ತುಮಕೂರು:

      ಈಗ ರಜಾ ದಿನವಾಗಿರುವುದರಿಂದ ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿರುವ ಅವ್ಯವಸ್ಥೆಯನ್ನು ಮೇ 20ರೊಳಗಾಗಿ ಸರಿಪಡಿಸಿ ಫೋಟೋ ಸಹಿತ ತಮಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಜಿಲ್ಲೆಯ ವಸತಿ ನಿಲಯಗಳ ಮೇಲ್ವಿಚಾರಕರು/ಪಾಲಕರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರಜಾ ದಿನಗಳು ಮುಗಿಯುವುದರೊಳಗೆ ಜಿಲ್ಲೆಯ ಸರ್ಕಾರಿ ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ ಮತ್ತು ಸರ್ಕಾರಿ ವಸತಿ ನಿಲಯಗಳಲ್ಲಿ ದುರಸ್ಥಿಯಲ್ಲಿರುವ ಶೌಚಾಲಯ, ಅಡುಗೆ ಮನೆ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿಗಳ ಕೊಠಡಿಗಳನ್ನು ದುರಸ್ಥಿಪಡಿಸಿ ಅಗತ್ಯ ಮೂಲಭೂತ ಸೌರ್ಕಯಗಳನ್ನು ಕಲ್ಪಿಸಬೇಕೆಂದು ಅವರು ನಿರ್ದೇಶನ ನೀಡಿದರು.

      ನಗರ, ಗ್ರಾಮೀಣ ಪ್ರದೇಶಗಳಲ್ಲಿರುವ ವಸತಿ ನಿಲಯಗಳಲ್ಲಿ ಶೌಚಾಲಯ ಹಾಗೂ ಸ್ನಾನದ ಕೊಠಡಿಗಳಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿದಿನ ಸ್ವಚ್ಛತೆ ಕಾಪಾಡಲು ಚಾರ್ಟ್ ಬಳಸಬೇಕು. ಸ್ವಚ್ಛ ಮಾಡುವವರು ಈ ಚಾರ್ಟ್‍ನಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು. ಹಾರ್ಪಿಕ್ ಬಳಸಿಯೇ ಶೌಚಾಲಯ ಸ್ವಚ್ಛಗೊಳಿಸಬೇಕು. ಶೌಚಾಲಯಗಳು ಸ್ವಚ್ಛತೆಯಿಂದ ಕೂಡಿದ್ದರೆ ಮಾತ್ರ ಮಕ್ಕಳಿಗೆ ಬಳಸಲು ಮನಸ್ಸಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಹಾಸ್ಟೆಲ್‍ಗಳಲ್ಲಿ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಮೇಲ್ವಿಚಾರಕರಿಗೆ ಅವರು ಸೂಚನೆ ನೀಡಿದರು.

      ಹಾಸ್ಟೆಲ್ ವಾರ್ಡನ್‍ಗಳು ಮಕ್ಕಳ ಪೋಷಕರಿದ್ದಂತೆ. ಅವರ ಮೇಲೆ ಕಾಳಜಿ ವಹಿಸುವುದು ವಾರ್ಡನ್‍ಗಳ ಜವ್ದಾಬಾರಿ. ವಾರ್ಡನ್‍ಗಳು ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿಯುವಂತೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದರಲ್ಲದೆ ಹಾಸ್ಟೆಲ್ ಹೊರಾಂಗಣದಲ್ಲಿ ಕೈತೋಟ ನಿರ್ಮಾಣ ಮಾಡಿ ಉತ್ತಮ ಪರಿಸರ ಕಲ್ಪಿಸಬೇಕು. “ನಮ್ಮ ಮನೆ-ನಮ್ಮ ಮಕ್ಕಳು” ಎಂಬ ಭಾವನೆಯಿಂದ ವಿದ್ಯಾರ್ಥಿ ನಿಲಯಗಳನ್ನು ಹಾಗೂ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

