರ್ 18ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬಿಎಲ್‍ಒಗಳು ಮನೆಮನೆಗೂ ತೆರಳಿ ಮತದಾರರ ಪಟ್ಟಿಯನ್ನು ಪರಿಶೀಲಿಸಲಿದ್ದಾರೆ. ಅಲ್ಲದೇ ಮತದಾರರೇ ಎನ್‍ವಿಎಸ್‍ಪಿ ಪೋರ್ಟಲ್ ಹಾಗೂ ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ಖುದ್ದು ಪರಿಶೀಲಿಸಬಹುದು ಎಂದರು.

      ಇವಿಪಿ ಕಾರ್ಯಕ್ರಮದಡಿ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಂಡಿರುವ ಮತದಾರರು, ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾನ ನೋಂದಣಾಧಿಕಾರಿ ಕಚೇರಿ, ಬಿಎಲ್‍ಒ ಹಾಗೂ ಸಿಎಸ್‍ಸಿ ಕೇಂದ್ರಗಳಲ್ಲಿ ಮತದಾರ ಪಟ್ಟಿಗಳನ್ನು ಪರಿಶೀಲಿಸಿಕೊಳ್ಳಬಹುದು. ಮತದಾರರ ಭಾವಚಿತ್ರಗಳು ಸರಿಯಾಗಿ ಮುದ್ರಣವಾಗದೇ ಇದ್ದಲ್ಲಿ ಭಾವಚಿತ್ರ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.

      ತಿದ್ದುಪಡಿ ಹಾಗೂ ಬಿಡತಕ್ಕವುಗಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅಲ್ಲದೇ ಜನವರಿ 2020ಕ್ಕೆ18 ವರ್ಷ ಪೂರ್ಣಗೊಳ್ಳಲಿರುವ ಯುವ ಮತದಾರರಿಂದ ನಮೂನೆ -6 ರಲ್ಲಿ ಅರ್ಜಿಗಳನ್ನು ಬಿಎಲ್‍ಒಗಳನ್ನು ಸಂಗ್ರಹಿಸಲಿದ್ದಾರೆ. ಇವಿಪಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿರುವ 22,09,900 ಮತದಾರರ ಪೈಕಿ 13,09,604 ಮತದಾರರು ತಮ್ಮ ಮಾಹಿತಿಯನ್ನು ಪರಿಶೀಲಿಸಿಕೊಂಡಿದ್ದು, ಇನ್ನು 9,00,296 ಮತದಾರರು ಪರಿಶೀಲಿಸಿಕೊಳ್ಳಲು ಬಾಕಿ ಇರುತ್ತದೆ. ಸುಮಾರು 61753 ತಿದ್ದುಪಡಿಗಳನ್ನು ಗುರ್ತಿಸಲಾಗಿರುತ್ತದೆ. ಒಟ್ಟಾರೆ ಜಿಲ್ಲೆಯ ಇವಿಪಿ ಪ್ರಗತಿಯಲ್ಲಿ ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

      ವಿಧಾನಪರಿಷತ್ ಶಾಸಕರಾದ ಆರ್. ಚೌಡರೆಡ್ಡಿ ತೂಪಲ್ಲಿ ಅವರ ಅವಧಿಯು ಜೂನ್ 2020ಕ್ಕೆ ಮುಕ್ತಾಯಗೊಳ್ಳಲಿದ್ದು, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ನವೆಂಬರ್ 1 2019ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿಯನ್ನು ಹೊಸದಾಗಿ ತಯಾರಿಸಲಾಗುತ್ತಿದೆ. ಅಕ್ಟೋಬರ್ 1ರಿಂದ ಇಲ್ಲಿಯವರೆಗೆ 2923 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ನವೆಂಬರ್ 6ರವರೆಗೆ ನಮೂನೆ-18ರಲ್ಲಿ 2016 ರಲ್ಲಿ ಪದವಿ ಪೂರೈಸಿರುವ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು.

