ತುಮಕೂರು


ಬೆಳಗಾವಿ ಜಿಲ್ಲೆ ಅಥಣಿ ಶ್ರೀ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ(ಅಥಣೀಶ) ವಿರಚಿತ “ ಮಹಾತ್ಮರ ಚರಿತಾಮೃತ” ಗ್ರಂಥ(ಕೃತಿ)ವು ಪ್ರತೀ ಮನೆ, ಮಠ, ಶಾಲೆ, ಗ್ರಂಥಾಲಯದಲ್ಲಿಡಬೇಕಾದ ಅಮೂಲ್ಯ ಕೃತಿ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|| ಸಿ. ಸೋಮಶೇಖರ ಅಭಿಪ್ರಾಯಪಟ್ಟರು.
ಶ್ರೀ ಸಿದ್ದಗಂಗಾಮಠ ಶ್ರೀ ಉದ್ದಾನೇಶ್ವರ ಸ್ವಾಮಿ ಸಮುದಾಯಭವನದಲ್ಲಿಂದು ಆಯೋಜಿಸಿದ್ದ ಮಹಾತ್ಮರ ಚರಿತಾಮೃತ ಗ್ರಂಥದ ಐದನೇ ಮುದ್ರಣದ ಲೋಕಾರ್ಪಣೆ ಮತ್ತು ಗ್ರಂಥದ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಥಣೀಶ ಎಂಬ ಕಾವ್ಯನಾಮದಿಂದ ಪ್ರಭುಚನ್ನಬಸವ ಸ್ವಾಮೀಜಿಯವರು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥದ ಮೂಲಕ 216 ವಿಶ್ವ ವಿಭೂತಿಗಳನ್ನು ಜಗತ್ತಿಗೆ ಒಂದೆಡೆ ಪರಿಚಯಿಸುವ ಸಾಹಸದ ಕಾರ್ಯ ಮಾಡಿದ್ದಾರೆ. ವಿಶ್ವ ಮಾನವ ಪ್ರಜ್ಞೆಯನ್ನು ಸಮಾಜಕ್ಕೆ ಸಾರುವ ಕೃತಿ ಇದಾಗಿದ್ದು, ಸಿದ್ದರು, ಶಿವಯೋಗಿಗಳು, ಶರಣ-ಶರಣೆಯರು, ಅನುಭಾವಿಗಳು, ದಾರ್ಶನಿಕರು, ಅವಧೂತರು, ಸೂಫಿಗಳು, ಸಂತರು, ಆದಿಗುರುಗಳು, ಸದ್ಗುರುಗಳು, ರಾಜಗುರು, ಜಗದ್ಗುರುಗಳು, ಭಾವೈಕ್ಯತೆಯ ಸಾರಥಿಗಳು, ಗಾನಯೋಗಿಗಳು, ದಾಸರು, ತತ್ವಪದಕಾರರು, ಜ್ಞಾನಿಗಳು, ಮಹನೀಯರ ಜೀವನ ಕಥಾನಕಗಳನ್ನು ಒಳಗೊಂಡಿದೆ ಎಂದರಲ್ಲದೆ ಕೃತಿಯ ಕಥಾನಕದಲ್ಲಿರುವವರು ಸಮಾಜದ ಸಂದಿಗ್ದತೆಗಳನ್ನು, ಸವಾಲುಗಳನ್ನು, ಬದುಕಿನ ಸಂಘರ್ಷಗಳನ್ನು ಸಮರ್ಥವಾಗಿ ಎದುರಿಸಿ ಬದುಕಿನಲ್ಲಿ ಸಾರ್ಥಕ್ಯವನ್ನು ಪಡೆದುಕೊಂಡಂಥವರು. ಸಾಮಾನ್ಯರಂತೆ ಹುಟ್ಟಿದರೂ ವಿಶ್ವದ ಕಲ್ಯಾಣಕ್ಕಾಗಿ ಸತ್ತಮೇಲೂ ಜನಮಾನಸದಲ್ಲಿ ಬದುಕಿರುವಂತಹ ಮಹನೀಯರ ಚಿತ್ರಣವನ್ನು ಕೃತಿಯಲ್ಲಿ ನೀಡಲಾಗಿದೆ ಎಂದು ಬಣ್ಣಿಸಿದರು.
