ತುಮಕೂರು


ಶಾಂತಿ, ಅಹಿಂಸೆಯ ಹರಿಕಾರರಾದ ಗಾಂಧೀಜಿಯವರ ಜೀವನವೇ ಒಂದು ಸಂದೇಶವಾಗಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಗೌರವ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ನೂರುನ್ನೀಸಾ ಹೇಳಿದರು.
ಇಲ್ಲಿನ ಅಶೋಕ ನಗರದ ನಾಗರಿಕ ಹಿತರಕ್ಷಣಾ ಸಮಿತಿ, ರೋಟರಿ ತುಮಕೂರು ಸೆಂಟ್ರಲ್, ಇನ್ನರ್ ವ್ಹೀಲ್ ಕ್ಲಬ್, ಸಿದ್ದಗಂಗಾ ವೈದ್ಯಕೀಯ ವಿದ್ಯಾಲಯ, ವಿನಾಯಕ ದಂತ ಚಿಕಿತ್ಸಾಲಯ, ಅಶ್ವಿನಿ ಆಯುರ್ವೇದ ಆಸ್ಪತ್ರೆ, ಚರಕ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯ, ಸಂವೃದ್ದಿ ನೇತ್ರಾಲಯ ಮತ್ತು ಚರ್ಮಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ 26ನೇ ವಾರ್ಡಿನ ಚಂದ್ರಶೇಖರ್ ಆಜಾದ್ ಪಾರ್ಕ್‍ನಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿಯವರ ಹೆಸರು ಭಾರತೀಯರ ಮನಸ್ಸಿನಲ್ಲಿ ಅಷ್ಟೇ ಅಲ್ಲದೆ ವಿಶ್ವದಲ್ಲಿ ಇರುವ ಅನೇಕ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ ಎಂದು ಅವರು ಹೇಳಿದರು.
ಹಿರಿಯ ನಾಗರಿಕರಿಗಾಗಿ ಸಮಗ್ರ ಕಾರ್ಯಕ್ರಮ, ರಾಷ್ಟ್ರೀಯ ವಯೋಶ್ರೀ ಯೋಜನೆ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಮತ್ತು ವಯೋಶ್ರೇಷ್ಠ ಸಮ್ಮಾನ್ ಸೇರಿದಂತೆ ಹಿರಿಯ ನಾಗರಿಕರಿಗಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸಲಾಗಿದೆ. ಈ ಯೋಜನೆಗಳು ಹಿರಿಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳು ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ 26ನೇ ವಾರ್ಡ್ ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ ಮಾತನಾಡಿ, ಆರೋಗ್ಯಕರ ಜೀವನಶೈಲಿ ರೋಗಗಳನ್ನು ತಡೆಯುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ. ಯೋಗಾಭ್ಯಾಸಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ದೃಢವಾಗಿ ಸಹಾಯ ಮಾಡುತ್ತದೆ ಎಂದರು. ಶಿಬಿರದಲ್ಲಿ 700ಹೆಚ್ಚು ಜನ ಪ್ರಯೋಜನ ಪಡೆದುಕೊಂಡರು,150 ಜನರಿಗೆ ಕನ್ನಡಕಗಳನ್ನು ನಾಗರಿಕ ವೇದಿಕೆ ಅಧ್ಯಕ್ಷರಾದ ಎಂ.ಕೆ. ವೆಂಕಟಸ್ವಾಮಿ ವಿತರಿಸಿದರು, ಸುಮಾರು 250ಕ್ಕೂ ಹೆಚ್ಚು ಜನರಿಗೆ ಮೂಳೆ ಸವೆತದ ತಪಾಸನೆ ನಡೆಸಲಾಯಿತು.
ಅಶೋಕನಗರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಎಂ.ಕೆ. ವೆಂಕಟಸ್ವಾಮಿ, ರೋಟರಿ ತುಮಕೂರು ಸೆಂಟ್ರಲ್ ಅಧ್ಯಕ್ಷೆ ಪ್ರಮೀಳ ಶಿವಕುಮಾರ್, ಮಂಗಳ, ನಾಗರತ್ನಮ್ಮ, ಸಿದ್ದಗಂಗಾ ಆಸ್ಪತ್ರೆಯ ಡಾ. ಎಸ್. ಪರಮೇಶ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮಂಜುಳ ಜಯಪ್ರಕಾಶ್, ಅರುಣ ರೆಡ್ಡಿ, ಲಲಿತಾ ಮಹದೇವಪ್ಪ, ಶಕುಂತಲಾ ದೊಡ್ಡಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ಉಮೇಶ್ ಸ್ವಾಗತಿಸಿದರು. ಡಾ. ಸಂಜಯ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸುಧೀಂದ್ರ ವಂದಿಸಿದರು.

(Visited 6 times, 1 visits today)