ತುಮಕೂರು : 

      ವೈದ್ಯರ ಸಲಹಾ ಚೀಟಿಯಿಲ್ಲದೆ ಜ್ವರ, ಶೀತ, ಕೆಮ್ಮು, ಸಾರಿ(SARI) ಹಾಗೂ ಐಎಲ್‍ಐಗೆ ಸಂಬಂಧಪಟ್ಟಂತಹ ಯಾವುದೇ ಔಷಧಗಳನ್ನು ವಿತರಣೆ/ಮಾರಾಟ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಔಷಧ ವ್ಯಾಪಾಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

       ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾ ಔಷಧ ವ್ಯಾಪಾರಸ್ಥರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುನ್ನಚ್ಚರಿಕಾ ಕ್ರಮವಾಗಿ ಮೆಡಿಕಲ್ ಸ್ಟೋರ್‍ಗಳಲ್ಲಿ ಔಷಧಿ ಕೊಳ್ಳಲು ಬರುವ ರೋಗಿ ಮತ್ತು ಅವರನ್ನು ತಪಾಸಣೆ ಮಾಡಿರುವ ವೈದ್ಯರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಬೇಕು. ಅಲ್ಲದೇ ಈ ಮಾಹಿತಿಯನ್ನು ಸರ್ಕಾರ ನೀಡಿರುವ ವೆಬ್‍ಸೈಟ್‍ನಲ್ಲಿ ನಮೂದಿಸಬೇಕೆಂದು ಅವರು ನಿರ್ದೇಶನ ನೀಡಿದರು.

      ವೈದ್ಯರ ಸಲಹಾ ಚೀಟಿಯಿಲ್ಲದೇ ಔಷಧಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದ್ದಲ್ಲಿ ಅಂತಹವರ ವಿರುದ್ಧ  Epidemic Act ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಿ ಪರವಾನಗಿಗಳನ್ನು ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

      ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ, ಸಹಾಯಕ ಔಷಧ ನಿಯಂತ್ರಕರಾದ ಮಮತ, ಔಷಧ ವ್ಯಾಪಾರಸ್ಥರು, ಜಿಲ್ಲಾ ಔಷಧ ವ್ಯಾಪಾರ ಸಂಘದ ಪದಾಧಿಕಾರಿಗಳು, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

(Visited 37 times, 1 visits today)