ತುಮಕೂರು


ಮಹಾನಗರ ಪಾಲಿಕೆ ಅಧಿಕಾರಿಗಳ ಧೋರಣೆ ಖಂಡಿಸಿ ಕಸದ ಆಟೋ ಚಾಲಕರು ಹಾಗೂ ಕೆಲಸಗಾರರು ಇಂದು ಬೆಳಿಗ್ಗೆ ದಿಢೀರನೆ ಪಾಲಿಕೆ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು.
ಮಹಾನಗರ ಪಾಲಿಕೆ ಇಂಜಿನಿಯರ್ ಮಧುಕರ್ ಅವರು ಪಾಲಿಕೆಯ ಕಸದ ಪ್ರತಿ ಆಟೋ ಚಾಲಕರು ಮತ್ತು ಕೆಲಸಗಾರರಿಗೆ ಪ್ರತಿದಿನ 100 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹಿಸಿಕೊಂಡು ಬರಲೇಬೇಕು ಎಂದು ತಾಕೀತು ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ಧೋರಣೆ ಖಂಡಿಸಿ ಕಸದ ಆಟೋ ಚಾಲಕರು ಹಾಗೂ ಕೆಲಸಗಾರರು ದಿಢೀರ್ ಪ್ರತಿಭಟನೆಗೆ ಮುಂದಾದರು. ಪಾಲಿಕೆಯ ಇಂಜಿನಿಯರ್ ಮಧುಕರ್ ಅವರು ಪ್ರತಿ ಕಸದ ಆಟೋ 100 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹಿಸಲೇಬೇಕು ಎಂದು ತಾಕೀತು ಮಾಡಿದ್ದಾರೆ. ಹಾಗಾಗಿ ಸೂಪರ್‍ವೈಸರ್‍ಗಳು ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಪ್ರತಿ ಆಟೋಗೆ ದಿನನಿತ್ಯ 10 ಕೆ.ಜಿ. ಪ್ಲಾಸ್ಟಿಕ್ ಸಿಗುವುದೇ ಕಷ್ಟ. ಹೀಗಿರುವಾಗ 100 ಕೆ.ಜಿ. ಎಲ್ಲಿಂದ ತಂದು ಕೊಡುವುದು. ನಮಗೆ ಸಿಗುವಷ್ಟು ತಂದು ಕೊಡುತ್ತೇವೆ ಎಂದರೆ ನೀವೇನು ನಿಮ್ಮ ಮನೆಯಿಂದ ತಂದು ಕೊಡುತ್ತೀರಾ, ಅದು ಕಾಪೆರ್Çೀರೇಷನ್ ಸ್ವತ್ತು ತಂದು ಕೊಡಿ ಎಂದು ಹೇಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ನಾವು ಕೆಲಸ ಮಾಡಲು ಹೇಗೆ ಸಾಧ್ಯ. ಆದ್ದರಿಂದ ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾ ನಿರತ ಆಟೋ ಚಾಲಕರು ಆಕ್ರೋಶ ಹೊರ ಹಾಕಿದರು.
ನಾವುಗಳು ಪ್ರತಿದಿನ ಬೆಳಿಗ್ಗೆ 5.30ಕ್ಕೆ ಕೆಲಸಕ್ಕೆ ಹಾಜರಾಗಿ ಸಂಜೆ 5 ಗಂಟೆಯವರೆಗೂ ಕೆಲಸ ಮಾಡುತ್ತೇವೆ. ಕೆಲವರು ದೂರದ ಊರುಗಳಿಂದಲೂ ಕೆಲಸ ಬರುತ್ತಾರೆ. ಒಂದೊಂದು ದಿನ ಅರ್ಧಗಂಟೆ ತಡವಾದರೂ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಆಟೋ ಚಾಲಕರು ಪಾಲಿಕೆ ಅಧಿಕಾರಿಗಳ ವರ್ತನೆ ವಿರುದ್ಧ ಹರಿಹಾಯ್ದರು.
ಪ್ರತಿಭಟನೆಯ ಸುದ್ದಿ ತಿಳಿದ ಪಾಲಿಕೆ ಸದಸ್ಯ ನಯಾಜ್ ಅಹಮದ್ ಸ್ಥಳಕ್ಕೆ ಧಾವಿಸಿ ಪಾಲಿಕೆ ಇಂಜಿನಿಯರ್ ಮಧುಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕಸದ ಆಟೋ ಚಾಲಕರಿಗೆ ಈ ರೀತಿಯ ಕಡ್ಡಾಯ ಮಾಡದಂತೆ ತಿಳಿಸಿದರು. ಜತೆಗೆ ತಮ್ಮ ಧೋರಣೆ ಬದಲಿಸಿಕೊಳ್ಳುವಂತೆಯೂ ಸಲಹೆ ಮಾಡಿದರು.
ಮಹಾನಗರ ಪಾಲಿಕೆಯಲ್ಲಿ 95 ಕಸದ ಆಟೋ ಚಾಲಕರು ಮತ್ತು ಕೆಲಸಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿದಿನ ಪ್ಲಾಸ್ಟಿಕ್ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಈ ಚಾಲಕರುಗಳಿಗೆ ಪ್ರತಿನಿತ್ಯ 50-60 ಕೆ.ಜಿ. ಪ್ಲಾಸ್ಟಿಕ್ ಕೊಡಿ ಎಂದರೆ ಎಲ್ಲಿಂದ ತಂದು ಕೊಡುತ್ತಾರೆ. ಪ್ಲಾಸ್ಟಿಕ್ ಮಾತ್ರ ವಿಂಗಡಣೆ ಮಾಡಿಕೊಡಿ ಎಂದು ತಿಳಿಸಿದ್ದೇನೆ. ಇಷ್ಟೇ ಕೊಡಿ, ಅಷ್ಟೇ ಕೊಡಿ ಎಂದು ಕಂಡಿಷನ್ ಹಾಕುವಂತಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿಕೊಂಡಿದ್ದು, ತಮ್ಮ ಹೇಳಿಕೆಗೆ ಕ್ಷಮಾಪಣೆ ಸಹ ಕೇಳಿದ್ದಾರೆ ಎಂದು ಹೇಳಿ, ಪ್ರತಿಭಟನಾನಿರಕ ಆಟೋ ಚಾಲಕರು ಹಾಗೂ ಕೆಲಸಗಾರರು ಮನವೊಲಿಸಿ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದರು.

(Visited 1 times, 1 visits today)