ತುಮಕೂರು:

      ಹಲವು ಆಮಿಷಗಳೊಡ್ಡಿದರೂ ಅದಕ್ಕೆ ಮಾರುಹೋಗದ ಪಕ್ಷದಲ್ಲೇ ನಿಷ್ಠಾವಂತರಾಗಿ ಉಳಿದುಕೊಂಡ ವ್ಯಕ್ತಿ ಬಿ.ಸತ್ಯನಾರಾಯಣ್ ನನ್ನ ಮಗನಂತಿದ್ದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬಣ್ಣಿಸಿದ್ದಾರೆ.

      ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದ ಬಿ.ಸತ್ಯನಾರಾಯಣ್ ಪಾರ್ಥೀವ ಶರೀರರದ ಅಂತಿಮ ದರ್ಶನ ಪಡೆದು ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

      ಅತ್ಯಂತ ಸರಳ, ಸಜ್ಜನ ವ್ಯಕ್ತಿ. ನನ್ನ ಮಗನಂತೆಯೇ ನಡೆದುಕೊಳ್ಳುತ್ತಿದ್ದ. ಪಕ್ಷಕ್ಕೆ ನಿಷ್ಠೆ ಇಟ್ಟುಕೊಂಡಿದ್ದ. ಹಾಗಾಗಿ ಎರಡು ಬಾರಿ ಸಚಿವರನ್ನಾಗಿ ಮಾಡಿದ್ದೆ. ಒಮ್ಮೆ ಕಾರ್ಮಿಕ ಸಚಿವರನ್ನಾಗಿ ಕೆಲಸ ನಿರ್ವಹಿಸಿದ್ದರು. ಸತ್ಯನಾರಾಯಣ್ ಅವರನ್ನು ಕಳೆದು ಕೊಂಡಿರುವುದು ಅತೀವ ದುಃಖ ತಂದಿದೆ ಎಂದು ಕಂಬನಿ ಮಿಡಿದರು.

      ಬಿ.ಸತ್ಯನಾರಾಯಣ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಪಕ್ಷಾತೀತವಾಗಿ ಎಲ್ಲಾ ನಾಯಕರು ಆಗಿಮಿಸಿದ್ದರು. ಜೆಡಿಎಸ್. ಕಚೇರಿಯಲ್ಲಿ ಕೊರೊನ ಸಂದರ್ಭದಲ್ಲೂ ನೂರಾರು ಮಂದಿ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

      ಬಿ.ಸತ್ಯನಾರಾಯಣ ಅವರ ಅಂತಿಮ ಸಂಸ್ಕಾರವು ಶಿರಾ ತಾಲ್ಲೂಕಿನ ಭುವನಹಳ್ಳಿಯಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

      ಆಗಸ್ಟ್ 5 ರಂದು ಸಂಜೆ 4-30 ಗಂಟೆಗೆ ನಡೆದ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕರಾದ ಡಿ.ಕೆ. ಶಿವಕುಮಾರ್, ಶ್ರೀನಿವಾಸ್, ಗೌರಿಶಂಕರ್, ಶಿವಲಿಂಗೇಗೌಡ, ರಂಗನಾಥ್, ವಿಧಾನ ಪರಿಷತ್ ಶಾಸಕರಾದ ಬೆಮಲ್ ಕಾಂತರಾಜ್, ಚೌಡರೆಡ್ಡಿ ತೂಪಲ್ಲಿ, ತಿಪ್ಪೇಸ್ವಾಮಿ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ, ರಫೀಕ್ ಅಹಮ್ಮದ್, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

      ಮಾಜಿ ಸಚಿವ ಹಾಗೂ ಶಾಸಕರಾದ ಡಾ: ಜಿ. ಪರಮೇಶ್ವರ್, ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಸಚಿವ ಹಾಗೂ ಶಾಸಕ ಹೆಚ್.ಡಿ.ರೇವಣ್ಣ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಸುರೇಶ್‍ಗೌಡ, ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಭಿಮಾನಿಗಳು ಶಾಸಕ ಸತ್ಯನಾರಾಯಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

      ತುಮಕೂರು ನಗರದಲ್ಲಿರುವ ಪಕ್ಷದ ಕಛೇರಿ ಹಾಗೂ ಶಿರಾ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಿಡಲಾಗಿತ್ತು. ಶಾಸಕರ ಅಪಾರ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

