ತುಮಕೂರು:


ಕೇಂದ್ರದ ಬೆಲೆ ಹೆಚ್ಚಳ, ನಿರುದ್ಯೋಗ, ಅವೈಜ್ಞಾನಿಕ ಜಿ.ಎಸ್.ಟಿ ಮತ್ತಿತರ ವಿಚಾರಗಳನ್ನು ಮುಂದಿಟ್ಟುಕೊಂಡು ಯುವ ಕಾಂಗ್ರೆಸ್ ತುಮಕೂರು ಜಿಲ್ಲಾ ಘಟಕದ ವತಿಯಿಂದ ನಗರದ ಟೌನ್‍ಹಾಲ್ ಮುಂಭಾಗದಲ್ಲಿ ಒಂದು ಎರಡು ದಿನಗಳ ಅಹೋರಾತ್ರಿ ಧರಣಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಧರಣಿ ನಿರತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಶಿ ಹುಲಿಕುಂಟೆ ಮಠ್,ಇಂದು ದೇಶದೆಲ್ಲೆಡೆ ಸ್ವಾತಂತ್ರದ 75ನೇ ವರ್ಷದ ಅಮೃತಮಹೋತ್ಸವ ಕಾರ್ಯಕ್ರಮವನ್ನು ನಾವೆಲ್ಲರೂ ಆಚರಿಸಲು ಸಿದ್ದರಾಗಿ ದ್ದೇವೆ.ಆದರೆ ಬಿಜೆಪಿ ಸರಕಾರ ಜನಸಾಮಾನ್ಯರು ದಿನ ನಿತ್ಯ ಬಳಸುವ ವಸ್ತುಗಳ ಮೇಲೆ ಬೆಲೆ ಹೆಚ್ಚಳ ಮಾಡಿ, ಅವರ ಬದುಕನ್ನು ನರಕ ಮಾಡಿದೆ.ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಮೋದಿ ಅವರ ಭರವಸೆ ಹುಸಿಯಾಗಿದೆ. ಬದಲಾಗಿ ಅವೈಜ್ಞಾನಿಕ ಜಿ.ಎಸ್.ಟಿ, ನೋಟ್ ಬ್ಯಾನ್‍ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸಾವಿರಾರು ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದ ಹತಾಶರಾಗಿ ಕಾಲ ಕಳೆಯುವಂತಹ ಸ್ಥಿತಿಯನ್ನು ತಂದಿದೆ ಎಂದರು.
ಬಿಜೆಪಿ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹರ್‍ಘರ್ ಮೇ ತಿರಂಗ ಹೆಸರಿನಲ್ಲಿ ಯುವಜನತೆಯನ್ನು ಭ್ರಮಾಲೋಕಕ್ಕೆ ತೆಗೆದುಕೊಂಡು ಹೋಗುತ್ತಿದೆ.ಬಿಜೆಪಿಯ ಈ ಕುತಂತ್ರವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಜನಸಾಮಾನ್ಯರು ಓಡಾಡುವ ಜಾಗದಲ್ಲಿಯೇ ವೇದಿಕೆ ನಿರ್ಮಿಸಿ,ಅವರಿಗೆ ಬಿಜೆಪಿ ಪಕ್ಷದ ಜನವಿರೋಧಿ ನೀತಿಗಳ ಪರಿಚಯ ಮಾಡಿಸುವ ಕೆಲಸ ಮಾಡುವ ಮೂಲಕ ಆಳುವ ಪಕ್ಷಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಶಿಹುಲಿಕುಂಟೆ ಮಠ ತಿಳಿಸಿದರು.
ಯುವಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್ ಮಾತನಾಡಿ,ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸದ ಬಿಜೆಪಿ, 2022ರ ವೇಳೆಗೆ ಎಲ್ಲಾ ಬಡವರಿಗು ಸೂರು ನೀಡುವುದಾಗಿ ವಾಗ್ಧಾನ ಮಾಡಿ, ಅದರಿಂದ ತಪ್ಪಿಸಿಕೊಳ್ಳಲು ಹರ್‍ಘರ್ ಮೇ ತಿರಂಗ ಎಂಬ ನಾಟಕ ಶುರು ಮಾಡಿದೆ. ಆದರೆ ಇವರಿಗೆ ಗೊತ್ತಿಲ್ಲ. ದೇಶದ ಲಕ್ಷಾಂತರ ಕುಟುಂಬಗಳಿಗೆ ಮನೆಯೇ ಇಲ್ಲ. ದೇಶದ ಪ್ರತಿ ಮನೆಯ ಮೇಲೆ ತ್ರಿವರ್ಣ ದ್ವಜ ಹಾರಿಸುವ ಮೊದಲು ಬಿಜೆಪಿ ಮೂಲವಾಗಿರುವ ಆರ್.ಎಸ್.ಎಸ್ ಕಚೇರಿಯ ಮೇಲೆ ಭಾರತದ ಧ್ವಜ ಹಾರಿಸುವ ಧೈರ್ಯವನ್ನು ಬಿಜೆಪಿ ತೋರಲಿ ಎಂದರು.
ಇತ್ತೀಚೆಗೆ ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿ ಕಾರ್ಯಕರ್ತನಿಗೆ ನ್ಯಾಯ ದೊರಕಿಸಬೇಕೆಂದು ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಿ, ದಾಂದಲೆ ಮಾಡಿದ್ದ ಬಿಜೆಪಿ ಅಂಗ ಸಂಸ್ಥೆಯಾಗಿರುವ ಎಬಿವಿಪಿ ಸಂಘಟನೆಯ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸುಗಳನ್ನು ವಾಪಸ್ ಪಡೆಯುವ ಸರಕಾರ, ಪಠ್ಯಪುಸ್ತಕದಲ್ಲಿನ ಲೋಪದೋಷ ತಿದ್ದುಪಡಿಗೆ ಒತ್ತಾಯಿಸಿ, ಶಿಕ್ಷಣ ಸಚಿವರ ಮನೆಯ ಮುಂದೆ ಆರ್.ಎಸ್.ಎಸ್.ನ ಚಡ್ಡಿ ಸುಟ್ಟ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿ, ಅವರಿಗೆ ಬೇಲ್ ಸಿಗದ ರೀತಿ ನೋಡಿಕೊಂಡಿದೆ.ಎರಡು ವಿದ್ಯಾರ್ಥಿ ಸಂಘಟನೆಗಳೇ, ಆದರೆ ಕ್ರಮ ಕೈಗೊಳ್ಳುವಾಗ ತಾರತಮ್ಯ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಕೂಡಲೇ ಎನ್.ಎಸ್.ಯು.ಯ ಕಾರ್ಯಕರ್ತರ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಬೇಕೆಂದು ಅನಿಲ್‍ಕುಮಾರ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯುವಕಾಂಗ್ರೆಸ್‍ನ ಇಲಾಹಿ ಸಿಕಂದರ್,ಮೋಹನ್‍ಕುಮಾರ್,ರಾಜೇಶ್,ಮೋಹನ್‍ಕುಮಾರ್‍ಗೌಡ, ಅಜ್ಮೀರ್, ಅಮಾನ್,ರಾಜೇಶ್, ರಾಮಮೂರ್ತಿ, ಸತೀಶ್, ವೇಣುಗೋಪಾಲ್, ಮಹದೇವ್, ಶೈಲೇಶ್, ನೂರ್ ಅಹಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 1 times, 1 visits today)