ಗುಬ್ಬಿ


ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಸರ್ಕಾರದ ಕಾರ್ಯಕ್ರಮ ಬಗ್ಗೆ ಬಿಡಿಯಾಗಿ ವಿವರಿಸುವ ಬದಲು ಎಲ್ಲಾ ಪಪಂ ಸದಸ್ಯರಿಗೆ ಅಜೆಂಡಾ ಜೊತೆಯಲ್ಲೇ ಸರ್ಕಾರದ ಆದೇಶ, ಸುತ್ತೋಲೆಯ ಪ್ರತಿಯನ್ನು ಕಳುಹಿಸಿಕೊಡಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಉಪಾಧ್ಯಕ್ಷೆ ಮಹಾಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಅಭಿವೃದ್ದಿ ಕೆಲಸದಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಸಹಭಾಗಿತ್ವ ಉತ್ತಮವಾಗಿರಬೇಕು. ಸಭೆಯಲ್ಲಿ ಬರೀ ಒಬ್ಬರಿಗೊಬ್ಬರು ದೂಷಿಸುವ ಬದಲು ಅಧಿಕಾರಿಗಳು ಪ್ರತಿ ಸದಸ್ಯರ ವಾರ್ಡ್ ಗಳ ಸಮಸ್ಯೆ ಅಳಿಸಿ ಹಾಗೆಯೇ ಸರ್ಕಾರದ ಕಾರ್ಯಕ್ರಮ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ದುಡಿಯಿರಿ ಎಂದು ಸಲಹೆ ನೀಡಿದರು.
ಅಭಿವೃದ್ದಿ ಕೆಲಸ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ. ಒಂದೊಂದು ವಾರ್ಡ್ ನಲ್ಲಿ ಒಂದು ಬಗೆಯ ಕೆಲಸ ನಡೆದಿದೆ. ಪಕ್ಷಾತೀತ ನಿಲುವು ಅಭಿವೃದ್ದಿ ವಿಚಾರದಲ್ಲಿ ಕಾಣಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು. ಕೋವಿಡ್ ನಂತರದಲ್ಲಿ ಪಟ್ಟಣ ಅಭಿವೃಧ್ದಿ ಕೆಲಸಗಳು ಚುರುಕುಗೊಳಿಸುವ ಅವಶ್ಯವಿದೆ. ವಿಶೇಷ ಅನುದಾನ ನಗರೋತ್ಥಾನ ಯೋಜನೆಯಡಿ ಬಂದ 14 ಕೋಟಿ ರೂಗಳನ್ನು ಅನುಮೋದನೆ ಮಾಡಬೇಕಿದೆ. ಈ ಜೊತೆಗೆ ಪ್ರತಿ ಸದಸ್ಯರ ಸಮಸ್ಯೆ ಆಲಿಸಬೇಕು ಎಂದು ಒತ್ತಾಯಿಸಿದ ಸದಸ್ಯರು ಸಿಬ್ಬಂದಿಗಳ ಹಲವು ಬೇಜವಾಬ್ದಾರಿತನ ಬಗ್ಗೆ ಒಕ್ಕೊರಲಿನಲ್ಲಿ ದೂರಿದರು.
ನೀರಿನ ಸಂಪರ್ಕದ ಪೈಪ್ ಲೈನ್ ಕೆಲಸಕ್ಕೆ ಮನಬಂದಂತೆ ಹಣ ಬಿಲ್ ಮಾಡಲಾಗಿದೆ. ಒಮ್ಮೆಲೆ 2.94 ಲಕ್ಷ ರೂಗಳನ್ನು ನೀಡಿದ್ದಾರೆ. ಹೀಗೆ ಹಲವು ಬಿಲ್ ನೀಡಲಾಗಿದೆ. ಒಂದು ನೆಲ್ಲಿ ಸಂಪರ್ಕ ಕಾಮಗಾರಿಗೆ ತಗಲುವ ವೆಚ್ಚ ತಿಳಿಯಬೇಕು. ಇಡೀ ಪಟ್ಟಣದಲ್ಲಿರುವ ಎಲ್ಲಾ ವಾರ್ಡ್ ನಲ್ಲಿ ಕೆಲಸ ಮಾಡಿದರೂ ಮೂರು ಲಕ್ಷ ರೂ ಆಗಬಹುದು. ಆದರೆ ಒಂದು ವಾರ್ಡ್ ನಲ್ಲೇ ಲಕ್ಷ ಲಕ್ಷ ಬಿಲ್ ಹೇಗೆ ಮಾಡಿದ್ದೀರಿ ಎಂದು ಸದಸ್ಯರಾದ ಸಿ. ಮೋಹನ್ ಮತ್ತು ಕುಮಾರ್ ಪ್ರಶ್ನಿಸಿ ಇದರ ಬಗ್ಗೆ ತನಿಖೆ ನಡೆಸಬೇಕು. ತಡವಾಗಿ ಮೀಟಿಂಗ್ ನಡೆದಿರುವುದು ಹಣ ಲಪಟಾಯಿಸಲು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಸ ವಿಲೇವಾರಿ ಘಟಕದಲ್ಲಿ ಕಸ ಹಾಕಿದ ನಂತರ ಕಸ ಮತ್ತೇ ಹಿಂದಕ್ಕೆ ಗುಡ್ಡೆ ಮಾಡಲು ಜೆಸಿಬಿ ಬಳಕೆ ಅಗತ್ಯವಿಲ್ಲ. ಮೊದಲೇ ನಿಗದಿ ಮಾಡಿದ ಜಾಗದಲ್ಲಿ ಕಸ ಸುರಿಸಿ ಜೊತೆಗೆ ಹಸಿ ಕಸ ಒಣ ಕಸ ವಿಂಗಡನೆ, ಗೊಬ್ಬರ ತಯಾರಿಕೆ ಪ್ರಕ್ರಿಯೆ ಕೂಡಲೇ ಕ್ರಮವಾಗಿ ನಡೆಸಿ ಎಂದು ಸದಸ್ಯರಾದ ಜಿ.ಆರ್.ಶಿವಕುಮಾರ್, ಮಹಮದ್ ಸಾದಿಕ್ ಸಲಹೆ ನೀಡಿ, ಪದೇ ಪದೇ ಕೆಟ್ಟು ಹೋಗುವ ಪಂಪ್ ಸೆಟ್ ವೈರಿಂಗ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯುಜಿ ಕೇಬಲ್ ಅಳವಡಿಕೆಗೆ ಮೊದಲಿಂದಲೂ ಸಲಹೆ ನೀಡಿದ್ದರೂ ನಿರ್ಲಕ್ಷ್ಯ ಕಂಡಿದೆ. ಕೂಡಲೇ ದುರಸ್ಥಿಗೆ ಮುಂದಾಗಿ ಎಂದು ಸೂಚಿಸಿ ಪೆÇೀನ್ ಪೇ, ಗೂಗಲ್ ಪೇ ಮೂಲಕ ತೆರಿಗೆ ಪಾವತಿ ಬಗ್ಗೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮಂಜುಳಾದೇವಿ, ಇಂಜಿನಿಯರ್ ಬಿಂದುಸಾರ, ಕಂದಾಯ ನಿರೀಕ್ಷಕ ನಾಗೇಶ್, ಯುಜಿಡಿ ಇಂಜಿನಿಯರ್ ಸೋಮಶೇಖರ್, ಸಿಬ್ಬಂದಿಗಳಾದ ಅಂತರಾಜು, ಪ್ರೀತಂ ಇತರರು ಇದ್ದರು.

(Visited 1 times, 1 visits today)