ತುಮಕೂರು:


ತುಮಕೂರು ನಗರ ವ್ಯಾಪ್ತಿಯಲ್ಲಿ ಅಧಿಕ ಮಳೆಯಿಂದಾಗಿ ರಸ್ತೆಗಳು ಕುಸಿಯುತ್ತಿರುವುದು, ಮನೆಗಳಿಗೆ ನೀರು ನುಗ್ಗುತ್ತಿರುವುದು, ರಾಜಕಾಲುವೆಗಳಲ್ಲಿ ಹೂಳು ತುಂಬಿ ಮಳೆ ನೀರು ಸರಾಗವಾಗಿ ಹರಿಯದೆ ಇರುವುದು, ಕೆರೆ ಕೋಡಿ ಒಡೆದು ರಸ್ತೆಗಳು ಜಲಾವೃತವಾಗಿರುವುದು ಹಾಗೂ ಅಧಿಕ ಮಳೆಯಿಂದಾಗಿ ಪ್ರಾಣಹಾನಿಯಾಗಿರುವ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡೆಲ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಂಡು ಇಲಾಖಾ ಮುಖ್ಯಸ್ಥರು ಮುನ್ನೆಚ್ಚರಿಕೆ ವಹಿಸಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ‘ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಮಕೂರು ಮಹಾನಗರಪಾಲಿಕೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್, ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆ, ಮತ್ತು ರಾಷ್ಟ್ರೀಯ ಹೆದ್ದಾರಿ-4 ತುಮಕೂರು ವಿಭಾಗ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಜವಾಬ್ದಾರಿಯುತವಾಗಿ ನೋಡೆಲ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ತುಮಕೂರು ಪಾಲಿಕೆ ವ್ಯಾಪ್ತಿಯಿಂದ ನಗರ ವ್ಯಾಪ್ತಿಯಲ್ಲಿ ಚರಂಡಿಗಳ ಸ್ವಚ್ಛತೆ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಸ್ವಚ್ಛತೆ ಕಾಪಾಡುವುದು, ಪಾಲಿಕೆ ವತಿಯಿಂದ ನಿರ್ವಹಿಸಿರುವ ಕಾಮಗಾರಿಗಳ ನಿರ್ವಹಣೆ, ಒಂದನೇ ಹಂತದ ಯುಜಿಡಿ ನಿರ್ವಹಣೆ, ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆ ಮತ್ತು ಪಾಲಿಕೆಗೆ ಒಳಪಡುವ ಕೆರೆಗಳ ನಿರ್ವಹಣೆ, ಲೋಕೋಪಯೋಗಿ ಬಂದರು ಇಲಾಖೆ ವತಿಯಿಂದ ನಿರ್ವಹಿಸಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ನಿರ್ವಹಣೆ, ಯುಜಿಡಿ ಮ್ಯಾನ್‍ಹೋಲ್ ಎತ್ತರಿಸುವುದು, ಕಾಮಗಾರಿಗಳ ನ್ಯೂನ್ಯತೆ ಸರಿಪಡಿಸಿ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕ್ರಮವಹಿಸುವುದು ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಮಾನಿಕೆರೆ ಸುತ್ತಮುತ್ತ ರಾಜಕಾಲುವೆಗಳ ಸ್ವಚ್ಛತೆ ಮತ್ತು ನಿರ್ವಹಣೆ, ಉದ್ಯಾನವನಗಳ ಸ್ವಚ್ಛತೆ ಮತ್ತು ನಿರ್ವಹಣೆ ಮಾಡುವಂತೆ ಸೂಚಿಸಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಎರಡನೇ ಹಂತದ ಯುಜಿಡಿ ಮತ್ತು ನೀರು ಸರಬರಾಜು ನಿರ್ವಹಣೆ ಮಾಡುವುದು, ಸ್ಮಾರ್ಟ್‍ಸಿಟಿ ವತಿಯಿಂದ ಅಭಿವೃದ್ಧಿ ಪಡಿಸಿರುವ ಚರಂಡಿ ಮತ್ತು ರಸ್ತೆ, ಫುಟ್‍ಪಾತ್ ಇತ್ಯಾದಿಗಳಲ್ಲಿ ಯಾವುದೇ ನ್ಯೂನ್ಯತೆ ಕಂಡು ಬಾರದಂತೆ ತಕ್ಷಣವೇ ದುರಸ್ತಿ ಪಡಿಸಲು ಕ್ರಮವಹಿಸುವುದು, ಸಣ್ಣ ನೀರಾವರಿ ಇಲಾಖೆಯವರು ತಮ್ಮ ಇಲಾಖೆಗೆ ಸಂಬಂಧಿಸಿದ ಕೆರೆ ಮತ್ತು ರಾಜಕಾಲುವೆಗಳನ್ನು ನಿರ್ವಹಣೆ ಮಾಡುವುದು, ಅಧಿಕ ಮಳೆಯಿಂದ ಯಾವುದೇ ಮಳೆ ಅವಘಡಗಳು ಆಗದಂತೆ ಕ್ರಮವಹಿಸುವುದು, ಅರಣ್ಯ ಇಲಾಖೆಯವರು ಅಕ್ಕ-ತಂಗಿ ಕೆರೆ ಹಾಗೂ ಕೆರೆಯ ಅಕ್ಕಪಕ್ಕದ ರಾಜಕಾಲುವೆಗಳ ನಿರ್ವಹಣೆ ಮತ್ತು ಯಾವುದೇ ಅವಘಡಗಳು ಆಗದಂತೆ ಕ್ರಮವಹಿಸುವುದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ-4 ಅಧಿಕಾರಿಗಳು ತುಮಕೂರು ನಗರದಲ್ಲಿ ತಮ್ಮ ವ್ಯಾಪ್ತಿಗೆ ಬರುವ ರಸ್ತೆಗಳ ಗುಂಡಿಗಳನ್ನು ಮುಚ್ಚುವುದು, ಚರಂಡಿಗಳ ಹೂಳನ್ನು ತೆಗೆದು ಸ್ವಚ್ಛಗೊಳಿಸುವಂತೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ಮಳೆಹಾನಿ ಅವಘಡಗಳಿಗೆ ಸಂಬಂಧಿಸಿದಂತೆ ಸನ್ನದ್ಧರಾಗಬೇಕು. ದಿನದ 24 ಗಂಟೆಯೂ ಸಹ ಸಾರ್ವಜನಿಕರ ನೋವಿಗೆ ಸ್ಪಂದಿಸಬೇಕು ಮತ್ತು ತಮ್ಮ ವ್ಯಾಪ್ತಿಯಲ್ಲಿನ ಆಂಬುಲೆನ್ಸ್‍ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು, ಸಾರ್ವಜನಿಕರಿಂದ ಕರೆ ಬಂದ ತಕ್ಷಣ ಸ್ಪಂದಿಸಬೇಕು, ಈ ನಿಟ್ಟಿನಲ್ಲಿ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹಠಾತ್ ಪ್ರವಾಹವಾಗುವ ಪ್ರದೇಶಗಳು
ತುಮಕೂರು ನಗರದಲ್ಲಿ 7 ಪ್ರದೇಶಗಳನ್ನು ಹಠಾತ್ ಪ್ರವಾಹವಾಗುವ ಪ್ರದೇಶಗಳೆಂದು ಗುರುತಿಸಿದ್ದು, ಆರ್.ಟಿ.ನಗರ, ಅಗ್ರಹಾರದ ಶನಿಮಹಾತ್ಮ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ, ಇಸ್ರಾ ಶಾದಿ ಮಹಲ್ ಪ್ರದೇಶ, ದೇವರಾಯಪಟ್ಟಣ ಸೆಂಟ್‍ಮೇರಿಸ್ ಶಾಲೆ ಮತ್ತು ಗುಂಡಮ್ಮಕೆರೆ ಪ್ರದೇಶ, ದಾನಂ ಪ್ಯಾಲೇಸ್ ಹತ್ತಿರ ರೈಲ್ವೆ ಅಂಡರ್‍ಪಾಸ್, ಅಮಾನಿಕೆರೆ, ಉಪ್ಪಾರಹಳ್ಳಿ ಕೆರೆ ಹಾಟ್‍ಸ್ಪಾಟ್ ಪ್ರದೇಶಗಳಾಗಿದ್ದು, ಕೂಡಲೇ ಈ ಪ್ರದೇಶಗಳಿಗೆ ಅಧಿಕಾರಿಗಳನ್ನು ನೇಮಿಸಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ತುಮಕೂರು ಮಹಾನಗರಪಾಲಿಕೆ ಆಯುಕ್ತರು, ತುಮಕೂರು ಸ್ಮಾರ್ಟ್‍ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರು, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ-4 ತುಮಕೂರು ವಿಭಾಗ ಕಾರ್ಯಪಾಲಕ ಅಭಿಯಂತರರು ಉಪಸ್ಥಿತರಿದ್ದರು.

(Visited 1 times, 1 visits today)