ತುಮಕೂರು :

      ರಾಜ್ಯದ 2019-20ನೇ ಸಾಲಿನ ಆಯವ್ಯಯದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ್ ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸರ್ಕಾರ ಮಂಡಿಸಿರುವ ಈ ಆಯವ್ಯಯವನ್ನು ಯಾವುದೇ ಕ್ಷೇತ್ರದ ಶಾಸಕರನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿಲ್ಲ. ಇಡೀ ರಾಜ್ಯದ ಎಲ್ಲ ವರ್ಗಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವ ಈ ಆಯವ್ಯಯವು ಜನಪರ ಹಾಗೂ ರೈತಪರವಾಗಿದೆ ಎಂದು ತಿಳಿಸಿದರು.

      ಕಳೆದ 2018-19ರಲ್ಲಿ 2,18,488ಕೋಟಿ ರೂ.ಗಳಷ್ಟಿದ್ದ ಆಯವ್ಯಯ ಗಾತ್ರವನ್ನು ಪ್ರಸಕ್ತ 2019-20ನೇ ಸಾಲಿಗಾಗಿ ಅಂದಾಜು 2,34,153ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಕಳೆದ ಸಾಲಿಗೆ ಹೋಲಿಸಿದಾಗ ಸುಮಾರು ಶೇ.7.17ರಷ್ಟು ಅಂದರೆ 15,665ಕೋಟಿ ರೂ.ಗಳಷ್ಟು ಹೆಚ್ಚಿನ ಹಣವನ್ನು ಆಯವ್ಯಯದಲ್ಲಿ ಮಂಡನೆ ಮಾಡಲಾಗಿದೆ. ಈ ಆಯವ್ಯಯದಲ್ಲಿ ಬಿಡುಗಡೆ ಮಾಡಲಾಗಿರುವ 2,34,000ಕೋಟಿ ರೂ.ಗಳ ಪೈಕಿ ಕೃಷಿಗಾಗಿ 46,853 ಕೋಟಿ ರೂ.ಗಳಷ್ಟು ಮೀಸಲಿಡುವ ಮೂಲಕ ಕೃಷಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಗೆ ಹೆಚ್ಚಿನ ಅನುದಾನ::

      ಮುಖ್ಯಮಂತ್ರಿಗಳು ಹಾಗು ತಾವು ಚರ್ಚಿಸಿ ಪ್ರತಿ ಇಲಾಖೆಗಳ ಅಗತ್ಯತೆಗಳ ಬಗ್ಗೆ ವಿಮರ್ಶಿಸಿ ಬಜೆಟ್ ತಯಾರಿಸಲಾಗಿದೆ. ತಮ್ಮ ಒತ್ತಾಯದ ಮೇರೆಗೆ ಜಿಲ್ಲೆಗೆ ಈ ಬಾರಿ ದೊಡ್ಡ ಪ್ರಮಾಣದ ಅನುದಾನವನ್ನು ಕಲ್ಪಿಸಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಅವರು, ಈ ಆಯವ್ಯಯದಲ್ಲಿ ಹೇಮಾವತಿ ಜಲಾಶಯದಲ್ಲಿ ನೀರಿದ್ದರೂ ಕೂಡ ನಿಗಧಿತ ಪ್ರಮಾಣದ 24 ಟಿಎಂಸಿ ನೀರು ಜಿಲ್ಲೆಗೆ ಹರಿದಿಲ್ಲರುವುದನ್ನು ಮನಗಂಡು ಹೇಮಾವತಿ ಯೋಜನೆ ವ್ಯಾಪ್ತಿಯಲ್ಲಿ ತುಮಕೂರಿಗೆ ಸಮರ್ಪಕವಾಗಿ ನೀರು ಹರಿಸಲು ನಾಲೆ ಆಧುನೀಕರಣಕ್ಕಾಗಿ 200 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸುಮಾರು 13500 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗಿತ್ತಿಕೊಂಡಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯಡಿ ನೀರು ಸಂಗ್ರಹಣೆಗಾಗಿ ಬೈರಗೊಂಡ್ಲು ಜಲಾಶಯ ನಿರ್ಮಿಸಲು ಕೊರಟಗೆರೆ ತಾಲೂಕಿನಲ್ಲಿ ಮುಳುಗಡೆಯಾಗಲಿರುವ 2500 ಎಕರೆ ಪ್ರದೇಶದ ಭೂಮಾಲೀಕರ ಪುನರ್ವಸತಿಗಾಗಿ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರಲ್ಲದೆ ಎತ್ತಿನ ಹೊಳೆ ಯೋಜನೆಗಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿಯೂ 2500 ಎಕರೆ ಭೂಮಿ ಮುಳುಗಡೆಯಾಗಲಿದೆ. ಭೂಮಿಯನ್ನು ಕಳೆದುಕೊಂಡ ದೊಡ್ಡಬಳ್ಳಾಪುರ ಹಾಗು ಕೊರಟಗೆರೆ ತಾಲೂಕು ಸಂತ್ರಸ್ತ ರೈತರಿಗೆ ತಾರತಮ್ಯ ಮಾಡದೆ ಸಮಾನವಾಗಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. 

ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಂಚಿಕೆ: 

      ಕೊರಟಗೆರೆ, ಮಧುಗಿರಿ, ಪಾವಗಡ ಹಾಗೂ ತುಮಕೂರು ತಾಲೂಕಿಗೆ ಸಣ್ಣ ನೀರಾವರಿ ಕೆರೆ ಸಮಗ್ರ ಅಭಿವೃದ್ಧಿಗಾಗಿ 5 ಕೋಟಿ ರೂ., ಶಿರಾ ತಾಲೂಕಿನಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ 20 ಕೋಟಿ ರೂ., ತುರುವೇಕೆರೆ ತಾಲೂಕಿನ ಮಾಯಸಂದ್ರದ ಆದಿಶಕ್ತಿ ಮಾತೆಯರ ವೃದ್ಧಾಶ್ರಮ ಅಭಿವೃದ್ಧಿಗೆ 20 ಕೋಟಿ ರೂ., ಜಿಲ್ಲೆಯವರೇ ಆದ ಹಾಸ್ಯನಟ ದಿ|| ನರಸಿಂಹರಾಜು ಅವರ ಹೆಸರಿನಲ್ಲಿ ತಿಪಟೂರಿನಲ್ಲಿ ಸ್ಮಾರಕ ಸಭಾ ಮಂದಿರ ನಿರ್ಮಾಣಕ್ಕಾಗಿ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

 ಶ್ರೀಗಳ ಪ್ರಾರ್ಥನಾ ಮಂದಿರಕ್ಕೆ 5 ಕೋಟಿ:

      ಮಠ ಮಾನ್ಯಗಳ ಅಭಿವೃದ್ಧಿಯಡಿ ದಿ|| ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ಸಿದ್ದಗಂಗಾ ಮಠದ ಪ್ರಾರ್ಥನ ಮಂದಿರಕ್ಕೆ 5 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆಯಲ್ಲದೆ ಕೊರಟಗೆರೆ ಕ್ಷೇತ್ರದ ತಂಗನಹಳ್ಳಿ ಮಠ, ಗುಬ್ಬಿ ತಾಲೂಕಿನ ಬಸವ ಬೃಂಗೇಶ್ವರ ಮಠ, ಶಿವಗಂಗೆಯ ಮಹಾಲಕ್ಷ್ಮಿ ತಿಗಳರ ಮಹಾ ಸಂಸ್ಥಾನ, ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಠ, ಶಿರಾ ತಾಲೂಕು ಜಗದ್ಗುರು ಚಲವಾದಿ ಪೀಠ, ಕುಣಿಗಲ್ ತಾಲೂಕು ಬೆಟ್ಟಹಳ್ಳಿ ಮಠ, ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟ, ಮಧುಗಿರಿ ತಾಲೂಕಿನ ರಾಮಕೃಷ್ಣ ಆಶ್ರಮಗಳಿಗೆ ತಲಾ 1 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ:

      ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವಿಪರೀತ ಒತ್ತಡದ ವಾತಾವರಣ ಸೃಷ್ಟಿಯಾಗಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ 60 ಕೋಟಿ ರೂ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ತುಮಕೂರು ಸೇರಿ 10 ಜಿಲ್ಲೆಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಸ್ತನ ರೇಖನ ವ್ಯವಸ್ಥೆ ಪ್ರಾರಂಭ, 5 ಜಿಲ್ಲೆಗಳಲ್ಲಿ ಮೊರಾರ್ಜಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆ ಆರಂಭಕ್ಕೆ 20 ಕೋಟಿ ರೂ., ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರಾದ ವೀರಾಪುರವನ್ನು ಮಾದರಿ ಗ್ರಾಮವನ್ನಾಗಿಸಿ ಸಾಂಸ್ಕøತಿಕ ಹಾಗೂ ಪಾರಂಪರಿಕ ಕೇಂದ್ರವನ್ನಾಗಿ ಮಾಡಲು 25 ಕೋಟಿ ರೂ., ಮಂಡ್ಯ-ಬೀದರ್-ಹಾಸನ ಜಿಲ್ಲೆ ಸೇರಿದಂತೆ ಜಿಲ್ಲಾ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು 4 ಕೋಟಿ ರೂ., ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಮತ್ತಿತರ ಅಭಿವೃದ್ಧಿ ಕಾರ್ಯಗಳಿಗಾಗಿ 125 ಕೋಟಿ ರೂ., ಹೊಸ ಉದ್ದಿಮೆಗಳ ಪ್ರೋತ್ಸಾಹಕ್ಕಾಗಿ 7 ಕೋಟಿ ರೂ. ವೆಚ್ಚದಲ್ಲಿ ನಾವಿನ್ಯತೆ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

 ವಸತಿ ಶಾಲೆಗಳಿಗೆ 125 ಕೋಟಿ ರೂ:

      ಆಯವ್ಯಯ ಹೊರತುಪಡಿಸಿ ಇಲಾಖೆಗಳಲ್ಲಿ ಕಳೆದ ವರ್ಷ ಖರ್ಚಾಗದೆ ಬಾಕಿ ಉಳಿದಿರುವ ಅನುದಾನದಲ್ಲಿ ಕೊರಟಗೆರೆ ತಾಲೂಕು ಕೋಳಾಲ ಗ್ರಾಮದಲ್ಲಿ ಪರಿಶಿಷ್ಟ ವರ್ಗದ ವಸತಿ ಶಾಲೆ ಸೇರಿದಂತೆ ತುರುವೇಕೆರೆ ತಾಲೂಕು ಮಣಿಚೆಂಡೂರು ಗ್ರಾಮ, ಕೊರಟಗೆರೆ ತಾಲೂಕು ಚನ್ನರಾಯನದುರ್ಗ, ಗುಬ್ಬಿ ತಾಲೂಕು ಮಾವಿನಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿಯ ಹಂದನಕೆರೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ 4 ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಒಟ್ಟಾರೆ 125 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಮಂಜೂರು ಮಾಡಲಾಗಿದೆ. ಇದರೊಂದಿಗೆ ಬೆಂಗಳೂರಿನಿಂದ ತುಮಕೂರು-ವಸಂತನರಾಪುರಕ್ಕೆ ಲಿಂಕ್ ಕಲ್ಪಿಸಲು ನೂತನ ಸಬರ್‍ಬನ್ ರೈಲು ಅಥವಾ ಮೆಟ್ರೋ ರೈಲು ಮಾರ್ಗ ನಿರ್ಮಾಣ ಸೇರಿ 2 ಯೋಜನೆಗಳನ್ನು ಕೈಗೊಳ್ಳಲು ಚಿಂತಿಸಲಾಗಿದೆ. ಸಬರ್ ಬನ್ ರೈಲು ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆಯಿಂದ ಅನುಮತಿ ದೊರೆಯದಿದ್ದ ಪಕ್ಷದಲ್ಲಿ ಮೆಟ್ರೋ ರೈಲು ಮಾರ್ಗವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

