ತುಮಕೂರು :
ಮಾನ್ಯ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಪ್ರಗತಿ ಪರಿಶೀಲನಾ ಸಭೆ ಇಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳು, 2021-22 ನೇ ಸಾಲಿನ ಅವಧಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಕುರಿತ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಸಂಬಂಧಿಸಿ, ವಿವಿಧ ಇಲಾಖೆಗಳು ಮಾರ್ಚ್-22ರ ಅಂತ್ಯದವರೆಗೆ ಸಾಧಿಸಿರುವ ಪ್ರಗತಿಯನ್ನು ಕೂಲಂಕುಶವಾಗಿ ಪರಿಶೀಲಿಸಿದರು.
ಕೆಎಸ್‍ಡಿಬಿ ತುಮಕೂರು ವಿಭಾಗೀಯ ಕಚೇರಿ ವತಿಯಿಂದ, ಜಿಲ್ಲೆಯ ತುಮಕೂರು ನಗರ, ಚಿ.ನಾ ಹಳ್ಳಿ, ಗುಬ್ಬಿ, ತಿಪಟೂರು, ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಗಳು, ಅಲ್ಪಸಂಖ್ಯಾತರನ್ನು ವಿವಿಧ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ನೋಂದಾಯಿಸಲು ಸಹಾಯಧನ ನೀಡುವ ಯೋಜನೆಯಡಿ, ರಾಜ್ಯ ವಲಯ ಯೋಜನೆಯಡಿ ಅಲ್ಪಸಂಖ್ಯಾತ ವರ್ಗದವರಿಗೆ ಮೀನುಗಾರಿಕೆ ಸಲಕರಣೆ ಕಿಟ್ಟು ವಿತರಣೆ ಮತ್ತು ಮೀನುಮರಿ ಖರೀದಿಗೆ ಸಹಾಯ ಯೋಜನೆ ಮತ್ತು ಜಿಲ್ಲಾ ಪಂಚಾಯತ್ ಯೋಜನೆಯಡಿ ಮೀನು ಮಾರುಕಟ್ಟೆ ನಿರ್ಮಾಣ ಮತ್ತು ಮಾರಾಟ ಯೋಜನೆ, ಪಿಎಂಇಜಿಪಿ ಯೋಜನೆಯಡಿ ನಿರುದ್ಯೋಗಿ ಯುವಕ ಯುವತಿಯರಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಸ್ವಂತ ಉದ್ಯೋಗ ಕೈಗೊಳ್ಳುವ ಯೋಜನೆ, ವಕ್ಫ್ ಸ್ವತ್ತಿನ ದುರಸ್ತಿ ಮತ್ತು ಜೀರ್ಣೋದ್ದಾರ, ಕೃಷಿ ಇಲಾಖೆಯ ಬೀಜ ಪೂರೈಕೆ,ಮಣ್ಣಿನ ಸತ್ವ ಹೆಚ್ಚಿಸುವ ಯೋಜನೆ, ಕೃಷಿ ಯಾಂತ್ರೀಕರಣ, ರಾಷ್ಟ್ರೀಯ ಆಹಾರ ಮಿಷನ್ ಯೋಜನೆ, ಬಸವ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ ವಸತಿ ಯೋಜನೆ, ಡಿಆರ್‍ಡಿಎ ವತಿಯಿಂದ ಸ್ವ ಸಹಾಯ ಗುಂಪುಗಳಿಗೆ ಸುತ್ತುನಿಧಿ, ಸಮುದಾಯ ಬಂಡವಾಳ ನಿಧಿ, ಭಾಗ್ಯಲಕ್ಷಿ ಯೋಜನೆ, ಅಂಗನವಾಡಿ ನಿರ್ಮಾಣ, ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ, ಮದರಸಾಗಳ ಅಧುನೀಕರಣ, ಪಶುಪಾಲನ ಇಲಾಖೆಯ ಕೃತಕ ಗರ್ಭದಾರಣೆ ಮೇವು ಬೀಜ ಕಿರುಪೊಟ್ಟಣ, ಅಮೃತ ಸಿರಿ ಯೋಜನೆ, ಮುಂತಾದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಜಿಲಾಧಿಕಾರಿಗಳು ನಡೆಸಿದರು.
ಜಿಲ್ಲೆಯ ಪಾವಗಡ ಕೊರಟಗೆರೆ, ಮಧುಗಿರಿ ಪಟ್ಟಣಗಳಲ್ಲಿ ಉದ್ಯೋಗಕ್ಕಾಗಿ ವಲಸೆ ಹೆಚ್ಚಿದ್ದು, ಇಲ್ಲಿ ಶಿಬಿರಗಳನ್ನು ಏರ್ಪಡಿಸಿ, ಕೌಶಲ್ಯಾಭಿವೃದ್ದಿ ತರಬೇತಿ ಯೋಜನೆಯಡಿ ವಿದೇಶಿ ಉದ್ಯೋಗದ ಬಗ್ಗೆ ಅರಿವು ಮೂಡಿಸುವ ಕೆಲಸ ಪ್ರಾರಂಭಿಸುವಂತೆ ಮತ್ತು ಜಿಲ್ಲೆಯ ಇತರೆ ಭಾಗಗಳಲ್ಲಿ ಉದ್ಯೋಗಾಕಾಂಕ್ಷಿಗಳು ಹಚ್ಚಿರುವ ಕಡೆ ಪ್ರಚಾರ ಕೈಗೊಳ್ಳುವಂತೆ ಕೌಶಲ್ಯಾಭಿವೃದ್ದಿ ನಿಗಮದ ಅಧಿಕಾರಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ವಿದ್ಯಾಕುಮಾರಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದು ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ವಿವರಿಸಿದರು.

(Visited 7 times, 1 visits today)