     ಹಾಲಿ ಜೆಡಿಎಸ್ ಶಾಸಕರಾಗಿದ್ದ ಬಿ.ಸತ್ಯನಾರಾಯಣರವರು ಬಹಳಷ್ಟು ವರ್ಷಗಳಿಂದ ಆನಾರೋಗ್ಯ ಪೀಡಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯದ ಪ್ರಭಾವಿ ಹಾಲಿ ಸಚಿವ ಟಿ.ಬಿ.ಜಯಚಂದ್ರ ವಿರುದ್ಧ 10.000 ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದ್ದ ಬಿ.ಸತ್ಯನಾರಾಯಣ್‍ರವರು ಅಪಾರ ಜನಮನ್ನಣೆಗಳಿಸಿದ್ದರು. 30 ವರ್ಷಗಳ ಸಚ್ಛಾರಿತ್ರ್ಯ ರಾಜಕಾರಣದಲ್ಲಿ ಭ್ರಷ್ಟಚಾರವನ್ನು ತಮ್ಮ ಮೈಗಂಟಿಸಿಕೊಳ್ಳದೆ ಜನಸೇವೆಗೈದಿದ್ದರು.

      ಇವರು ಕಳೆದ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸತ್ಯನಾರಾಯಣ್‍ರವರಿಗೆ ಮತಚಲಾಯಿಸಿದರೆ ಉಪಚುನಾವಣೆ ಎದುರಿಸಬೇಕಾಗುತ್ತದೆ ಎಂಬ ಅಪಪ್ರಚಾರ ಮಾಡಿದ್ದರು. ಅದು ಸತ್ಯಕ್ಕೆ ಹತ್ತಿರವಾಗಿದೆ ಎನ್ನುವಂತೆ ಅವರ ನಿಧನವಾರ್ತೆ ಆ ಕ್ಷೇತ್ರದ ಜನತೆಯನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.

      ಆಯ್ಕೆಯಾದ ನಂತರ ಲವಲವಿಕೆಯಿಂದ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದ ಇವರು ಕೋವಿಡ್‍ನಂತಹ ಸಂದರ್ಭದಲ್ಲೂ ಕ್ಷೇತ್ರದಲ್ಲಿನ ಜನತೆಗೆ ಆತ್ಮಸ್ಥೈರ್ಯ ತುಂಬುವ ಮುಖೇನ ನಾನು ಆರೋಗ್ಯವಾಗಿದ್ದೇನೆ ಎನ್ನುವ ಸ್ಪಷ್ಟ ಸಂದೇಶವನ್ನು ಸಾರಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಬಹು ಅಂಗಾಂಗ ವೈಪಲ್ಯಕ್ಕೆ ಒಳಗಾಗಿ ಮಂಗಳವಾರ ರಾತ್ರಿ ಅಸುನೀಗಿದರು. ಇವರ ಪಾರ್ಥಿವ ಶರೀರವನ್ನ ತುಮಕೂರಿನ ಜಿಲ್ಲಾ ಜ್ಯಾತ್ಯಾತೀತ ಜನತಾ ದಳದ ಕಛೇರಿಯ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ನಂತರ ಶಿರಾದಲ್ಲಿ ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ತದನಂತರ ಮೃತರ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನ ಪೂರೈಸಲಾಯಿತು.

      ಜಾತ್ಯಾತೀತ ಜನತಾ ದಳದ ರಾಜ್ಯ ನಾಯಕರು ಮತ್ತು ವಿವಿಧ ಜಿಲ್ಲೆಯಿಂದ ಆಗಮಿಸಿದ ಶಾಸಕರು, ಸಂಸದರುಗಳು ಹಾಗೂ ಬಿಜೆಪಿ ಪಕ್ಷದ ಶಾಸಕರು ಮತ್ತು ಮುಖಂಡರು ಅಂತಿಮ ದರ್ಶನ ಪಡೆದರು. ಕಾಂಗ್ರೆಸ್‍ನ ಮಾಜಿ ಶಾಸಕ ರಫೀಕ್ ಅಹಮದ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಸಿದ್ದೇಗೌಡ, ಮಾಜಿ ಜಾಸಕ ಎಂ.ಟಿ.ಕೃಷ್ಣಪ್ಪ, ಕೆ.ಎಂ.ತಿಮ್ಮರಾಯಪ್ಪ, ವೀರಭದ್ರಯ್ಯ, ಗೌರಿಶಂಕರ್ ಇತರರು ದರ್ಶನ ಪಡೆದರು.

(Visited 39 times, 1 visits today)