ತುಮಕೂರು :

       ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕೆಎಸ್‍ಆರ್‍ಟಿಸಿ ಬಸ್ ಕಾರ್ಯಾಚರಣೆಯನ್ನು ಮಂಗಳವಾರದಿಂದ ತುಮಕೂರು ಜಿಲ್ಲೆಯಲ್ಲಿ ಪ್ರಾರಂಬಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್. ಗಜೇಂದ್ರ ಕುಮಾರ್ ತಿಳಿಸಿದ್ದಾರೆ.

       ಬಸ್ ಕಾರ್ಯಾಚರಣೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ ಸಂಚರಿಸಲಿರುವ ಎಲ್ಲಾ ಬಸ್‍ಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಜೇಷನ್‍ಗೊಳಿಸಲಾಗಿದೆ. ತುಮಕೂರು ವಿಭಾಗದ ವ್ಯಾಪ್ತಿಯಲ್ಲಿ 620 ಬಸ್‍ಗಳಿದ್ದು, ಪ್ರಾರಂಭಿಕವಾಗಿ 150 ಬಸ್‍ಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಬಸ್ ಕಾರ್ಯಾಚರಣೆ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

      ಕರ್ತವ್ಯಕ್ಕೆ ನಿಯೋಜಿಸಲಾಗುವ ಬಸ್ ಚಾಲಕರು ಹಾಗೂ ನಿರ್ವಾಹಕರ ಸುರಕ್ಷತಾ ದೃಷ್ಟಿಯಿಂದ ಅವರಿಗೆ ಸ್ಯಾನಿಟೈಜûರ್, ಮುಖಗವಸು ಹಾಗೂ ಕೈಗವಸುಗಳನ್ನು ನೀಡಲಾಗುವುದು. ವೈದ್ಯಕೀಯ ತಪಾಸಣೆಗೊಳಪಡಿಸಿ ಪ್ರಮಾಣ ಪತ್ರ ಪಡೆದ ನಂತರವೇ ಬಸ್ ಚಾಲಕರು ಹಾಗೂ ನಿರ್ವಾಹಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು.

       ನಗರ ಬಸ್‍ನಿಲ್ದಾಣದಿಂದ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಬಸ್ ಸಂಚಾರ ಪ್ರಾರಂಭವಾಗಲಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್-19 ಕೆಂಪುವಲಯ ಹೊರತುಪಡಿಸಿ ತುಮಕೂರು ವಿಭಾಗದ ಸೇವಾ ವ್ಯಾಪ್ತಿಗೆ ಬರುವ ಜಿಲ್ಲೆಯ ಎಲ್ಲಾ ತಾಲ್ಲೂಕು ಸೇರಿದಂತೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ಮತ್ತಿತರ ಸ್ಥಳಗಳಿಗೆ ಪ್ರಯಾಣಿಕರು ಸಂಚರಿಸಬಹುದು.

     ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರಯಾಣಿಕರನ್ನು ಬಸ್ ಹತ್ತುವ ಮುನ್ನ ಸ್ಯಾನಿಟೈಜೇಷನ್‍ಗೊಳಿಸಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೊಳಪಡಿಸಲಾಗುವುದು. ಪ್ರತಿ ಬಸ್ಸಿನಲ್ಲಿ ಗರಿಷ್ಠ 30 ಪ್ರಯಾಣಿಕರು ಮಾತ್ರ ಪ್ರ ಯಾಣಿಸಲು ಅವಕಾಶವಿದೆ.

       ನಗರ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣದ ಎರಡೂ ಪ್ರವೇಶ ದ್ವಾರಗಳಲ್ಲಿ ಪ್ರಯಾಣಿಕರಿಗೆ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುವುದು. ಪ್ರತಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವೃತ್ತಗಳಿಂದ ಗುರುತು ಮಾಡಲಾಗಿದೆ. ಪ್ರಯಾಣಿಕರು ಜನಜಂಗುಳಿಯಾಗದಂತೆ ಗುಂಪುಗೂಡದಂತೆ ನಿಗಾವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

        ಕೋವಿಡ್-19 ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಲ್ಲಿ ಪ್ರಯಾಣಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

(Visited 7 times, 1 visits today)