ತುಮಕೂರು :

      ತಾಲೂಕಿನ ಬುಗುಡನಹಳ್ಳಿ ಕೆರೆಯಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕೆಂದು ಸಂಸದ ಜಿ.ಎಸ್. ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಬುಗುಡನಹಳ್ಳಿ ಕೆರೆ ಪ್ರದೇಶಕ್ಕಿಂದು ಭೇಟಿ ನೀಡಿ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲಿಸಿದ ನಂತರ ಮಾತನಾಡಿದ ಅವರು ಬುಗುಡನಹಳ್ಳಿ ಕೆರೆಯ ನೀರು ಸಂಗ್ರಹ ಸಾಮಥ್ರ್ಯವು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಳೆಯ ದಾಖಲೆಗಳ ಪ್ರಕಾರ 240 ಎಂಸಿಎಫ್‍ಟಿ ಹಾಗೂ ಈಗಿನ ಸರ್ವೇ ಪ್ರಕಾರ 300 ಎಂಸಿಎಫ್‍ಟಿ, ಪಾಲಿಕೆ ದಾಖಲೆ ಪ್ರಕಾರ 308 ಎಂಸಿಎಫ್‍ಟಿ, ಹೇಮಾವತಿ ನಾಲಾ ಇಲಖೆ ಪ್ರಕಾರ 363 ಎಂಸಿಎಫ್‍ಟಿ ಇರುತ್ತದೆ. ಕೆರೆ ಸಾಮಥ್ರ್ಯದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮೂರು ಇಲಾಖೆಗಳು ಒದಗಿಸಿರುವ ಮಾಹಿತಿಯಲ್ಲಿ ವ್ಯತ್ಯಾಸವಿರುವುದು ಕಂಡು ಬಂದಿದೆ. ಹೇಮಾವತಿ ನಾಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಾಲಿಕೆಗಳ ನಡುವೆ ಸಮನ್ವಯತೆ ಇಲ್ಲದಿರುವುದರಿಂದ ಅಂಕಿ-ಅಂಶಗಳಲ್ಲಿ ಗೊಂದಲಗಳುಂಟಾಗಿವೆ. ಬರುವ ಬೇಸಿಗೆಯಲ್ಲಿ ನೀರು ಖಾಲಿಯಾದ ನಂತರ ಮತ್ತೊಮ್ಮೆ ಮೂರು ಇಲಾಖೆಗಳು ಒಡಗೂಡಿ ಹೊಸದಾಗಿ ಸರ್ವೆ ಕೈಗೊಂಡು ಕೆರೆ ಸಾಮಥ್ರ್ಯದ ಬಗ್ಗೆ ಪರಿಪೂರ್ಣ ದಾಖಲೆ ಒದಗಿಸುವವರೆಗೂ ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

      ನಗರದಲ್ಲಿರುವ ಗಂಗಸಂದ್ರ ಕೆರೆ, ಮರಳೂರು ಅಮಾನಿಕೆರೆಗೆ ಹೇಮಾತಿ ನೀರನ್ನು ತುಂಬಿಸಲು ಕಾರ್ಯಯೋಜನೆ ರೂಪಿಸಬೇಕು ಎಂದರಲ್ಲದೆ ಇಲಾಖಾಧಿಕಾರಿಗಳು ಯಾವುದೇ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಕೇಳಿದಾಗ ನೀಡುವ ಬೇಜವಾಬ್ದಾರಿ ಉತ್ತರವನ್ನು ನಾನು ಸಹಿಸುವುದಿಲ್ಲ. ಈ ಕಾರಣಕ್ಕಾಗಿಯೇ ಕುಡಿಯುವ ನೀರು ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಮಾಹಿತಿಯನ್ನು ಜಿಐಎಸ್ ಲೇಯರ್‍ವಾರು ಬೇಸ್‍ಮ್ಯಾಪ್-1ಗೆ ಅಪ್‍ಲೋಡ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದು ಎಂದು ಸ್ಪಷ್ಟವಾಗಿ ತಿಳಿಸಿದರು.

      ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಗರ ವ್ಯಾಪ್ತಿಯ ಮರಳೂರು ಅಮಾನಿಕೆರೆ, ಗಂಗಸಂದ್ರ, ಕುಪ್ಪೂರು, ದೇವರಾಯಪಟ್ಟಣ, ಹೊನ್ನೇನಳ್ಳಿ ಕೆರೆಗಳಿಂದ ನಗರಕ್ಕೆ 24×7 ನೀರು ಸರಬರಾಜು ಮಾಡುವ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಅದೇ ರೀತಿ ಬುಗುಡನಹಳ್ಳಿ ಕೆರೆ ಸೇರಿದಂತೆ ನಗರದ ಉಳಿದ ಕೆರೆಗಳ ಸರ್ವೇ ಕೈಗೊಂಡು ಮಾಹಿತಿಯನ್ನು ಬರುವ 15 ದಿನಗಳೊಳಗಾಗಿ ದಾಖಲೆ ಸಹಿತ ತಮಗೆ ಒದಗಿಸಬೇಕು. ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಮೊತ್ತ ಸೇರಿ ಶೇ.50ರಷ್ಟು ಮಾತ್ರ ಹಣ ಪಾವತಿ ಮಾಡಬೇಕು. ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಬಾಕಿ ಹಣವನ್ನು ಪಾವತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

