ತುಮಕೂರು:

      ನಗರದಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ ಆಟೋ ಚಾಲಕರ ಜೀವನಮಟ್ಟ ಸುಧಾರಿಸಲು ಆಟೋ ಚಾಲಕರ ಸಹಕಾರ ಸಂಘ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಹಾಗೂ ಆಟೋ ಚಾಲಕರಿಗೆ ತಿಳಿಸಿದರು.

      ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿಂದು ನಡೆದ ಆಟೋರೀಕ್ಷಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಅವರ ಆಧುನೀಕರಣ ಹಾಗೂ ಸಬಲೀಕರಣ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಸಹಕಾರ ಸಂಘ ಸ್ಥಾಪಿಸಿ ನಗರದಲ್ಲಿರುವ ಆರ್ಥಿಕವಾಗಿ ಹಿಂದುಳಿದಿರುವ ಆಟೋ ಚಾಲಕರನ್ನು ಈ ಸಂಘದಲ್ಲಿ ಮೊದಲ ಆದ್ಯತೆ ನೀಡಿ ಸದಸ್ಯತ್ವ ನೀಡಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದರು.

      ನಗರದಲ್ಲಿ ಚಾಲ್ತಿಯಲ್ಲಿರುವ ಆಟೋ ಚಾಲಕರ ಪರವಾನಗಿಯ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಹಕಾರ ಸಂಘಗಳ ಉಪ ನಿಭಂಧಕರ ಸಹಕಾರದೊಂದಿಗೆ ಸಹಕಾರ ಸಂಘವನ್ನು ಸ್ಥಾಪಿಸಿ ಇದರಿಂದ ಆಟೋ ಚಾಲಕರಿಗೆ ಪರಿಸರ ಸ್ನೇಹಿ ಆಟೋ ಖರೀದಿಸಲು ಹಾಗೂ ಸಾಲಸೌಲಭ್ಯ ಪಡೆಯಲು ಸಹಾಯವಾಗಲಿದೆ ಎಂದು ಅವರು ತಿಳಿಸಿದರು.

      ನಗರದಲ್ಲಿ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ತುಮಕೂರು ನಗರವನ್ನು ಪ್ರದೂಷಣ ರಹಿತ ಸ್ಮಾರ್ಟ್ ನಗರವನ್ನಾಗಿ ಮಾಡಲು ನಗರದಲ್ಲಿರುವ ಹೆಚ್ಚು ಹೊಗೆ ಸೂಸುವ ಹಳೆಯ ಆಟೋಗಳನ್ನು ಬದಲಾಯಿಸಬೇಕಿದೆ ಅಶಕ್ತರಿರುವವರು ಹಾಗೂ ಇ-ಆಟೋ ಖರೀದಿ ಮಾಡಲು ಆರ್ಥಿಕವಾಗಿ ಹಿಂದುಳಿದಿರುವ ಆಟೋ ಚಾಲಕರನ್ನು ಆಯ್ಕೆ ಮಾಡಿ ಮೊದಲ ಆದ್ಯತೆ ನೀಡಿ ಅಂತವರಿಗೆ ನೆರವಾಗುವುದು ಹಾಗೂ ಬಿಎಸ್-4, ಬಿಎಸ್-5 ಆಟೋ ಹೊಂದಿರುವ ಚಾಲಕರನ್ನು ಕೂಡ ಈ ಸಂಘದಲ್ಲಿ ಸದಸ್ಯತ್ವ ಕೊಡುವುದು ಈ ಸಂಘದ ಮುಖ್ಯ ಉದ್ದೇಶವಾಗಿರಬೇಕು ಎಂದರು.

      ಈಗಾಗಲೇ ಬೆಂಗಳೂರಿನಲ್ಲಿ ಆರಂಭವಾಗಿರುವ ನಮ್ಮ ಆಟೋ ಚಾಲಕರ ಸಹಕಾರ ಸಂಘವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದು, 2500 ಸದಸ್ಯರಿದ್ದಾರೆ. ಈ ಸಂಘದವರಿಂದ ಅಗತ್ಯ ಮಾಹಿತಿಯನ್ನು ಪಡೆದು ತುಮಕೂರಿನಲ್ಲಿ ಶೀಘ್ರವಾಗಿ ಸಂಘ ಸ್ಥಾಪನೆ ಮಾಡಬೇಕು ಎಂದು ಅವರು ತಿಳಿಸಿದರು.

      ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ನಗರದಲ್ಲಿರುವ ಆಟೋಗಳ ಮೀಟರನ್ನು ಶೀಘ್ರವೇ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.

      ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮಾತನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಇರುವ ಆಟೋ ಚಾಲಕರಿಗೆ ಸಹಕಾರ ಸಂಘಗಳ ಉಪ ನಿಭಂಧಕರು ಸಹಕಾರ ಸಂಘ ಸ್ಥಾಪಿಸಲು ನೆರವು ನೀಡುತ್ತಾರೆ ಅಲ್ಲದೇ ಆಟೋಗಳ ಮೇಲೆ ಜಾಹೀರಾತು ಪ್ರಕಟಿಸಲು ಸಹಕಾರ ನೀಡುತ್ತೇವೆ ಹಾಗೂ ಸಂಘದಲ್ಲಿ ಏನಾದರೂ ಗೊಂದಲಗಳುಂಟಾದಲ್ಲಿ ಬಗೆಹರಿಸುವ ಭರವಸೆಯನ್ನು ಅವರು ನೀಡಿದರು.

      ಇಸ್ರೋದ ಅಧಿಕಾರಿ ದಿವಾಕರ್ ಅವರು ಸಭೆಯಲ್ಲಿ ಮಾತನಾಡಿ ಆಟೋಗಳಿಗೆ ನಾವಿಕ್ ಡಿವೈಜ್ ಅಳವಡಿಸಿದರೆ ಆಟೋ ಚಾಲಕರಿಗೆ ಇದರಿಂದ ಅನೇಕ ಅನುಕೂಲತೆಗಳಿದ್ದು, ಆಟೋ ಎಲ್ಲಿ ಹಾಗೂ ಎಷ್ಟು ಕಿಲೋಮೀಟರ್ ಕ್ರಮಿಸಿದೆ ಎಂಬ ಸಂಪೂರ್ಣ ಮಾಹಿತಿಯು ಇದರಿಂದ ಲಭ್ಯವಾಗಲಿದೆ. ಜಾಹೀರಾತು ಏಜೆನ್ಸಿಗಳು ಇದನ್ನನುಸರಿಸಿ ಜಾಹೀರಾತು ನೀಡಲು ಮುಂದೆ ಬರುತ್ತವೆ ಅಲ್ಲದೆ ಇದರ ಬೆಲೆ 5 ಸಾವಿರ ರೂ. ಆಗಲಿದೆ ಎಂದರು.

      ಸಭೆಯಲ್ಲಿ VST mobility solutions ಕಂಪನಿಯವರು ಆಟೋ ಚಾಲಕರಿಗೆ ಮತ್ತು ಪ್ರಯಾಣಿಕರು ಅನುಕೂಲವಾಗುವ ಆನ್‍ಲೈನ್ ಪ್ಲಾಟ್‍ಫಾರಂ ತಂತ್ರಜ್ಞಾನದ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಜೆಲ್ಲೆಯಲ್ಲಿರುವ ವಿವಿಧ ಆಟೋಚಾಲಕ ಸಂಘಗಳು ಹಾಗೂ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

   ಸ್ಮಾರ್ಟ್‍ಸಿಟಿ ಕಾಮಗಾರಿಗಳ ವೀಕ್ಷಣೆ:

      ಸಭೆಯ ನಂತರ ತುಮಕೂರು ಸ್ಮಾರ್ಟ್‍ಸಿಟಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ವೀಕ್ಷಣೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನಡೆಸಿದರು. ನಗರದ ರೈಲು ನಿಲ್ದಾಣ, ಬಿ.ಎಚ್. ರಸ್ತೆ, ವಿವೇಕಾನಂದ ರಸ್ತೆ, ಎಂ.ಜಿ. ರಸ್ತೆ, ಹೊರಪೇಟೆ ರಸ್ತೆ, ಗುಂಚಿ ವೃತ್ತ, ಸರ್ಕಾರಿ ಬಸ್‍ನಿಲ್ದಾಣ, ಚರ್ಚ್ ಸರ್ಕಲ್, ಮಂಡಿಪೇಟೆ ಮುಖ್ಯರಸ್ತೆ, ಗುಬ್ಬಿಗೇಟ್, ಡಾ. ರಾಧಾಕೃಷ್ಣ ರಸ್ತೆ, ಗೆದ್ದಲಹಳ್ಳಿ ಸರ್ಕಲ್, ಉಪ್ಪಾರಹಳ್ಳಿ ಮುಖ್ಯರಸ್ತೆ, ಭದ್ರಮ್ಮ ಸರ್ಕಲ್‍ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿ ಗುತ್ತಿಗೆದಾರರು ಮತ್ತು ಅಭಿಯಂತರರಿಗೆ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಮತ್ತು ಉಪವಿಭಾಗಾಧಿಕಾರಿ ಶಿವಕುಮಾರ್ ಹಾಜರಿದ್ದರು.

(Visited 22 times, 1 visits today)