ತುಮಕೂರು: ಮತ ಎಣಿಕೆಗೆ ಸಕಲ ಸಿದ್ಧತೆ!

ತುಮಕೂರು:

      ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಇಂದು ಬೆಳಿಗ್ಗೆ 8 ಗಂಟೆಯಿಂದ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ನಡೆಯಲಿದೆ.

      ಇದಕ್ಕೂ ಮುನ್ನ 7.30 ಗಂಟೆಗೆ ಚುನಾವಣೆ ವೀಕ್ಷಕರು ಹಾಗೂ ರಾಜಕೀಯ ಪಕ್ಷಗಳ ಏಜೆಂಟರ ಸಮಕ್ಷಮದಲ್ಲಿ ಮತ ಯಂತ್ರಗಳನ್ನು ಇರಿಸಿರುವ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ತುಮಕೂರು ಲೋಕಸಭಾ ಕ್ಷೇತ್ರಕ್ಕೊಳಪಡುವ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಮಧುಗಿರಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆಯನ್ನು ವಿಜ್ಞಾನ ಕಾಲೇಜಿನಲ್ಲಿ ಹಾಗೂ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ ಮತ್ತು ಗುಬ್ಬಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತ ಎಣಿಕೆಯು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಿಗಿ ಭದ್ರತೆಯಲ್ಲಿ ನಡೆಯಲಿದೆ.

      ಮತ ಎಣಿಕೆಗಾಗಿ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ 13 ಟೇಬಲ್ ಹಾಗೂ ಉಳಿದಂತೆ 7 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳಂತೆ ಒಟ್ಟು 111 ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ(262 ಮತಗಟ್ಟೆ), ತುಮಕೂರು ನಗರ(254 ಮತಗಟ್ಟೆ), ಹಾಗೂ ಕೊರಟಗೆರೆ(242 ಮತಗಟ್ಟೆ) ಕ್ಷೇತ್ರದ ಮತ ಎಣಿಕೆಯನ್ನು 19 ಸುತ್ತಿನಲ್ಲಿ, ಮಧುಗಿರಿ(248 ಮತಗಟ್ಟೆ)ಕ್ಷೇತ್ರದ ಎಣಿಕೆಯನ್ನು 18 ಸುತ್ತಿನಲ್ಲಿ, ತಿಪಟೂರು(233 ಮತಗಟ್ಟೆ), ತುರುವೇಕೆರೆ (229 ಮತಗಟ್ಟೆ) ಹಾಗೂ ತುಮಕೂರು ಗ್ರಾಮಾಂತರ (226 ಮತಗಟ್ಟೆ) ಮತ ಎಣಿಕೆಯನ್ನು 17 ಸುತ್ತಿನಲ್ಲಿ, ಗುಬ್ಬಿ(213 ಮತಗಟ್ಟೆ) ಕ್ಷೇತ್ರದ ಎಣಿಕೆಯನ್ನು 16 ಸುತ್ತಿನಲ್ಲಿ ನಡೆಯಲಿದೆ. ಪ್ರತಿ ಟೇಬಲ್‍ಗೆ ಒಬ್ಬ ಎಣಿಕೆ ಸೂಪರ್‍ವೈಸರ್, ಒಬ್ಬ ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ.

ಅಂಚೆ ಮತ ಪತ್ರ ಎಣಿಕೆ :-

       ಸೇವೆಯಲ್ಲಿರುವವರ ETPBS (Electronically transmitted postal ballot system)  ಮತ ಪತ್ರ ಹಾಗೂ ಅಂಚೆ ಮತ ಪತ್ರಗಳ ಎಣಿಕೆಯನ್ನು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಇಟಿಪಿಬಿಎಸ್‍ಗಾಗಿ 2 ಟೇಬಲ್, ಅಂಚೆ ಮತ ಪತ್ರಗಳ ಮತ ಎಣಿಕೆಗಾಗಿ 4 ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಟೇಬಲ್‍ಗೆ ಒಬ್ಬರು ಸೂಪರ್‍ವೈಸರ್ ಹಾಗೂ ಇಬ್ಬರು ಸಹಾಯಕರನ್ನು ನೇಮಕ ಮಾಡಲಾಗಿದೆ. ಅಂಚೆ ಮತ ಪತ್ರ ಸ್ವೀಕರಿಸಲು ಮೇ 23ರ ಬೆಳಿಗ್ಗೆ 7.59 ಗಂಟೆಯವರೆಗೂ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