       ಜಿಲ್ಲೆಯ ಯಾವುದಾದರೂ 5 ತಾಲೂಕುಗಳ ತಲಾ 1 ಗ್ರಾಮ ಪಂಚಾಯಿತಿಯನ್ನು ಸಂಸದರ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಆಯ್ಕೆ ಮಾಡಲು ಸರ್ಕಾರ ನಿರ್ದೇಶನ ನೀಡಿದೆ. ಆದರೆ ನಾನು ಜಿಲ್ಲೆಯ 8 ತಾಲೂಕಿನ ತಲಾ 1 ಗ್ರಾಮ ಪಂಚಾಯತಿಯನ್ನು ಸಂಸದರ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದೇನೆ. ತಾಲೂಕಿನ ಕೋರ ಗ್ರಾಮ ಪಂಚಾಯತಿ, ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿ ಸೇರಿದಂತೆ ತಿಪಟೂರು, ತುರುವೇಕೆರೆ ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ ಗ್ರಾಮ ಪಂಚಾಯತಿಯನ್ನು ಮಾದರಿ ಪಂಚಾಯತಿಯನ್ನಾಗಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

      ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಮಾತನಾಡಿ ಬುಗುಡನಹಳ್ಳಿ ಕೆರೆ ನೀರು ಸಂಗ್ರಹ ಸಾಮಥ್ರ್ಯಕ್ಕೆ ಸಂಬಂಧಿಸಿದಂತೆ ಹೇಮಾವತಿ ನಾಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ವಿಭಿನ್ನ ರೀತಿಯ ಅಂಕಿ-ಅಂಶಗಳಿದ್ದು, ಇದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹೂಳೆತ್ತುವ ಕಾಮಗಾರಿ ಅವಶ್ಯಕತೆ ಇದೆಯೋ ಇಲ್ಲವೋ ಎಂದು ಪರಿಶೀಲಿಸಲು ಮಾನ್ಯ ಸಂಸದರು ಬುಗುಡನಹಳ್ಳಿಗೆ ಇಂದು ಭೇಟಿ ನೀಡಿದ್ದಾರೆ. ಡಿಸಿಲ್ಟ್(ಹೂಳೆತ್ತುವ) ಕಾಮಗಾರಿ ಕೈಗೊಂಡಲ್ಲಿ ಮೂರು ಇಲಾಖೆಗಳು ಜಂಟಿಯಾಗಿ ಕೈಗೊಳ್ಳಬೇಕಾದ ಸರ್ವೇ ಮತ್ತಿತರ ಕಾರ್ಯಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ಮೂರು ಇಲಾಖೆಗಳು ಕೆರೆಯ ನೀರು ಸಂಗ್ರಹ ಸಾಮಥ್ರ್ಯದ ಬಗ್ಗೆ ಒಂದೇ ರೀತಿ ಅಂಕಿ-ಅಂಶ ನೀಡಿದಲ್ಲಿ ಹೇಮಾವತಿಯಿಂದ ಎಷ್ಟು ನೀರು ಹರಿದು ಬರುತ್ತಿದೆ? ಎಷ್ಟು ಸಂಗ್ರಹವಾಗಿದೆ? ನಗರಕ್ಕೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಅರಿಯಬಹುದು. ಕುಪ್ಪೂರು, ದೇವರಾಯಪಟ್ಟಣ, ಗಂಗಸಂದ್ರ ಸೇರಿದಂತೆ ನಗರದ ಇನ್ನಿತರ ಕೆರೆಗಳ ಹೂಳೆತ್ತುವ ಕಾರ್ಯದ ಅವಶ್ಯಕತೆಯಿದ್ದು, ದಿಶಾ ಸಮಿತಿಯ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ತುಮಕೂರು-ರಾಯದುರ್ಗ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ತುಮಕೂರು ಹಾಗೂ ಪಾವಗಡ ತಾಲೂಕಿನಲ್ಲಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಕೊರಟಗೆರೆ ಹಾಗೂ ಮಧುಗಿರಿ ತಾಲೂಕಿನಲ್ಲಿ ಭೂಸ್ವಾಧೀನ ಕಾರ್ಯ ಜಾರಿಯಲ್ಲಿದ್ದು, ಬರುವ ಮೂರು ತಿಂಗಳಲ್ಲಿ ಭೂಸ್ವಾಧೀನ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಅದೇ ರೀತಿ ತುಮಕೂರು-ದಾವಣಗೆರೆ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶಿರಾ ತಾಲೂಕಿನಲ್ಲಿ ಭೂಮಿ ಕಳೆದುಕೊಂಡವರ ಪುನರ್ವಸತಿಗಾಗಿ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಇನ್ನಾರು ತಿಂಗಳಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

(Visited 49 times, 1 visits today)