2 ಲಕ್ಷ ಜನರಿಗೆ ಉದ್ಯೋಗಾವಕಾಶ:

      ವಸಂತನರಸಾಪುರದಲ್ಲಿ ಸ್ವಾಧೀನಪಡಿಸಿಕೊಂಡಿರುವ 16500 ಎಕರೆ ಭೂಮಿಯಲ್ಲಿ 9500 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಿ ಈಗಾಗಲೇ ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಭೂಮಿಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿ ಆದ್ಯತೆ ಮೇಲೆ ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗುವುದು. ಪ್ರಮುಖವಾಗಿ ಜಪಾನೀಸ್ ಟೌನ್‍ಶಿಪ್ ಸೇರಿದಂತೆ ವಿವಿಧ ಕೈಗಾರಿಕೆಗಳನ್ನು ನಿರ್ಮಿಸಲು ಮುಂದಿನ 5 ವರ್ಷಗಳಲ್ಲಿ 50ಸಾವಿರ ಕೋಟಿ ರೂ.ಗಳ ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ. ಇದರಿಂದ 2 ಲಕ್ಷ ಜನರಿಗೆ ಉದ್ಯೋಗಾವಕಾಶ ನಿರ್ಮಾಣವಾಗಲಿದೆ. ಬಾಂಬೆ-ಚೆನ್ನೈ ಇಂಡಸ್ಟ್ರಿಯಲ್ ಕಾರಿಡಾರ್ ಎಂದೆನೆಸಿಕೊಳ್ಳುವ ಈ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆಸ್ಪತ್ರೆ, ಶಾಲೆ, ಮನರಂಜನಕೇಂದ್ರ, ಶಾಪಿಂಗ್ ಮಾಲ್, ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಸರ್ಕಾರಿ ಸೇರಿದಂತೆ ಖಾಸಗಿಯವರಿಗೂ ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಇಲ್ಲಿನ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಕೈಗಾರಿಕೋದ್ಯಮಿಗಳ ಸಭೆ ನಡೆಸಿ ಸ್ಥಳೀಯರಿಗೆ ಅವಕಾಶ ನೀಡುವಂತೆ ಸೂಚಿಸಲಾಗುವುದು. ಜಿಲ್ಲೆಯ ಕಾರ್ಯನಿರತ ಪತ್ರಕರ್ತರಿಗಾಗಿ ನಿವೇಶನ ಕಲ್ಪಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸಲಾಗುವುದು. ಇಲಾಖೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಪೊಲೀಸರ ವೇತನ ಹೆಚ್ಚಿಸಲು ಔರಾದ್ಕರ್ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

      ಅಲ್ಲದೆ ಕೊರಟಗೆರೆ ತಾಲೂಕು ಸಿದ್ದರಬೆಟ್ಟದಲ್ಲಿ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬೆಳಸಲು ವಿಶೇಷ ಕಾರ್ಯಕ್ರಮಗಳನ್ನು ಹಾಗೂ ಕೊರಟಗೆರೆಯ ಗಂಗಾಧರೇಶ್ವರ ದೇವಸ್ಥಾನ, ಚನ್ನರಾಯನದುರ್ಗ ಪ್ರದೇಶಾಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಉಪಸ್ಥಿತರಿದ್ದರು.

(Visited 50 times, 1 visits today)