ತುಮಕೂರು:
ಪಿಎಸ್‍ಐ ನೇಮಕಾತಿ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದವರು ಮತ್ತೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲಿ. ಈ ಮರು ಪರೀಕ್ಷೆಗೆ ವಯೋಮಿತಿಯನ್ನು ಮಾನದಂಡವಾಗಿ ಪರಿಗಣಿಸುತ್ತಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದರಿಂದ ಈ ಆಯ್ಕೆ ಪ್ರಕ್ರಿಯೆಯನ್ನು ರದ್ದುಪಡಿಸಿದ್ದೇವೆಯೇ ಹೊರತು ಪರೀಕ್ಷೆಯನ್ನಲ್ಲ. ಹಾಗಾಗಿ ಮತ್ತೆ ಮರು ಪರೀಕ್ಷೆ ನಡೆಸಲಾಗುತ್ತಿದೆ.
ಅಭ್ಯರ್ಥಿಗಳು ಎದೆಗುಂದದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಬೇಕು. ಪ್ರಾಮಾಣಿಕತೆ ಇದ್ದಲ್ಲಿ ದೇವರು ಒಳ್ಳೆಯದು ಮಾಡುತ್ತಾನೆ ಎಂದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಪರೀಕ್ಷೆ ಬರೆದಿರುವ 54 ಸಾವಿರ ಮಂದಿಗೆ ಮಾತ್ರ ಮರು ಪರೀಕ್ಷೆ ನಡೆಯಲಿದೆ. ಅವರು ಮಾತ್ರ ಪರೀಕ್ಷೆ ಬರೆಯಬಹುದು ಎಂದು ಅವರು ಹೇಳಿದರು.
ಕಿಮ್ಮನೆ ರತ್ನಾಕರ ಅವರಂತಹ ಸಿಲ್ಲಿ ರಾಜಕಾರಣಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ರಾಜಕೀಯ ಲಾಭ ಪಡೆಯುವುದೇ ಉದ್ದೇಶವಾಗಿದೆ ಎಂದು ಟೀಕಿಸಿದರು.
ಕಿಮ್ಮನೆ ರತ್ನಾಕರ ಸಚಿವರಾಗಿದ್ದ ಅವಧಿಯಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲೂ ಅಕ್ರಮವಾಗಿತ್ತು. ಆಗ ಅವರು ಏನು ಮಾಡಿದರು, ಆರೇಳು ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರು. ಆದರೂ ಈ ರೀತಿಯ ಹೇಳಿಕೆ ನೀಡುವ ಅವರಿಗೆ ನಾಚಿಕೆಯಾಗಬೇಕು ಎಂದು ತಿರುಗೇಟು ನೀಡಿದರು.
ಬಸವನಗೌಡಪಾಟೀಲ್ ಯತ್ನಾಳ್ ಅವರು ಯಾವ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನವುದು ನನಗೆ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಲು ದೂರವಾಣಿ ಕರೆ ಮಾಡುತ್ತಿದ್ದೇನೆ. ಸಂಪರ್ಕಕ್ಕೆ ಸಿಗುತ್ತಿಲ್ಲ. ಸಹಜವಾಗಿ ರಾಜಕಾರಣದಲ್ಲಿ ಇದೆಲ್ಲಾ ಇದ್ದೇ ಇರುತ್ತದೆ.
ಒಂದು ವೇಳೆ ಅವರು ಆ ಹೇಳಿಕೆಯನ್ನು ಗಂಭೀರವಾಗಿ ನೀಡಿದ್ದರೆ ಅದು ಪಕ್ಷಕ್ಕೆ ಮುಜುಗರವಾಗುವಂತಹ ವಿಷಯವಾಗುತ್ತದೆ. ಪಕ್ಷದ ನಾಯಕರು ಈ ಬಗ್ಗೆ ಗಮನ ಹರಿಸಲಿದ್ದಾರೆ ಎಂದರು.

(Visited 1 times, 1 visits today)