ತುಮಕೂರು:

       ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಏಕಕಾಲಕ್ಕೆ ಇಬ್ಬರು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಸುರೇಶ್ ಗೌಡ ರಾಜೀನಾಮೆ ನೀಡಿದ ನಂತರ ಖಾಲಿಯಿದ್ದ ಸ್ಥಾನಕ್ಕೆ ತಿಗಳ ಸಮುದಾಯದ ಲಕ್ಷ್ಮೀಶ್, ಕುರುಬ ಸಮುದಾಯದ ಬಿ.ಕೆ.ಮಂಜುನಾಥ್ ಅವರನ್ನು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿಗೆ ಇಬ್ಬರನ್ನು ಅಧ್ಯಕ್ಷ ಗಾದಿಗೆ ಕೂರಿಸಲಾಗಿದೆ.

ಲಕ್ಷ್ಮೀಶ್

      ಲಕ್ಷ್ಮೀಶ್ ಅವರಿಗೆ 7 ತಾಲೂಕುಗಳಾದ ತುಮಕೂರು ನಗರ, ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕಿನ ಜವಾಬ್ದಾರಿ ವಹಿಸಲಾಗಿದೆ. ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ 4 ತಾಲೂಕಿನ ಉಸ್ತುವಾರಿಯನ್ನು ಬಿ.ಕೆ.ಮಂಜುನಾಥ್ ಹೆಗಲಿಗೆ ನೀಡಲಾಗಿದೆ.

ಬಿ.ಕೆ.ಮಂಜುನಾಥ್

       ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀಶ್ ಅವರು ಅಧ್ಯಕ್ಷ ಗಾದಿಯ ಮೇಲೆ ಬಹಳ ದಿನಗಳಿಂದ ಕಣ್ಣಿಟ್ಟಿದ್ದರು. ಶಿರಾ ಭಾಗದಲ್ಲಿ ಬಿಜೆಪಿ ಯನ್ನು ಸಂಘಟಿಸುತ್ತಿರುವ ಮಂಜುನಾಥ್ ಅವರಿಗೆ ಬಯಸದೆ ಅಧ್ಯಕ್ಷ ಹುದ್ದೆ ಒಲಿದಿದೆ.

ಮಧುಗಿರಿ ಜಿಲ್ಲೆ ಯಾವಾಗ ಆಯ್ತು?

        ಒಂದು ಪಕ್ಷಕ್ಕೆ ಒಂದು ಜಿಲ್ಲೆಗೆ ಒಬ್ಬರೇ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವುದು ವಾಡಿಕೆ. ಆದರೆ ಈ ಬಾರಿ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ತುಮಕೂರು ಜಿಲ್ಲೆ ಹಾಗೂ ಮಧುಗಿರಿ ಜಿಲ್ಲೆ ಎಂದು ವಿಂಗಡಿಸಿ ಇಬ್ಬರು ಸಾರಥಿಗಳನ್ನು ನೇಮಕಮಾಡಿ ಪಕ್ಷದಲ್ಲಿ ಬಿರುಕು ಮೂಡಿಸಲು ರಾಜ್ಯಾಧ್ಯಕ್ಷರು ಮುಂದಾಗಿದ್ದಾರೆ.

      ಮಧುಗಿರಿ ಜಿಲ್ಲೆ ಯಾವಾಗ ಆಯ್ತು ಎಂದು ಜಾಲತಾಣದಲ್ಲಿ ಬಿಜೆಪಿ ಕಾರ್ಯಕರ್ತರು ಕಿಡಿಕಾರಿದ್ದಾರೆ. ಹಿಂದುಳಿದ ವರ್ಗಗಳಿಗೆ  ಪಕ್ಷದಲ್ಲಿ ಆದ್ಯತೆ ಕೊಟ್ಟಿರುವುದು ಸಂತಸದ ವಿಚಾರ ಆದರೆ ಇಬ್ಬರನ್ನು ಅಧ್ಯಕ್ಷ ಗಾದಿಗೆ ನೇಮಕ ಮಾಡಿರುವುದರ  ಮರ್ಮವೇನು? ಎಂದು ಪ್ರಶ್ನಿಸಿದ್ದಾರೆ.

(Visited 216 times, 1 visits today)