      ನವೆಂಬರ್ 23ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಡಿಸೆಂಬರ್ 30 2019 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿ ಹಾಗೂ ನೊಂದಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸಿ ಹಾಗೂ ತಹಶಿಲ್ದಾರರು ಸಹಾಯಕ ಮತದಾರರ ನೊಂದಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದ ಅವರು ಮಹಾನಗರ ಪಾಲಿಕೆ ಹಾಗೂ ತಾಲ್ಲೂಕಿನಲ್ಲಿ ಗ್ರೇಡ್-2 ತಹಶೀಲ್ದಾರ್, ಉಪತಹಶೀಲ್ದಾರ್ ಹಾಗೂ 1 ಶಿರಸ್ತೆದಾರ ಅವರನ್ನು ನಿಯೋಜಿತ ಅಧಿಕಾರಿಗಳೆಂದು ನಿಗಧಿಪಡಿಸಲಾಗಿದೆ ಎಂದು ಅವರು ಹೇಳಿದರು.

      ಮಳೆಯಿಂದ ಜಿಲ್ಲೆಯಲ್ಲಿ 24 ಮನೆಗಳಿಗೆ ಭಾಗಶಃ ಹಾನಿ: ತುಮಕೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ 24 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಇಂಜಿನಿಯರ್‍ಗಳಿಂದ ನಷ್ಟ ಅಂದಾಜು ಮಾಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಇದೇ ಸಂದರ್ಭದಲ್ಲಿ ತಿಳಿಸಿದರು.
ಶಿರಾ ತಾಲ್ಲೂಕಿನಲ್ಲಿ 8 ಮನೆ, ತುರುವೇಕೆರೆ-6, ತಿಪಟೂರು-4, ಮಧುಗಿರಿ-4 ಹಾಗೂ ಚಿಕ್ಕನಾಯಕನಹಳ್ಳಿ-2 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಈ ಬಾರಿ ಜಿಲ್ಲೆಯಲ್ಲಿ ಶೇಕಡಾ 12 ರಷ್ಟು ಸರಾಸರಿ ವಾಡಿಕೆ ಮಳೆಗಿಂತ ಹೆಚ್ಚಾಗಿದೆ. ಮಂಗಳವಾರಕ್ಕೆ ಸರಾಸರಿ 30ಮಿಮೀ ಮಳೆಯಾಗಿದೆ ಎಂದು ಅವರು ಹೇಳಿದರು.
ಅಚ್ಚುಕಟ್ಟು ಪ್ರದೇಶಕ್ಕೆ ಹೇಮಾವತಿ ನೀರು : ಹೇಮಾವತಿ ನಾಲೆಯಿಂದ ಜಿಲ್ಲೆಯ 96 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುವುದು ರೈತರು ಬೆಳೆ ಬೆಳೆಯುವಂತೆ ಸೂಚಿಸಿ ಇದೇ ಮೊದಲ ಬಾರಿಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

       ಮೊದಲ ಹಂತವಾಗಿ ಶಿರಾದ ದೊಡ್ಡಕೆರೆ ಹೊರತುಪಡಿಸಿ ಕುಡಿಯುವ ನೀರಿನ ಕೆರೆಗಳಿಗೆ ಹೇಮಾವತಿ ನಾಲೆಯಿಂದ ಅರ್ಧದಷ್ಟು ನೀರನ್ನು ಪೂರೈಸಲಾಗಿದೆ. ಅಲ್ಲದೇ ಹೇಮಾವತಿಯ ಜಲಾಶಯದಲ್ಲಿ ಡ್ಯಾಂನಲ್ಲಿ 35ಟಿಎಂಸಿ ನೀರು ಸಂಗ್ರಹವಿದ್ದು, ಜಿಲ್ಲೆಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗುವುದು ಎಂದು ಅವರು ಹೇಳಿದರು.

       ಸಭೆಯಲ್ಲಿ ಅಪರಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಿರೀಶ್ ಮತ್ತಿತರರು ಹಾಜರಿದ್ದರು.

(Visited 29 times, 1 visits today)