ವೀಕ್ಷಕರ ವೀಕ್ಷಣೆಯಲ್ಲಿ ಮತ ಎಣಿಕೆ :-

      ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯದ ವೀಕ್ಷಣೆಗಾಗಿ 4 ಮಂದಿ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಚಿಕ್ಕನಾಯಕನಹಳ್ಳಿ ಹಾಗೂ ತಿಪಟೂರು ಕ್ಷೇತ್ರಗಳಿಗೆ ಹೇಮಂತಕುಮಾರ್ ಪಧಿ, ತುರುವೇಕೆರೆ ಹಾಗೂ ತುಮಕೂರು ನಗರ ಕ್ಷೇತ್ರಕ್ಕೆ ರೀನಾಸಿಂಗ್, ತುಮಕೂರು ಗ್ರಾಮಾಂತರ ಹಾಗೂ ಕೊರಟಗೆರೆ ಕ್ಷೇತ್ರಕ್ಕೆ ಬನ್ಷ್ ಬಹಾದೂರ್ ವರ್ಮ, ಗುಬ್ಬಿ ಹಾಗೂ ಮಧುಗಿರಿ ಕ್ಷೇತ್ರಕ್ಕೆ ಶೀಲ್‍ಧರ್ ಸಿಂಗ್ ಯಾದವ್ ಇವರ ವೀಕ್ಷಣೆಯಲ್ಲಿ ಮತ ಎಣಿಕೆ ನಡೆಯಲಿದೆ.

      ಎನ್‍ಐಸಿ ಸಾಫ್ಟ್‍ವೇರ್ ಮತ್ತು ಸುವಿಧ ಸಾಫ್ಟ್‍ವೇರ್‍ನಲ್ಲಿ ಮತದಾನದ ಅಂಕಿ-ಅಂಶಗಳನ್ನು ಎಂಟ್ರಿ ಮಾಡಿ ಅಪ್‍ಲೋಡ್ ಮಾಡಲಾಗುವುದು. ಪ್ರತಿ ರೌಂಡ್‍ನ ಪ್ರಗತಿಯನ್ನು ಮೈಕ್ ಮೂಲಕ ಪ್ರಕಟಿಸಲು ಕ್ರಮವಹಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ಸುವಿಧ ಸಾಫ್ಟ್‍ವೇರ್‍ನಲ್ಲಿ ಅಪ್ ಲೋಡ್ ಮಾಡಿದ ನಂತರ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

       ಮತ ಎಣಿಕೆ ಏಜೆಂಟರ್‍ಗಳಿಗೆ ಪಾಸ್‍ಗಳನ್ನು ಈಗಾಗಲೇ ವಿತರಿಸಲಾಗಿದ್ದು, ಪಾಸ್‍ಗಳನ್ನು ತಂದವರಿಗೆ ಮಾತ್ರ ನಿಗಧಿತ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಟೇಬಲ್‍ಗಳಿಗೆ ಪ್ರವೇಶ ನೀಡಲಾಗುವುದು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಎಣಿಕಾ ಕೇಂದ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಮತ ಎಣಿಕಾ ಕೇಂದ್ರಕ್ಕೆ ಎಣಿಕೆ ಏಜೆಂಟರುಗಳು ಮೊಬೈಲ್, ಕ್ಯಾಮೆರಾ, ಕ್ಯಾಲಿಕ್ಯುಲೇಟರ್, ಸಿಗರೇಟ್, ಬೀಡಿ, ಮದ್ಯ, ನೀರು, ನೀರಿನ ಬಾಟಲ್, ಇಂಕ್‍ಪೆನ್, ತಂಬಾಕು ವಸ್ತುಗಳು, ಯಾವುದೇ ರೀತಿಯ ಆಯುಧಗಳನ್ನು ಮತ ಎಣಿಕಾ ಕೇಂದ್ರದೊಳಗೆ ತರುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಮೇ 23ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ತುಮಕೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಬಿಗಿಭದ್ರತೆ :-

