ತುಮಕೂರು:

      ಜಿಲ್ಲೆಯಲ್ಲಿ ಕರೊನಾ ವೈರಸ್ ಬಗ್ಗೆ ಭಯಬೇಡ ಮುಂಜಾಗ್ರತೆ ಇರಲಿ ಕರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೊಷಿಸಿ ಮುನ್ನೇಚ್ಚರಿಕೆ ಕ್ರಮವಹಿಸುವಂತೆ ಸೂಚಿಸಲಾಗಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನೇದ್ದೇಸಿ ಮಾತನಾಡಿದ ಅವರು, ವಿದೇಶದಿಂದ ಜಿಲ್ಲೆಗೆ 94 ಜನ ಪ್ರಯಾಣ ಬೆಳೆಸಿದ್ದು, ಅವರಲ್ಲಿ ಮನೆಯಲ್ಲೀರಿಸಿ ತಪಾಸಣೆಗೊಳಪಡುತ್ತಿರುವವರ ಸಂಖ್ಯೆ 83, ನಿಗಾವಣೆಯಲ್ಲಿ 28 ದಿನಗಳ ಅವಧಿ ಮುಗಿಸಿರುವವರ ಸಂಖ್ಯೆ 8, ಮರಳಿ ವಿದೇಶಕ್ಕೆ ಪ್ರಯಾಣ ಮಾಡಿರುವವರ ಸಂಖ್ಯೆ 3, ರಕ್ತ ಗಂಟಲು ಮಾದರಿಗಳ ಪರೀಕ್ಷೆ ನಡೆಸಿರುವವರ ಸಂಖ್ಯೆ 8 ಇವರಲ್ಲಿ ಸೋಂಕು ಇಲ್ಲದೇ ಇರುವ ಬಗ್ಗೆ ದೃಢಪಟ್ಟಿದೆ ಎಂದು ಅವರು ವಿವರಣೆ ನೀಡಿದರು.

      ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿದಿನ ಕರೊನಾ ಸೋಂಕಿನ ಬಗ್ಗೆ ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ. ಹೆಚ್ಚು ಜನ ಸೇರುವ ಎಲ್ಲಾ ತರಹದ ಸನ್ನಿವೇಶಗಳಿಗೆ ನಿಷೇಧ ಹೇರಲಾಗಿದೆ. ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಗೆ 3 ಹಂತದ ತರಬೇತಿಯನ್ನು ನೀಡಲಾಗಿದೆ. ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಮುನ್ನೇಚ್ಚರಿಕಾ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್‍ಗಳನ್ನು ನೀಡಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಸಂಸ್ಥೆ ಸಹಜಾರದೊಂದಿಗೆ ಮನೆ-ಮನೆಗೆ ಕರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

      ವಿದೇಶದಿಂದ ಪ್ರಯಾಣ ಬೆಳೆಸಿರುವವರ ಬಗ್ಗೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 100 ಐಸೋಲೇಶನ್ ವಾರ್ಡ್‍ಗಳನ್ನು ಗುರಿತಿಸಲಾಗಿದೆ. ಜಿಲ್ಲೆಯಲ್ಲಿರುವ 242 ಖಾಸಗಿ ಕ್ಲಿನಿಕ್‍ಗಳಲ್ಲಿಯೂ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಶ್ರೀದೇವಿ ಮತ್ತು ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕಂಟೋನೆಂಟ್ ಐಸೋಲೇಶನ್ ವಾರ್ಡ್‍ಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ಅಲ್ಲದೇ ಪ್ರತಿನಿತ್ಯ ಖಾಸಗಿ ಕ್ಲಿನಿಕ್‍ಗಳು ಜಿಲ್ಲಾಡಳಿತಕ್ಕೆ ವರದಿಸಲ್ಲಿಸಬೇಕು ಎಂದು ಅವರು ತಿಳಿಸಿದರು.

      ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದ ತೊಂದರೆ ಹಾಗೂ ಭೇದಿಯಂತಹ ಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಅವರು ಸೂಚನೆ ನೀಡಿದರು. ಅಂತಹ ಸೋಂಕು ಕಂಡುಬಂದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ವರದಿ ಮಾಡುವಂತೆ ಅವರು ತಿಳಿಸಿದರು.

      ವಿದೇಶದಿಂದ ಬರುವವರು ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟರೆ ಅವರ ವರದಿಯನ್ನು ಸಹ ಜಿಲ್ಲಾ ಕಂಟ್ರೋಲ್ ರೋಂ ಗೆ ಮಾಹಿತಿ ನೀಡುವಂತೆ ಖಾಸಗಿ ವೈದ್ಯಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

      ಜನದಟ್ಟಣೆ ಸೇರುವ ಸಂತೆ, ಜಾತ್ರೆ, ಶಾಲಾ-ಕಾಲೇಜು, ಸಿನಿಮಾ ಮಂದಿರ, ಪಬ್, ಕ್ಲಬ್‍ಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಿ ಪದೇ ಪದೇ ಕಣ್ಣು, ಮೂಗು ಬಾಯಿಗಳನ್ನು ಮುಟ್ಟಿಕೊಳ್ಳಬಾರದು. ಮತ್ತು ನೆಗಡಿ, ಕೆಮ್ಮು ಇರುವ ವ್ಯಕ್ತಿಗಳಿಂದ ದೂರ ಉಳಿಯುವುದು ಸೂಕ್ತ ಎಂದು ಅವರು ಸೂಚನೆ ನೀಡಿದ್ದಾರೆ.

      ಯಾವುದೇ ಒಬ್ಬ ವ್ಯಕ್ತಿ ಕೆಮ್ಮು, ಜ್ವರದಿಂದ ಬಳುತ್ತಿದ್ದರೆ, ಶಂಕಿತ ವ್ಯಕ್ತಿಯೆಂದು ಗುರುತಿಸಿ ಅವರ ರಕ್ತ ಮತ್ತು ಗಂಟಲು ಸ್ರಾವದ ಪರೀಕ್ಷೆಯ ನಂತರ ದೃಢಪಟ್ಟರೇ ಮಾತ್ರ ಸೋಂಕಿತ ವ್ಯಕ್ತಿಯೆಂದು ಪರಿಗಣಿಸಲಾಗುವುದೆಂದು ಅವರು ತಿಳಿಸಿದರು.

      ಮುಖ್ಯವಾಗಿ ಕರೊನಾ ವೈರಸ್ ಬಗ್ಗೆ ಭಯಪಡದೇ ವೈಯಕ್ತಿಕ ಮತ್ತು ನಾವು ವಾಸಿಸುವ ಸುತ್ತಮುತ್ತ ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕೆಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಡಿಹೆಚ್‍ಓ ಡಾ|| ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 16 times, 1 visits today)