ತುಮಕೂರು :
ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಕಾರ್ಡುಗಳನ್ನು ಮೊದಲಾದ್ಯತೆ ಮೇರೆಗೆ ವಿತರಿಸುವ ನಿಟ್ಟಿನಲ್ಲಿ ಆಯಾ ತಹಶೀಲ್ದಾರರು ಹಾಗೂ ತಾಲ್ಲೂಕ್ ಆರೋಗ್ಯಾಧಿಕಾರಿಗಳು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕ್ ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು 15 ರಿಂದ 17 ವಯಸ್ಸಿನೊಳಗಿನವರ ಲಸಿಕಾಕರಣವು ಮುಂದುವರೆದಿದ್ದು, ಮೊದಲ ಡೋಸ್ ಶೇ.77 ಹಾಗೂ ಎರಡನೇ ಡೋಸ್ ಶೇ.66 ಪೂರ್ಣಗೊಂಡಿದೆ ಎಂದರಲ್ಲದೇ ಲಸಿಕಾಕರಣವನ್ನು ತೀವ್ರಗತಿಯಲ್ಲಿ ಹೆಚ್ಚಿಸಿ ಶೇ.100ರಷ್ಟು ಪೂರ್ಣಗೊಳಿಸಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ತಡೆಗಟ್ಟುವುದಕ್ಕಾಗಿ 12 ರಿಂದ 14 ವಯೋಮಾನದ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು ಮೊದಲ ಡೋಸ್ ಶೇ.58ರಷ್ಟು ಪೂರ್ಣಗೊಂಡಿದೆ ಎಂದ ಅವರು ತಾಲ್ಲೂಕ್ ವೈದ್ಯಾಧಿಕಾರಿಗಳು ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚು ಮಕ್ಕಳಿರುವ ಕಡೆ ಲಸಿಕಾ ಕೇಂದ್ರಗಳನ್ನು ತೆರೆದು ಶೇ.100ರಷ್ಟು ಲಸಿಕಾಕರಣವನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದರು. 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಲಸಿಕಾಕರಣ ಮೊದಲ ಡೋಸ್ ಶೇ.100ರಷ್ಟು ಗುರಿ ಸಾಧಿಸಲಾಗಿದ್ದು, ಎರಡನೇ ಡೋಸ್ ಶೇ.100ರಷ್ಟು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಿಗೂ ಸ್ಮಶಾನ ಭೂಮಿಯನ್ನು ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಸ್ಮಶಾನ ಜಾಗದ ಮಾಹಿತಿಯನ್ನು ಪಡೆದು ಫಲಕವನ್ನು ಅಳವಡಿಸಲು ಸೂಕ್ತ ಕ್ರಮವಹಿಸಲು ಆಯಾ ತಹಶೀಲ್ದಾರ್ ಹಾಗೂ ತಾಲ್ಲೂಕ್ ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಗ್ರಾಮ ಠಾಣಾಗಳಲ್ಲಿ ಖಾಲಿ ಇರುವ ಜಾಗಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಜಾಗವನ್ನು ಗುರುತಿಸಬೇಕು. ನಗರ ಪ್ರದೇಶಗಳಲ್ಲಿ ಸರ್ಕಾರಿ ಕಟ್ಟಡ, ಸಮುದಾಯ ಭವನಗಳಿದ್ದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಿಸಲು ಇಲ್ಲವೆ ನಿವೇಶನ ಪಡೆದುಕೊಳ್ಳಲು ಪಾಲಿಕೆ ಮತ್ತು ಟೂಡಾ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆಯ ಸುಪರ್ದಿನಲ್ಲಿರುವ ಸರ್ಕಾರಿ ಶಾಲಾ ಕಟ್ಟಡಗಳಿರುವ ಜಾಗವವನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಲು ಡಿಡಿಪಿಐರವರಿಂದ ಮಾಹಿತಿ ಪಡೆದು ತಹಶೀಲ್ದಾರ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು ಕ್ರಮ ವಹಿಸಬೇಕೆಂದು ತಿಳಿಸಿದರು.
ನಗರಾಭಿವೃದ್ಧಿ ಯೋಜನಾ ನಿರ್ದೇಶಕಅಂಜನಪ್ಪ ಮಾತನಾಡಿ, ವಾಜಪೇಯಿ, ಅಂಬೇಡ್ಕರ್, ವಸತಿ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು. ಈವರೆಗೂ ಪೂರ್ಣ ಪ್ರಮಾಣದಲ್ಲಿ ಪ್ರಸ್ತಾವನೆ ಸಲ್ಲಿಸದಿರುವ ನಗರ ಸ್ಥಳೀಯ ಸಂಸ್ಥೆಗಳು ಶೀಘ್ರ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಭೂಮಿ ಪೆಂಡೆನ್ಸಿ ಪ್ರಗತಿ ಪರಿಶೀಲನೆ, ಪೈಕಿ-ಪಹಣಿ ಒಟ್ಟುಗೂಡಿಸುವಿಕೆ, 3/9 ಮಿಸ್‍ಮ್ಯಾಚ್, ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಸರ್ಕಾರಿ ಜಮೀನು ಕಾಯ್ದಿರಿಸುವುದು, ಸಾಮಾಜಿಕ ಭದ್ರತಾ ಯೋಜನೆ, ರೈಲ್ವೇ ಯೋಜನೆ, ಎತ್ತಿನ ಹೊಳೆ ಯೋಜನೆ, ಭೂ-ಸ್ವಾಧೀನ ಪ್ರಗತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿ. ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ತಹಶೀಲ್ದಾರ್ ಮೋಹನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಾರಿಕಾರಿ ಡಾ. ನಾಗೇಂದ್ರಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 3 times, 1 visits today)