     ಮತ ಎಣಿಕಾ ಕಾರ್ಯವನ್ನು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ 7 ಡಿಎಸ್‍ಪಿ, 12 ಸಿಪಿಐ, 28 ಪಿಎಸ್‍ಐ, 47 ಎಎಸ್‍ಐ, 174 ಹೆಚ್‍ಸಿ/ಟಿಸಿ, 37 ಡಬ್ಲ್ಯೂಪಿಸಿ ಸಿಬ್ಬಂದಿಗಳನ್ನು ಹಾಗೂ 6 ಕೆಎಸ್‍ಆರ್‍ಪಿ(210 ಮಂದಿ) ತುಕಡಿ, 1 ಬಿ.ಎಸ್.ಎಫ್(100 ಮಂದಿ), 1 ಸಿಎಪಿಎಫ್ (50 ಮಂದಿ) ಸೇರಿದಂತೆ 600 ಅರೆ ಸೇನಾ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸಂಚಾರ ಬದಲು :-

      ಬಿ.ಹೆಚ್.ರಸ್ತೆಯ ವಿವಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿರುವುದರಿಂದ ಬೆಂಗಳೂರು ಕಡೆ ಹೋಗುವ ಭಾರಿ ವಾಹನಗಳ ಸಂಚಾರವನ್ನು ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಿಂದ ಕೋತಿತೋಪು, ಹನುಮಂತಪುರ ಮಾರ್ಗ ಹಾಗೂ ಒಳ ಬರಲು ಹನುಮಂತಪುರ, ಕೋತಿತೋಪು ಮೂಲಕ ಸಂಚರಿಸಲು ಮಾರ್ಗ ಬದಲಾವಣೆ ವ್ಯವಸ್ಥೆ ಮಾಡಲಾಗಿದೆ. ಲಘು ವಾಹನಗಳು ಎಸ್.ಐ.ಟಿ., ಗಂಗೋತ್ರಿ ನಗರ, ಎಸ್.ಎಸ್.ಪುರಂ, ಭದ್ರಮ್ಮ ವೃತ್ತದಿಂದ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಹಾಗೂ ಬಿ.ಹೆಚ್.ರಸ್ತೆಯ 9ನೇ ಕ್ರಾಸ್‍ನಿಂದ ಶಿವಕುಮಾರ ಸ್ವಾಮೀಜಿ ಸರ್ಕಲ್‍ವರೆಗೂ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಸುಸಜ್ಜಿತ ಮಾಧ್ಯಮ ಕೇಂದ್ರ :-

      ಮಾಧ್ಯಮ ಪ್ರತಿನಿಧಿಗಳ ಅನುಕೂಲಕ್ಕಾಗಿ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಮತ ಎಣಿಕಾ ಫಲಿತಾಂಶವನ್ನು ವೀಕ್ಷಿಸಲು ಡಿಸ್‍ಪ್ಲೇ ಪರದೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಸುತ್ತಿನ ಎಣಿಕೆ ಮಾಹಿತಿಯನ್ನು ಪ್ರದರ್ಶಿಸಲಾಗುವುದು. ಮಾಧ್ಯಮದವರ ಮಾಹಿತಿ ರವಾನೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

      ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ರಾಕೇಶ್ ಕುಮಾರ್ ಹಾಗೂ ಚುನಾವಣಾ ವೀಕ್ಷಕರು ಇಂದು ತುಮಕೂರು ವಿವಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ ಮತ ಎಣಿಕೆಯನ್ನು ಸುಗಮವಾಗಿ ನಡೆಸಲು ಸಿದ್ಧತೆಗಳನ್ನು ಅಂತಿಮವಾಗಿ ಪರಿಶೀಲಿಸಿದರು.

 

(Visited 15 times, 1 visits today)

Related posts