ಗುಬ್ಬಿ:


ಜೆಡಿಎಸ್ ಪಕ್ಷದ ಸದಸ್ಯನಾಗಿ ಹಾಗೂ ನಾಲ್ಕು ಬಾರಿ ಶಾಸಕನಾಗಿ ಪಕ್ಷದ ಎಲ್ಲಾ ಸೌಲಭ್ಯಗಳನ್ನು ಪಡೆದು ಪಕ್ಷಕ್ಕೆ ದ್ರೋಹವೆಸಗಿದ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡಲೇ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಜೆ.ಡಿ.ಎಸ್.ಮುಂಖಡ ಬಿ.ಎಸ್.ನಾಗರಾಜು ಒತ್ತಾಯಿಸಿದರು.
ಪಟ್ಟಣದ ಜೆ.ಡಿ.ಎಸ್.ಕಛೇರಿಯಿಂದ ನೂರಾರು ಕಾರ್ಯಕರ್ತರೊಡನೆ ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ದ ಘೋಷಣೆಗಳನ್ನು ಕೂಗುತ್ತಾ ರಸ್ತೆ ತಡೆ ನಡೆಯಿಸಿ ಮಾತನಾಡಿದ ಅವರು ಕಳೆದ ಸುಮಾರು 20 ವರ್ಷಗಳಿಂದ ಗುಬ್ಬಿ ತಾಲ್ಲೂಕಿನ ಮತದಾರರ ಕಣ್ಣಿಗೆ ಮಣ್ಣು ಎರಚಿ ಮತಬ್ಯಾಂಕ್‍ಗಳನ್ನಾಗಿ ಪರಿವರ್ತಿಸಿದ ಖ್ಯಾತಿ ಈ ಶಾಸಕರದ್ದಾಗಿದೆ. ತಾಲ್ಲೂಕಿನ ಜನತೆಯನ್ನು ಮೂರ್ಖರನ್ನಾಗಿ ಮಾಡಿ ಯಾವುದೇ ಗುರುತಿಸುವಂತಹ ಕೆಲಸವನ್ನು ಈ ತಾಲ್ಲೂಕಿನಲ್ಲಿ ನಡೆಯದೇ ಇರುವುದು ಈ ತಾಲ್ಲೂಕಿನ ಮತದಾರರ ದೌಭಾಗ್ಯವೇ ಸರಿ ಎಂದ ಅವರು ಪಕ್ಷಕ್ಕೆ ದ್ರೋಹವೆಸಗಿ ಬೇರೆ ಪಕ್ಷಕ್ಕೆ ಮತ ನೀಡಿ ತಾನು ನಿಷ್ಟಾವಂತ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದಕ್ಕೆ ಈ ತಾಲ್ಲೂಕಿನ ಜನರೇನು ದಡ್ಡರೇನು ಅಲ್ಲ. ಆತ್ಮ ಸಾಕ್ಷಿ ಎಂಬುವುದು ಶಾಸಕರಲ್ಲಿ ಇದ್ದರೆ ಈ ಕೂಡಲೇ ಪಕ್ಷದ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಪಕ್ಷಕ್ಕೆ ದ್ರೋಹವೆಸಗಿದ ಇಂತಹ ವ್ಯಕ್ತಿಯನ್ನು ಗುಬ್ಬಿ ತಾಲ್ಲೂಕಿನ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರುಗಳು ಕ್ಷಮಿಸುವುದಿಲ್ಲ ಎಂದು ಶಾಸಕರ ಮೇಲೆ ಕಿಡಿಕಾರಿದರು.
ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ಬಾರಿಯೂ ಗೆಲುವನ್ನು ತಂದು ಕೊಟ್ಟಂತಹ ಮಾತೃ ಪಕ್ಷಕ್ಕೆ ದ್ರೋಹವೆಸಗಿದ ಶಾಸಕ ರಾಜಿನಾಮೆ ನೀಡಬೇಕು. ತಾಲ್ಲೂಕಿನ ಮತದಾರರಲ್ಲಿ ಪೊಳ್ಳು ಭರವಸೆಗಳನ್ನು ನೀಡಿ ತನ್ನ ಶಾಸಕ ಸ್ಥಾನವನ್ನು ಉಳಿಸಿಕೊಂಡಿರುವ ಶಾಸಕನನ್ನು ಈ ಬಾರಿ ಬರುವಂತಹ ಚುನಾವಣೆಯಲ್ಲಿ ಮತದಾರ ಪ್ರಭುವು ಇವರನ್ನು ದಿಕ್ಕರಿಸುತ್ತಾನೆ. ದೇವಗೌಡರನ್ನು ಸೋಲಿಸಿದಂತಹ ಕೀರ್ತಿ ಈ ಶಾಸಕನದಾಗಿದ್ದು ಇದನ್ನು ಯಾವ ಮುಖಂಡರುಗಳು ಮರೆಯುವಂತಿಲ್ಲ. ಕೇವಲ ದೂರವಾಣಿ ಮುಖಾಂತರ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿರವರು ಕರೆ ನೀಡಿದ್ದಾರೆ ಎಂದು ಸಾರ್ವಜನಿಕರ ಎದುರಿನಲ್ಲಿ ಹೇಳಿ ರಾಷ್ಟ್ರ ಮತ್ತು ರಾಜ್ಯಾಧ್ಯಕ್ಷರ ಮೇಲೆ ಕೆಟ್ಟ ಅಭಿಪ್ರಾಯಗಳು ಮೂಡುವಂತೆ ಹೇಳಿಕೆಗಳನ್ನು ನೀಡಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಉದ್ದೇಶವೇನು. ಈಗಾಗಲೇ ರಾಜ್ಯಾಧ್ಯಕ್ಷರು ಈ ಶಾಸಕನ ನಡವಳಿಕೆಯಿಂದ ಬೇಸತ್ತು ಚುನಾವಣೆ ಒಂದು ವರ್ಷ ಇರುವಾಗಲೇ ಬಿ.ಎಸ್.ನಾಗರಾಜುರವನ್ನು ಘೋಷಣೆ ಮಾಡಿದ್ದು ಈ ಶಾಸಕನ ಕರ್ತವ್ಯ ಲೋಪಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾಡಿದ ಅವರು ಪಟ್ಟಣದಲ್ಲಿ ಯಾವುದೇ ಅಭಿವೃದ್ದಿ ಕಾಣೆದೇ ಇರುವುದು ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಹಾಳಾಗಿದ್ದರೂ ಕಂಡು ಕಾಣದಂತೆ ಇರುವ ಈ ಶಾಸಕನ ವಿರುದ್ಧ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ತನಗೆ ಆಶ್ರಯ ನೀಡಿ ಅಧಿಕಾರ ನೀಡದಂತಹ ತಾಯಿ ಪಕ್ಷಕ್ಕೆ ಮತ ನೀಡದೆ ದ್ರೋಹವೆಸಗಿದ ಶಾಸಕರ ವಿರುದ್ದ ಕಾರ್ಯಕರ್ತರು ಸಿಡಿದೆದ್ದಿರುವುದು ಮುಂದಿನ ದಿನದಲ್ಲಿ ಹೊಸ ದಿಕ್ಕನ್ನು ಕಾಣಲು ಉತ್ಸಕರಾಗಿರುವ ಕಾರ್ಯಕರ್ತರುಗಳ ಆಕ್ರೋಶವನ್ನು ಈ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದ ಅವರು ನಾಲ್ಕು ಬಾರಿ ಗೆಲುವು ಸಾಧಿಸಿದೇನೆಂಬ ಅಹಂನಲ್ಲಿರುವ ಶಾಸಕ ಮುಂದಿನ ದಿನಗಳಲ್ಲಿ ಏಕ ಚಕ್ರದಿಪತ್ಯವನ್ನು ಅಳಿಸಿ ಹಾಕಲು ಜಾತ್ಯಾತೀತ ಜನತಾದಳದ ರಾಜ್ಯಾಧ್ಯಕ್ಷ ಕುಮಾರಣ್ಣನವರು ಈಗಾಗಲೇ ತಾಲ್ಲೂಕಿಗೆ ಹೊಸ ಅಭ್ಯರ್ಥಿಯನ್ನು ಘೋಷಿಸಿದ್ದು ಇದರಿಂದ ನಿರಾಸೆಗೊಂಡ ಶಾಸಕ ಯಾವ ದಾರಿ ಕಾಣದೆ ಅತಶಾ ಮನೋಭಾವದಿಂದ ಈ ರೀತಿ ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿಸಿದ ಅವರು ಇನ್ನು ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ ಎಂದು ಪತ್ರಿಕಾ ಹೇಳಿಕೆ ನೀಡುತ್ತಾ ಬೇರೆ ಪಕ್ಷದ ಬಾಗಿಲನ್ನು ತಟ್ಟತ್ತಿರುವುದು ಇವರ ನಡೆಗೆ ಕಾರ್ಯಕರ್ತರುಗಳು ಹಾಗೂ ತಾಲ್ಲೂಕಿನ ಮತಭಾಂದವರು ಸರಿಯಾದ ಪಾಠವನ್ನು 2023ರ ಚುನಾವಣೆಯಲ್ಲಿ ತೋರಿಸಿಯೇ ತೀರುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್‍ರವರ ಪ್ರತಿಕೃತಿಯನ್ನು ಬೆಂಕಿ ಹಚ್ಚಿ ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು .
ಈ ಪ್ರತಿಭಟನೆಯಲ್ಲಿ, ಶಿವಲಿಂಗಯ್ಯ, ಪಿರ್ದೋಷ್ ಅಲಿ, ರಘು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಜಗದೀಶ್, ಚಿಕ್ಕವೀರಪ್ಪ, ಕೋಡ್ಲಿ ಲೋಕೇಶ್, ಹಾಗೂ ನೂರಾರು ಕಾರ್ಯಕರ್ತರು ಹಾಗೂ ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

(Visited 257 times, 1 visits today)