ಫೆ.16, 17ರಂದು ಬೃಹತ್ ಉದ್ಯೋಗ ಮೇಳ: 10ಸಾವಿರ ಉದ್ಯೋಗಾರ್ಥಿಗಳ ನೋಂದಣಿ

 ತುಮಕೂರು :

      ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ನಿರುದ್ಯೋಗಿಗಳಿಗಾಗಿ ಫೆಬ್ರುವರಿ 16 ಹಾಗೂ 17ರಂದು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲು 10ಸಾವಿರಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕ ಇಲಾಖೆ ಆಯುಕ್ತ ಬಾಲಯ್ಯ ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲೆಯ ವಿವಿಧ ಕಂಪನಿ/ ಕೈಗಾರಿಕೆಗಳನ್ನು ನಡೆಸುತ್ತಿರುವ ಉದ್ಯೋಗದಾತರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮೇಳದಲ್ಲಿ ಭಾಗವಹಿಸಲು 10ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿರುವುದು ಸಂತಸ ತಂದಿದೆ. ಇವರಲ್ಲಿ ಕನಿಷ್ಠ 7ಸಾವಿರ ಮಂದಿ ತಾಂತ್ರಿಕೇತರ ಉದ್ಯೋಗಾರ್ಥಿಗಳು ಇರುವ ಸಾಧ್ಯತೆ ಇದೆ. ಬೆಂಗಳೂರಿನ ಸುಮಾರು 50 ಐಟಿ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಜಿಲ್ಲೆಯಲ್ಲಿರುವ ಉದ್ಯೋಗದಾತರು ಹೆಚ್ಚಿನ ಸಂಖ್ಯೆಯಲ್ಲಿ ಮೇಳದಲ್ಲಿ ಭಾಗವಹಿಸಿದರೆ ಮಾತ್ರ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿಸಿದರು.

      ರಾಜ್ಯದಲ್ಲಿರುವ ಎಲ್ಲಾ ಉದ್ಯಮಗಳು/ ಕಂಪನಿ/ ಸಂಸ್ಥೆಗಳು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಪ್ರತಿ ವರ್ಷ ಕಾರ್ಮಿಕ ಇಲಾಖೆಗೆ ವರದಿ ನೀಡಬೇಕು. ಕಂಪನಿಗಳು ಇಂತಹ ಮೇಳದಲ್ಲಿ ಭಾಗವಹಿಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.

      ಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ತಕ್ಕಂತೆ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ಐಟಿ, ಸೇವಾ, ಉತ್ಪಾದನೆ ಸೇರಿದಂತೆ ವಿಭಾಗಾವಾರು ಮಳಿಗೆಗಳನ್ನು ತೆರೆಯಬೇಕು ಎಂದರಲ್ಲದೆ, ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

       ಮೇಳವು ಫೆಬ್ರುವರಿ 16ರಂದು ಬೆಳಿಗ್ಗೆ 10.30 ಗಂಟೆಗೆ ಉದ್ಘಾಟನೆಯಾಗಲಿದ್ದು, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್, ಸ್ಥಳೀಯ ಶಾಸಕರು, ಸಂಸದರು ಹಾಗೂ ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

      ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಮಾತನಾಡಿ, ಬೃಹತ್ ಉದ್ಯೋಗ ಮೇಳ ನಡೆಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡುತ್ತಾ, ಈಗಾಗಲೇ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಲು ಲಾಂಚ್ ಮಾಡಲಾಗಿರುವ ಜಾಲತಾಣ hಣಣಠಿ://ಣumಞuಡಿಚಿಟಿಜಛಿhiಣಡಿಚಿಜuಡಿgಚಿರಿobಜಿಚಿiಡಿ.iಟಿ ಮೂಲಕ 10ಸಾವಿರಕ್ಕೂ ಹೆಚ್ಚು 7ನೇ ತರಗತಿ ಉತ್ತೀರ್ಣ, 10ನೇ ತರಗತಿ ಉತ್ತೀರ್ಣ/ಅನುತ್ತೀರ್ಣ, ಪಿ.ಯು.ಸಿ., ಯಾವುದೇ ವಿಷಯದಲ್ಲಿ ಪದವಿ/ ಸ್ನಾತಕೋತ್ತರ ಪದವಿ ಹೊಂದಿದವರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಿ ಇಂಗ್ಲೀಷ್ ಸ್ಪೀಕಿಂಗ್ ಸ್ಕಿಲ್, ರೆಸ್ಯೂಮ್ ತಯಾರಿಕೆ, ಗುಂಪು ಚರ್ಚೆ, ಸಂದರ್ಶನಗಳನ್ನು ಎದುರಿಸುವ, ಆತ್ಮ ವಿಶ್ವಾಸ ಬೆಳೆಸಿಕೊಳ್ಳುವ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಅಭ್ಯರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ನೋಂದಣಿ ಪ್ರಕ್ರಿಯೆ ಮೇಳದ ದಿನದವರೆಗೂ ಜಾರಿಯಲ್ಲಿರುತ್ತದೆ. ಈ ಮೇಳದಲ್ಲಿ ವಿವಿಧ ಕಂಪನಿಗಳ 100ಕ್ಕೂ ಹೆಚ್ಚು ಮಳಿಗೆಗಳು ಹಾಗೂ 10 ನೋಂದಣಿ ಕೇಂದ್ರಗಳನ್ನು ತೆರೆಯಲಾಗುವುದು. ಉದ್ಯೋಗಾರ್ಥಿಗಳಿಗೆ ಅನುವಾಗುವಂತೆ ಹೆಲ್ಪ್ ಡೆಸ್ಕ್‍ನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

      ಮೇಳದಲ್ಲಿ ಐಟಿಬಿಟಿ, ಆಟೋಮೊಬೈಲ್, ಮೆಕ್ಯಾನಿಕಲ್, ಕನ್ಸ್ಟ್ರಕ್ಷನ್ ಮಾರ್ಕೆಟಿಂಗ್ ಸೇಲ್ಸ್ ಅಂಡ್ ರೀಟೇಲ್, ಟೆಲಿಕಾಂ, ಬಿಪಿಓ, ಟೆಕ್ಸ್‍ಟೈಲ್ಸ್, ಬ್ಯಾಂಕಿಂಗ್, ಫೈನಾನ್ಸ್, ಇನ್ಶೂರೆನ್ಸ್, ಹಾಸ್ಪಿಟಲ್, ಫಾರ್ಮಸಿಟಿಕಲ್, ಹೆಲ್ತ್‍ಕೇರ್, ಮ್ಯಾನುಫ್ಯಾಕ್ಚರಿಂಗ್, ಟ್ರಾನ್ಸ್‍ಪೋರ್ಟ್, ಸರ್ವೀಸಸ್, ಆಹಾರ ಸಂಸ್ಕರಣೆ, ಹೋಟೆಲ್ ನಿರ್ವಹಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಸೇರಿದಂತೆ ವಿವಿಧ ಹುದ್ದೆಗಳನ್ನು ಒದಗಿಸುವ ಕಂಪನಿಗಳು ಭಾಗವಹಿಸಲಿದ್ದು, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯ ಅರ್ಹ ಉದ್ಯೋಗಾರ್ಥಿಗಳು ಭಾಗವಹಿಸಿ ಮೇಳದ ಪ್ರಯೋಜನ ಪಡೆಯಬೇಕೆಂದು ಅವರು ಮನವಿ ಮಾಡಿದರು.

      ಸಭೆಯಲ್ಲಿ ಕಾರ್ಮಿಕ ಇಲಾಖೆಯ ಉಪ ಆಯುಕ್ತ ಡಾ: ಎಸ್.ಬಿ.ರವಿಕುಮಾರ್, ಕಾರ್ಖಾನೆ ಮತ್ತು ಬಾಯ್ಲರ್‍ಗಳ ಜಂಟಿ ನಿರ್ದೇಶಕ ಜಿ.ಸಿ.ಜಗಧೀಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್.ನಾಗರಾಜ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಕೆಐಎಡಿಬಿಯ ಅಭಿವೃದ್ಧಿ ಅಧಿಕಾರಿ ಸುನೀಲ್, ಛೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು, ಸುಮಾರು 70 ವಾಣಿಜ್ಯೋದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

(Visited 36 times, 1 visits today)

Related posts

Leave a Comment