ಬಿಎಸ್‍ಎನ್‍ಎಲ್ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಬೇಕು. ಗುತ್ತಿಗೆ ಕಾರ್ಮಿಕರಿಗೆ ಬಾಕಿ ಉಳಿಸಿಕೊಂಡಿರುವ 6 ತಿಂಗಳ ವೇತನವನ್ನು ಕೂಡಲೇ ನೀಡಬೇಕೆಂದು ಆಗ್ರಹಿಸಿ ಬಿಎಸ್‍ಎನ್‍ಎಲ್ ನೌಕರರು ಸಿಐಟಿಯು ನೇತೃತ್ವದಲ್ಲಿ ತುಮಕೂರು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

      ಇದೇ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕೇಂದ್ರ ಸರ್ಕಾರ ಸಾವಿರಾರು ಬಿಎಸ್‍ಎನ್‍ಎಲ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಪಿತೂರಿ ನಡೆಸಿದ. ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಮುಚ್ಚಲು ಪಿತೂರಿ ನಡೆಸುತ್ತಿದೆ. ಇದಕ್ಕೆ ಪ್ರಜ್ಞಾವಂತರು ಮತ್ತು ದೇಶಭಕ್ತರು ಬೆಂಬಲ ನೀಡಬಾರದು ಎಂದು ಮನವಿ ಮಾಡಿದರು.

      ಸಿಐಟಿಯು ಮೊದಲಿನಿಂದಲೂ ಸಾರ್ವಜನಿಕ ಉದ್ದಿಮೆಗಳ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಸಾರ್ವಜನಿಕ ಉದ್ದಿಮೆಗಳನ್ನು ಉಳಿಸುವುದರಿಂದ ಲಕ್ಷಾಂತರ ಕುಟುಂಬಗಳು ಜೀವನ ಸಾಗಲಿಸಲು ಅನುಕೂಲವಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಬಿಎಸ್‍ಎನ್‍ಎಲ್ ಸಂಸ್ಥೆಗೆ ಸಂಪನ್ಮೂಲ, ಸೆಕ್ಟ್ರಂ ಮತ್ತು ಹಣಕಾಸು ನೆರವು ನೀಡುವ ಮೂಲಕ ಸಂಸ್ಥೆಯು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. 

      ಬಿಎಸ್‍ಎನ್‍ಎಲ್ ಕಚೇರಿಯಲ್ಲಿ ಗುತ್ತಿಗೆ ಆಧಾರ ಮೇಲೆ ದುಡಿಯುತ್ತಿರುವ ಸಾವಿರಾರು ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ವೇತನವನ್ನು ನೀಡಿಲ್ಲ. ಗುತ್ತಿಗೆ ನೌಕರರ ಬಿಎಸ್‍ಎನ್‍ಎಲ್ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ನಿರಂತರವಾಗಿ ದುಡಿಯುತ್ತಿದ್ದರೂ ಸಂಬಳ ನೀಡದೆ ಇರುವುದರಿಂದ ಕುಟುಂಬಗಳ ನಿರ್ವಹಣೆ ಕಷ್ಟವಾಗಿದೆ. ಗುತ್ತಿಗೆ ಕಾರ್ಮಿಕ ಕಾಯ್ದೆ 1970 ರಂತೆ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡುವುದು ಸಂಸ್ಥೆಯ ಪ್ರಾಥಮಿಕ ಜಬಾಬ್ದಾರಿಯಾಗಿದೆ. ಇದನ್ನು ಮರೆತಿರುವ ಸಂಸ್ಥೆಯ ನಿಲುವನ್ನು ಖಂಡಿಸುತ್ತೇವೆ ಎಂದರು.

      ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಗುತ್ತಿಗೆ ಆಧಾರಿತ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಮನವಿಗಳನ್ನು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆ ನೌಕರರ ಬೇಡಿಕೆಗಳಿಗೆ ಬಿಎಸ್‍ಎನ್‍ಎಲ್ ಸಂಸ್ಥೆಯ ಮೇಲಧಿಕಾರಿಗಳು ಕಿವಿಗೊಡುತ್ತಿಲ್ಲ. ಬಡ ಗುತ್ತಿಗೆ ಕಾರ್ಮಿಕರ ನೋವನ್ನು ಅರ್ಥ ಮಾಡಿಕೊಂಡು ಕೇಂದ್ರ ಸರ್ಕಾರ ಕೂಡಲೇ ವೇತವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.

      ಸಂಸ್ಥೆಯ ಮೇಲಧಿಕಾರಿಗಳನ್ನು ವೇತನ ನೀಡುವಂತೆ ಕೇಳಿದರೆ ಹಣದ ಕೊರತೆಯಿದೆ ಎಂದು ಆಡಳಿತ ಮಂಡಳಿ ಸಬೂಬು ಹೇಳುತ್ತಿದೆ. ಇದು ಅಮಾನವೀಯ ಮತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲದಂತಹ ಅಂಶವಾಗಿದೆ. ರಾಜ್ಯಾದ್ಯಂತ ಸುಮಾರು 3000 ಗುತ್ತಿಗೆ ನೌಕರರಿದ್ದು ಅವರ ಕುಟುಂಬಗಳು ವೇತನವಿಲ್ಲದೆ ತೊಂದರೆಗೆ ಒಳಗಾಗಿವೆ. ವೇತನವನ್ನೇ ನಂಬಿಕೊಂಡಿರುವ ಈ ಕುಟುಂಬಗಳು ಮಕ್ಕಳ ವಿದ್ಯಾಭ್ಯಾಸ, ಬಾಡಿಗೆ, ವಿದ್ಯುತ್ ಬಿಲ್ ಪಾವತಿಸಲು ಆಗದಂತಹ ಪರಿಸ್ಥಿತಿ ಇದೆ. ಹೀಗಾಗಿ ಕೂಡಲೇ ವೇತನ ಬಿಡುಗಡೆ ಮಾಡಿ ಬಡ ಗುತ್ತಿಗೆ ನೌಕರರ ಕುಟುಂಬಗಳ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಷಣ್ಮುಖಪ್ಪ, ಎ.ಲೋಕೇಶ್, ರಂಗಧಾಮಯ್ಯ, ಬಿಎಸ್‍ಎನ್‍ಎಲ್ ಗುತ್ತಿಗೆ ನೌಕರರಾದ ಶಶಿ, ಕುಮಾರ್, ಗೋವಿಂದ, ಬೈರಣ್ಣ ಕಟ್ಟಡ ಕಾರ್ಮಿಕ ಸಂಘಟನೆಯ ಲಕ್ಷ್ಮಣ್, ಆಸ್ಪತ್ರೆ ಕಾರ್ಮಿಕರಾದ ರಂಗಮ್ಮ, ನೇತ್ರ ಮೊದಲಾದವರು ಉಪಸ್ಥಿತರಿದ್ದರು.

(Visited 103 times, 1 visits today)