ತುಮಕೂರು:
ಪೊಲೀಸರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಬೇಕಾದರೆ ಅವರು ಕೆಲಸ ಮಾಡುವ ಪೊಲೀಸ್ ಠಾಣೆ ಹಾಗೂ ವಾಸಿಸುವ ಮನೆ ಸುಸಜ್ಜಿತವಾಗಿರಬೇಕು, ಈ ನಿಟ್ಟಿನಲ್ಲಿ 200 ಕೋಟಿ ವೆಚ್ಚದಲ್ಲಿ 100 ಹೊಸ ಪೊಲೀಸ್ ಠಾಣೆ ಮತ್ತು 20 ಸಾವಿರ ಪೊಲೀಸರಿಗೆ ಎರಡು ಕೊಠಡಿಗಳುಳ್ಳ ನೂತನ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿದರು.
ಅವರಿಂದು ಸುಮಾರು 2.64 ಕೋಟಿ ರೂ.ಗಳ ವೆಚ್ಚದಲ್ಲಿ ಪೊಲೀಸ್ ಗೃಹ ನಿರ್ಮಾಣ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಶಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಕಚೇರಿ, ಶಿರಾ ಸಿಪಿಐ ಹಾಗೂ ಪೊಲೀಸ್ ಠಾಣೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.
ಎಫ್‍ಎಸ್‍ಎಲ್ ಲ್ಯಾಬ್‍ಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ವಿಧಿ-ವಿಜ್ಞಾನ ಪ್ರಯೋಗಾಲಯಗಳನ್ನು ಹೆಚ್ಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ವರ್ಷವೇ ಬಳ್ಳಾರಿ, ಹುಬ್ಬಳ್ಳಿ ಜಿಲ್ಲೆಯಲ್ಲಿ ಎಫ್‍ಎಸ್‍ಎಲ್ ಪ್ರಯೋಗಾಲಯ ಮತ್ತು ಮುಂದಿನ ಹಂತದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು ಎಂದ ಸಚಿವರು, ಸಂಚಾರಿ ಎಫ್‍ಎಸ್‍ಎಲ್‍ಗಳನ್ನೂ ಸಹ ಆರಂಭಿಸಲಾಗಿದ್ದು, ಪ್ರಕರಣ ನಡೆದ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸ್ಯಾಂಪಲ್ ಪಡೆದು ವರದಿ ನೀಡಲು ಪೊಲೀಸರಿಗೆ ಸಂಚಾರಿ ಲ್ಯಾಬ್‍ಗಳು ಸಹಕಾರಿಯಾಗಲಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ವಿಭಾಗವನ್ನು ಬಲಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಸಹ ಸೈಬರ್ ಠಾಣೆಯನ್ನು ಪ್ರಾರಂಭಿಸಲಾಗಿದ್ದು, ಅಗತ್ಯವಿರುವ ಉಪಕರಣಗಳನ್ನು ನೀಡಲಾಗಿದೆ. ಸೈಬರ್ ಅಪರಾಧ ನಡೆದ 2 ಗಂಟೆಯೊಳಗಾಗಿ ಠಾಣೆಗೆ ತಿಳಿಸಿದಲ್ಲಿ ಅಕೌಂಟ್‍ಗಳನ್ನು ಫ್ರೀeóï ಮಾಡಿಸುವ ಅವಕಾಶವಿರುತ್ತದೆ ಈ ನಿಟ್ಟಿನಲ್ಲಿ ಬ್ಯಾಂಕ್‍ಗಳು ಸಹಕಾರ ನೀಡಲಿವೆ ಎಂದು ತಿಳಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳೂ ಸಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ಕನಿಷ್ಠ 3 ಮಹಿಳಾ ಕಾನ್ಸೇಬಲ್ ಇರುವಂತೆ ನೋಡಿಕೊಳ್ಳಲಾಗುವುದು ಮತ್ತು ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಹ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ. ಈ ಠಾಣೆಗಳಲ್ಲಿ ವಿಶೇಷವಾಗಿ ಮಹಿಳೆಯರ ಮೇಲಿನ ತನಿಖಾ ಪ್ರಕರಣಗಳು ತ್ವರಿತಗತಿಯಲ್ಲಿ ನಡೆಯಲಿವೆ ಎಂದರು.
ಇಂದು ಇಲಾಖೆಯಲ್ಲಿ 1 ಲಕ್ಷ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಇಲಾಖೆಯಲ್ಲಿ 35 ಸಾವಿರ ಹುದ್ದೆಗಳು ಖಾಲಿ ಇದ್ದು, ಇಂದು ಈ ಸಂಖ್ಯೆ 12 ಸಾವಿರಕ್ಕೆ ಇಳಿದಿದೆ. ಪ್ರತಿ ವರ್ಷ ಕಾನ್ಸೇಬಲ್ ಮತ್ತು ಸಬ್‍ಇನ್ಸ್‍ಪೆಕ್ಟರ್ ನೇಮಕಾತಿಗಳು ನಡೆಯುತ್ತಿದ್ದು, ಸಾರ್ವಜನಿಕರು ಶಾಂತಿಯುತವಾಗಿ ಜೀವಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಬಲಪಡಿಸಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆಗೆ ಅಗತ್ಯ ಶಸ್ತ್ರಾಸ್ತ್ರಗಳು ಮತ್ತು ಕಾಯ್ದೆಗಳಿಗೆ ಅಗತ್ಯ ತಿದ್ದುಪಡಿ ತರುವ ಮೂಲಕ ಪೊಲೀಸರಿಗೆ ಶಕ್ತಿ ತುಂಬುವ ಕಾರ್ಯ ನಡೆಯುತ್ತಿದೆ.
ಸಮಾಜದಲ್ಲಿ ನಾಗರೀಕತೆ ಮತ್ತು ಸುಶಿಕ್ಷಿತ ವರ್ಗ ಹೆಚ್ಚಿದಂತೆಲ್ಲಾ ಶಾಂತಿಯುತ ಸಮಾಜ ನಿರ್ಮಾಣವಾಗಬೇಕಿತ್ತು ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕಿತ್ತು. ಆದರೆ ಇಂದಿನ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ. ಶಿಕ್ಷಣ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ ಇಂದಿನ ಶಿಕ್ಷಣ ನಮಗೆ ಬದುಕುವ ಸಂಸ್ಕಾರವನ್ನು ಅದರಲ್ಲೂ ಒಬ್ಬ ಮನುಷ್ಯನಾಗಿ ಬದುಕುವ ಸಂಸ್ಕಾರವನ್ನು ನೀಡುತ್ತಿಲ್ಲ. ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ಡಾ. ಸಿ.ಎಂ. ರಾಜೇಶ್ ಗೌಡ, ಎಂಎಲ್‍ಸಿ ಚಿದಾನಂದ ಎಂ.ಗೌಡ, ರೇಷ್ಮೆ ಮಂಡಳಿ ಅಧ್ಯಕ್ಷ ಎಸ್.ಆರ್. ಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ ವಾಡ್, ಡಿವೈಎಸ್‍ಪಿ ಕುಮಾರಪ್ಪ, ಮತ್ತಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 90 times, 1 visits today)