ಬೆಂಗಳೂರು ಸಂಸ್ಕøತ ವಿಶ್ವವಿದ್ಯಾಲಯ ವಿದ್ವಾಂಸರು-ವಿಶ್ರಾಂತ ಕುಲಪತಿ ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಕೃತಿಯ ಬಗ್ಗೆ ಉಪನ್ಯಾಸ ನೀಡುತ್ತಾ ನಮ್ಮನ್ನು ಕಾಡುವ ಅ-ಸುಖಗಳಿಂದ ಮುಕ್ತರಾಗಲು ಮಹಾತ್ಮರ ಚರಿತಾಮೃತ ಕೃತಿಯು ಸಾಧ್ಯಮಾಡಿಕೊಡುತ್ತದೆ. ದೇಹದ ಕಲ್ಮಶವನ್ನು ಹೊರಹಾಕಲು ಹಲವಾರು ವಿಧಾನಗಳಿವೆ. ಮನಸಿನ ಕಲ್ಮಶವನ್ನು ಹೊರಹಾಕಲು ಇಂತಹ ಸಾಹಿತ್ಯಕೃತಿಯಿಂದ ಮಾತ್ರ ಸಾಧ್ಯ. ಲೋಕದ ಜಂಜಾಟದಿಂದ ಹೊರಬಂದು ಆಧ್ಮಾತ್ಮದ ಅರಿವಿನ ಹಾದಿಯನ್ನು ತೋರುತ್ತದೆ. ಮಹಾತ್ಮರ ಚರಿತಾಮೃತ ಕೃತಿಯು ಕೇವಲ ಕೃತಿ ಮಾತ್ರವಲ್ಲದೆ ಆಧ್ಯಾತ್ಮದ ಕೃತಿಯಾಗಿದೆ. ಪ್ರಭುಚನ್ನಬಸವ ಸ್ವಾಮೀಜಿಯವರು ಶರಣರ ಹಾದಿಯಲ್ಲಿ ನಡೆದಿರುವುದರಿಂದ ಇಂತಹ ಮಹತ್ಕøತಿ ರಚಿಸಲು ಸಾಧ್ಯವಾಗಿದೆ ಎಂದು ತಿಳಿಸಿದರಲ್ಲದೆ ಮಹಮ್ಮದ್ ಪೈಗಂಬರ್, ಏಸುಕ್ರಿಸ್ತ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ, ಡಾ|| ಶಿವಮಕುಮಾರ ಸ್ವಾಮೀಜಿ ಸೇರಿದಂತೆ 216 ವಿಶ್ವಗುರುಗಳ ಕಥಾನಕಗಳನ್ನು ಹೊಂದಿರುವ 1000ಕ್ಕು ಹೆಚ್ಚಿನ ಪುಟಗಳ ಇಂತಹ ಕನ್ನಡ ಹೊತ್ತಗೆಯು ಭಾರತದಲ್ಲಿ ಎಲ್ಲಿಯೂ ಪ್ರಕಟವಾಗಿರುವ ನಿದರ್ಶನಗಳಿಲ್ಲವೆಂದು ಕೊಂಡಾಡಿದರು.
ಕೃತಿ ಕರ್ತೃ ಪ್ರಭು ಚನ್ನಬಸವ ಸ್ವಾಮೀಜಿಯವರು ಮಾತನಾಡಿ ಮಹಾತ್ಮರ ಚರಿತಾಮೃತ ಕೃತಿ ರಚಿಸಲು ಮಲ್ಲೇಪುರಂ ವೆಂಕಟೇಶ್ ಅವರೇ ಸ್ಫೂರ್ತಿ ಮತ್ತು ಪ್ರೇರಣೆ ಎಂದರಲ್ಲದೆ ಬದುಕಿನ ಭವಸಾಗರವನ್ನು ದಾಟಿಸಿದ 216 ಮಹನೀಯರ ರೇಖಾಚಿತ್ರ(ಖ್ಯಾತ ಕಲಾವಿದ ಶ್ರೀಕಾಂತ್ ಹೆಗ್ಗಡೆ ಚಿತ್ರಿಸಿದ)ದೊಂದಿಗೆ ಅವರ ಜೀವನಸಾಧನೆಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ಮುದ್ರಿಸಲಾಗಿದೆ. ಈವರೆಗೂ 32 ಪ್ರಶಸ್ತಿಗೆ ಭಾಜನವಾದ ಈ ಕೃತಿಯು 11 ಜಿಲ್ಲೆ ಮತ್ತು 60 ತಾಲೂಕು ಕೇಂದ್ರಗಳಲ್ಲಿ ಲೋಕಾರ್ಪಣೆ ಕಂಡಿದೆ. ಕೃತಿಯ 5ನೇ ಮುದ್ರಣದ ಲೋಕಾರ್ಪಣೆಯು ಶ್ರೀ ಸಿದ್ದಗಂಗಾ ಕ್ಷೇತ್ರದಲ್ಲಿ ಜರುಗುತ್ತಿರುವುದು ನನಗೆ ಅತೀವ ಸಂತೋಷದ ಸಂಗತಿ. ಕೃತಿಯನ್ನು ಪ್ರಕಟಿಸುವುದು-ಮಾರಾಟ ಮಾಡುವುದು ಸುಲಭವಲ್ಲದ ಈ ಕಾಲದಲ್ಲಿ ಪ್ರಥಮ ಲೋಕಾರ್ಪಣೆಗೊಂಡ 8 ತಿಂಗಳ ಅವಧಿಯಲ್ಲಿ 6000ಕ್ಕೂ ಹೆಚ್ಚಿನ ಪುಸ್ತಕಗಳು ಮಾರಾಟವಾಗಿವೆ. ಒಂದು ಪಂಥಕ್ಕೆ ಸೀಮಿತವಾಗಿಸದೆ ವಿಶ್ವವ್ಯಾಪಿ ಸಾಧಕರು, ಸಮಾಜ ಸುಧಾರಕರ ಕಥಾನಕಗಳನ್ನೊಂಡ ಕೃತಿಯನ್ನು ಆಗುಮಾಡಲು ಶ್ರಮಿಸಿದ ಎಲ್ಲರಿಗೂ ಅಭಿನಂ(ವಂ)ದನೆಗಳನ್ನು ಸಲ್ಲಿಸಿದರು.
ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡುತ್ತಾ ಬಹುಮುಖ ಪ್ರತಿಭೆಯುಳ್ಳ ಪ್ರಭು ಚನ್ನಬಸವ ಸ್ವಾಮೀಜಿಯವರು ರಚಿಸಿರುವ ಮಹಾತ್ಮರ ಚರಿತಾಮೃತ ಕೃತಿಯು 21ನೇ ಶತಮಾನದ ಕನ್ನಡದ ಆಧ್ಯಾತ್ಮದ ಕೃತಿಯೆಂದರೆ ತಪ್ಪಾಗಲಾರದು. ಕೃತಿಯ ಗಾತ್ರ ಮತ್ತು ತೂಕ ದೊಡ್ಡದಿರುವಂತೆ ಅದರಲ್ಲಿರುವ ಎಲ್ಲ ವಿಚಾರದ ಸಾರವೂ ಮಹತ್ವವಾದುದು. ಲೋಕಹಿತಕ್ಕಾಗಿ ತನ್ನನ್ನು ತಾನು ಸಮಾಜಕ್ಕೆ ಸಮರ್ಪಿಸಿ ಮಹಾತ್ಮರೆನಿಸಿಕೊಂಡವರ 216 ಕಥನಗಳಿರುವ ಈ ಕೃತಿಯು ಮುಂದಿನ ದಿನಗಳಲ್ಲಿ ವಿಸ್ತಾರವಾಗಬೇಕು. ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿರುವ ಮಹನೀಯರ ಕಥನಗಳನ್ನು ಈ ಕೃತಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾತ್ಮರ ಚರಿತಾಮೃತ ಕೃತಿಯ 5ನೇ ಮುದ್ರಣದ ಪ್ರತಿಯನ್ನು ಲೋಕಾರ್ಪಣೆಗೊಳಿಸಲಾಯಿತು. ಕೃತಿಯನ್ನು ಪ್ರಕಟಿಸಲು ಧನಸಹಾಯ ನೀಡಿದ ಜಮಖಂಡಿ ಸಿದ್ದಾಪುರದ ಶ್ರೀ ಪ್ರಭುಲಿಂಗೇಶ್ವರ ಶುಗರ್ ಮತ್ತು ಕೆಮಿಕಲ್ ಲಿ. ಸಂಸ್ಥಾಪಕ ಅಧ್ಯಕ್ಷ ನಾಡೋಜ ಶ್ರೀ ಜಗದೀಶ ಶಿವಯ್ಯ ಹಾಗೂ ಬೆಳಗಾವಿ ವಿಜಯ ಎಲುಬು ಮತ್ತು ಕೀಲುಗಳ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ|| ರವಿ ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಡಾ|| ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ವಿಜಯಪುರದ ವೀರೇಶ ವಾಲಿ ಅವರು “ಮತ್ತೆ ಹುಟ್ಟಿ ಬಾರಯ್ಯ ಸಿದ್ದಲಿಂಗೇಶ” ಎಂದು ಪ್ರಾರ್ಥನಾಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಸಂಗೀತಸ್ಪರ್ಶ ನೀಡಿದರು. ಶ್ರೀ ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ.ಎಸ್. ನಾಗರಾಜು ಸ್ವಾಗತಿಸಿದರು. ಕೋ.ರಂ. ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಿ.ಎಸ್. ದಯಾನಂದ ವಂದಿಸಿದರು. ವಿವಿಧ ಮಠಾಧೀಶರು, ಅಥಣಿ ಭಕ್ತರು, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(Visited 5 times, 1 visits today)