ತುಮಕೂರು :

       ರಾಜ್ಯ ಸರ್ಕಾರದ ದಿನಕ್ಕೊಂದು ನೀತಿಯ ಮೂಲಕ ಕ್ವಾರಿ ಮತ್ತು ಕ್ರಷರ್ಗಳ ಮಾಲೀಕರ ಮೇಲೆ ಗಧಾ ಪ್ರಹಾರ ನಡೆಸುತ್ತಿರುವುದನ್ನು ಹಾಗೂ ಎರಡೆರಡು ತೆರಿಗೆ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಫೆಡರೇಷನ್ ಆಫ್ ಕರ್ನಾಟಕ ಕ್ಯಾರಿ ಮತ್ತು ಸ್ಟೋನ್ ಕ್ರಷರ್ ಒನ¾õï್ಸ ಅಸೋಸಿಯೇಷನ್ಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

      ಇಲ್ಲಿನ ಟೌನ್‍ಹಾಲ್ ವೃತ್ತದಲ್ಲಿ ಜಮಾಯಿಸಿದ ನೂರಾರು ಮಂದಿ ಕ್ರಷರ್ ಮಾಲೀಕರು ಹಾಗೂ ಕಾರ್ಮಿಕರು ಸರ್ಕಾರದ ದ್ವಂದ್ವ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

      ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕ್ರಷರ್ ಮತ್ತು ಕ್ವಾರಿ ಮಾಲೀಕರು ಸಂಘದ ರಾಜ್ಯ ಕಾರ್ಯದರ್ಶಿ ಭಾಸ್ಕರ್, ಜೆಲ್ಲಿ ಕ್ರಷರ್ ಹಾಗೂ ಕ್ವಾರಿ ಮಾಲೀಕರ ಮೇಲೆ ಸರ್ಕಾರ ದ್ವಂದ್ವ ನಿಲುವು ತೋರುತ್ತಿದ್ದು, ಇದರಿಂದ ಕ್ವಾರಿ ಮಾಲೀಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕ್ರಷರ್ ಉದ್ಯಮದಲ್ಲಿ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ದ್ವಂದ್ವ ನೀತಿಗಳ ತಿದ್ದುಪಡಿಗಾಗಿ ಈಗಾಗಲೇ ಮೂರು ಬಾರಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಶೇ. 90 ರಷ್ಟು ಕಟ್ಟಡದ ಕಲ್ಲು ಉಪಯೋಗವಾಗುತ್ತಿದ್ದು, ಗುತ್ತಿಗೆದಾರರ ಬಿಲ್ ಬರುವ ವೇಳೆಯಲ್ಲಿ ರಾಜಧನವನ್ನು ಸಂಗ್ರಹಿಸಿದ್ದಲ್ಲದೆ, ಕಳೆದ 1999 ರಿಂದ ನಿಗದಿತ ಪ್ರಮಾಣದಲ್ಲಿ ರಾಜಧನ ಕಟ್ಟುತ್ತಾ ಬಂದಿದ್ದೇವೆ. ಆದರೆ ಈಗ ಏಕಾಏಕಿ ಸ್ಥಳಗಳನ್ನು ಅಳೆದು ರಾಜಧನವನ್ನು ನಿಗದಿಪಡಿಸಿ ಐದು ಪಟ್ಟು ಹೆಚ್ಚಾಗಿ ಕೋಟ್ಯಂತರ ರೂ. ಹಣ ನೀಡುವಂತೆ ನೋಟಿಸ್ ಕಳುಹಿಸಿದೆ. ಇದರಿಂದ ಕ್ರಷರ್ ಮಾಲೀಕರುಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ತಾಳಿರುವ ನಿಲುವನ್ನು ಬದಲಿಸಿಕೊಂಡು ಕ್ರಷರ್ ಮಾಲೀಕರು ಮತ್ತು ಕಾರ್ಮಿಕರ ಹಿತ ಕಾಪಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

      ಸಂಘದ ನಿರ್ದೇಶಕ ಹೆಬ್ಬಾಕ ರವಿಶಂಕರ್ ಮಾತನಾಡಿ, ಎಂಡಿಪಿ ವಿತರಿಸುವಲ್ಲಿ ಅನೇಕ ಗೊಂದಲಗಳಿವೆ. ಇದರಿಂದ ಗುತ್ತಿಗೆದಾರರು ಎಂಡಿಪಿಯನ್ನು ತೆಗೆದುಕೊಳ್ಳುವುದಿಲ್ಲ. ಇದರಿಂದ ರಾಜಧನವನ್ನು ನಾವು ಭರಿಸಬೇಕಾಗುತ್ತದೆ. ಯಾವುದೇ ದೇವಸ್ಥಾನ ನಿರ್ಮಾಣಕ್ಕೆ ಜೆಲ್ಲಿ ಹಾಗೂ ಮರಳನ್ನು ಉಚಿತವಾಗಿ ನೀಡಿದರೂ ನಾವು ರಾಜಧನವನ್ನು ಕಟ್ಟಲೇಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

      ಬಾವಿಕಟ್ಟೆ ನಾಗಣ್ಣ ಮಾತನಾಡಿ, ತಕ್ಷಣವೇ ರಾಜಧನ ಕಟ್ಟಿಸಿಕೊಳ್ಳುವಂತಹ ಕಾರ್ಯವನ್ನು ಕೈಬಿಡಬೇಕು ಹಾಗೂ ನಮ್ಮ ಎಲ್ಲ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸೇದ ಇದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ನಮ್ಮ ಉದ್ಯಮದ ಉತ್ಪಾದನೆ, ಸಾಗಾಣಿಕೆ ಹಾಗೂ ಮಾರಾಟವನ್ನು ಸ್ಥಗಿತಗೊಳಿಸಿ ಹೋರಾಟವನ್ನು ತೀವ್ರಗೊಳಿಸುವುದನ್ನು ಬಿಟ್ಟರೆ ಬೇರೆ ಮಾರ್ಗ ಇಲ್ಲ ಎಂದು ಎಚ್ಚರಿಕೆ ನೀಡಿದರು.

      ಪ್ರತಿಭಟನೆಯಲ್ಲಿ ಟಿಪ್ಪರ್ ಲಾರಿಗಳು ಪಾಲ್ಗೊಂಡು ಮೆರವಣಿಗೆಯುದ್ಧಕ್ಕೂ ಸಾಗಿದ್ದು ವಿಶೇಷವಾಗಿತ್ತು.  ಪ್ರತಿಭಟನೆಯಲ್ಲಿ ದಿಲೀಪ್‍ಕುಮಾರ್, ಚಂದ್ರಶೇಖರಬಾಬು, ರಾಜಶೇಖರ್ ಸೇರಿದಂತೆ ಕ್ರಷರ್‍ನಲ್ಲಿ ಕಾರ್ಯನಿರ್ವಹಿಸುವ ನೂರಾರು ಮಂದಿ ಕಾರ್ಮಿಕರು ಭಾಗವಹಿಸಿದ್ದರು.

(Visited 15 times, 1 visits today)