ತುಮಕೂರು:
ನಗರದ ಬಿ.ಹೆಚ್. ರಸ್ತೆಯಲ್ಲಿರುವ ಶಂಕರಮಠದ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಹುಂಡಿ ಒಡೆದು ಅದರಲ್ಲಿದ್ದ ಕಾಣಿಕೆ ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ನಗರದ ಭದ್ರಮ್ಮ ವೃತ್ತದಲ್ಲಿರುವ ಶಂಕರಮಠದಲ್ಲಿರುವ ಶ್ರೀ ಶಂಕರಾಚಾರ್ಯ ಮತ್ತು ಅಮ್ಮನವರ ದೇವಾಲಯದ ಬಾಗಿಲು ಬೀಗ ಒಡೆಯುವ ಮುನ್ನ ಪಕ್ಕದಲ್ಲೇ ಇದ್ದ ಅರ್ಚಕರ ಮನೆಗೆ ಬಾಗಿಲಿಗೆ ಹೊರಗಡೆಯಿಂದ ಬೀಗ ಜಡಿದಿರುವ ಕಳ್ಳರು ಮನೆಯ ಮುಂಭಾಗದಲ್ಲಿ ಬಲ್ಬ್‍ನ್ನು ತೆಗೆದು ದೇವಾಲಯದ ಬೀಗ ಒಡೆದು ಹುಂಡಿಯನ್ನು ದೇವಾಲಯದ ಹೊರಗೆ ತೆಗೆದುಕೊಂಡು ಹೋಗಿ ಕಾಂಪೌಂಡ್ ಪಕ್ಕದಲ್ಲಿ ಅದನ್ನು ಒಡೆದು ಅದರೊಳಗಿದ್ದ ಕಾಣಿಕೆ ಹಣವನ್ನು ದೋಚಿಕೊಂಡು ಹುಂಡಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಪ್ರತಿನಿತ್ಯ ಶಂಕರಮಠದ ಅರ್ಚಕರು ಬೆಳಗಿನ ಜಾವ 5 ಗಂಟೆಗೆ ಎದ್ದು ಪೂಜೆಗೆ ತೆರಳುವುದು ರೂಢಿ. ಅದರಂತೆ ಇಂದು ಬೆಳಗಿನ ಜಾವ 5 ಗಂಟೆಗೆ ಎದ್ದಿರುವ ಅರ್ಚಕರು ಮನೆಯ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಾಗ ಬಾಗಿಲು ಹೊರಗಡೆಯಿಂದ ಲಾಕ್ ಆಗಿರುವುದು ಗೊತ್ತಾಗಿದೆ. ತಕ್ಷಣ ಅರ್ಚಕರು ಶಂಕರಮಠದ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ವ್ಯವಸ್ಥಾಪಕರು ಶಂಕರಮಠದ ಸೆರ್ಕ್ಯೂರಿಟಿ ಗಾರ್ಡ್ ಕಳುಹಿಸಿ ಮನೆಯ ಬಾಗಿಲು ತೆಗೆಸಿದ್ದಾರೆ. ಅರ್ಚಕರು ಶಂಕರಮಠದ ಒಳಗೆ ಹೋಗಿ ನೋಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತು ಎಂದು ಶಂಕರಮಠದ ಅಧ್ಯಕ್ಷ ನಂಜುಂಡೇಶ್ವರ್ ತಿಳಿಸಿದ್ದಾರೆ. ತಕ್ಷಣ ಮಠದಲ್ಲಿ ಕಳ್ಳತನ ನಡೆದಿರುವ ಸುದ್ದಿಯನ್ನು ಹೊಸಬಡಾವಣೆ ಠಾಣೆ ಪೆÇಲೀಸರಿಗೆ ತಿಳಿಸಿದ್ದಾರೆ. ಘಟನೆಯ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಹೊಸಬಡಾವಣೆ ಠಾಣೆ ಪಿಎಸ್‍ಐ ವಿದ್ಯಾಶ್ರೀ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದರು.

(Visited 10 times, 1 visits today)