      ಮಕ್ಕಳ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರನ್ನು ಬಳಸಬೇಕು. ಇಡ್ಲಿ ಮಾಡುವಾಗ ಬಟ್ಟೆಯನ್ನು ಬಳಸಬೇಕು. ವಾರಕ್ಕೊಮ್ಮೆ ಫ್ರೀಡ್ಜ್ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ರೋಗಾಣುಗಳು ಉತ್ಪತ್ತಿಯಾಗುತ್ತವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

      ಶಿರಾ, ಮಧುಗಿರಿ, ಕೊರಟಗೆರೆ ತಾಲೂಕಿನಲ್ಲಿರುವ ವಸತಿ ನಿಲಯಗಳ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಮಕ್ಕಳನ್ನು ವೈದ್ಯ ತಪಾಸಣೆಗೊಳಪಡಿಸಬೇಕು. ಕಡಿಮೆ ತೂಕವಿರುವ ಮಕ್ಕಳ ಪಟ್ಟಿ ಮಾಡಿ ನನಗೆ ವರದಿ ನೀಡಬೇಕು. ಸೆಪ್ಟಂಬರ್ ತಿಂಗಳೊಳಗೆ ಮಕ್ಕಳು ಬೆಳವಣಿಗೆ ಹೊಂದಿಲ್ಲದಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

      ಉಪ ಕಾರ್ಯದರ್ಶಿ ಡಾ|| ಪ್ರೇಮ್‍ಕುಮಾರ್ ಮಾತನಾಡಿ ಹಾಸ್ಟೆಲ್ ಅಂದರೆ ಊಟ ಹಾಕುವ ಛತ್ರಗಳ ರೀತಿ ಭಾವಿಸಿಬೇಡಿ. ಅಂತಹ ಪರಿಕಲ್ಪನೆಯಿದ್ದರೆ ಮಕ್ಕಳಿಗೆ ಉತ್ತಮ ಪರಿಸರ ನೀಡಲು ಸಾಧ್ಯವಾಗುವುದಿಲ್ಲ, ನಮ್ಮ ಕುಟುಂಬ ಎಂಬಂತೆ ಭಾವಿಸಬೇಕು ಎಂದು ಸಲಹೆ ಹೇಳಿದರು.

      ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ|| ಜಿ.ಪಿ ದೇವರಾಜು ಮಾತನಾಡಿ ಈ ಬಾರಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿಸುವ ಫಲಿತಾಂಶ ಬಂದಿಲ್ಲದಿದ್ದರೂ ಸಮಾಧಾನಕರ ಫಲಿತಾಂಶ ಬಂದಿದೆ. ಆದರೂ ಹಾಸ್ಟೆಲ್ ವಿದ್ಯಾರ್ಥಿಗಳ ಓದಿನ ಬಗ್ಗೆ ಗಮನಹರಿಸಬೇಕು. ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಆದ್ಯತೆ ನೀಡಿ ಉತ್ತಮ ಅಂಕ ಗಳಿಸುವಂತೆ ವಾರ್ಡನ್‍ಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಜ್‍ಕುಮಾರ್ ಮಾತನಾಡಿದರು. ಪಿಯುಸಿ ಪರೀಕ್ಷೆಯಲ್ಲಿ 574 ಅಂಕ ಗಳಿಸಿರುವ ತಿಪಟೂರಿನ ಮೌನೇಶ್ ಹಾಗೂ ಅಂಬರೀಶ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಫೌಂಡೇಶನ್ ವತಿಯಿಂದ 50ಸಾವಿರ ರೂ.ಗಳ ಚೆಕ್ ಅನ್ನು ವಿತರಿಸಲಾಯಿತು.
ಸಭೆಯಲ್ಲಿ ವಿದ್ಯಾರ್ಥಿ ನಿಲಯಗಳ ಪಾಲಕರು ಹಾಗೂ ಮೇಲ್ವಿಚಾರಕರು ಹಾಜರಿದ್ದರು.

(Visited 23 times, 1 visits today)