ಮಧುಗಿರಿ :
ಚುನಾವಣೆಯಲ್ಲಿ ನೀಡಿದ ಮಾತಿನಂತೆ ಈ ಗ್ರಾಮದ ರಸ್ತೆಗೆ ಅನುದಾನ ನೀಡಿದ್ದು, ಜನರ ಸೇವೆಗಾಗಿ ಎಲ್ಲ ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ಮಧುಗಿರಿ ತಾಲೂಕು ಕಸಬಾ ಹೋಬಳಿಯ ಸೋಗೇನಹಳ್ಳಿಯಲ್ಲಿ 1 ಕೋಟಿ ರೂ. ವೆಚ್ಚದ ಸೋಗೇನಹಳ್ಳಿ-ಗೊಲ್ಲರಹಟ್ಟಿ-ಗೌರಿಬಿದನೂರು-ಹಿಂದೂಪೂರ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ಶಾಂತಿಯ ವಾತವರಣವನ್ನು ನಾನು ಬಯಸಿದ್ದು, ಜನರ ಸೇವಕರಂತೆ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲಗುರಿಯಾಗಿದ್ದು, ಯಾರೂ ರಾಜಕೀಯ ಬೆರಸಬಾರದು ಎಂದರು.
ಅಭಿವೃದ್ಧಿ ಕಾಮಗಾರಿಗೆ ಹಣಕಾಸಿನ ತೊಂದರೆಯಿಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎತ್ತಿನಹೊಳೆ ಯೋಜನೆಯ 410 ಕೋಟಿ ಅನುದಾನ ಬಿಡುಗಡೆಯಾಗಿದ್ದು, ನೀರಾವರಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. 3-4 ವರ್ಷಗಳಲ್ಲಿ ನೀರು ನಮ್ಮ ಕೆರೆಗಳಿಗೆ ಹರಿಯಲಿದೆ. ಆದ್ದರಿಂದ ಎಲ್ಲರೂ ಧೈರ್ಯದಿಂದ ಬದುಕು ಸಾಗಿಸಬೇಕು. ಬರಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಅಗತ್ಯ ಕಾರ್ಯವನ್ನು ಮಾಡುತ್ತಿದ್ದು, ರೈತರು ಹಾಗೂ ಸಾರ್ವಜನಿಕರು ಮಳೆ ನೀರನ್ನು ವ್ಯರ್ಥ ಮಾಡದೆ ಬಳಸಬೇಕು. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಸರ್ಕಾರ ಕಟಿಬದ್ಧವಾಗಿದ್ದು, ನಿಮ್ಮ ಸಹಕಾರದಿಂದ ಅದನ್ನು ಸಾಧಿಸಿ ತೋರಿಸುವುದಾಗಿ ಭರವಸೆ ನೀಡಿದರು.
ತಾ.ಪಂ.ಸದಸ್ಯ ರಂಗನಾಥ್ ಮಾತನಾಡಿ ನಾನೂ ಕಾಂಗ್ರೆಸ್ ಸದಸ್ಯನಾಗಿದ್ದರೂ ಪಕ್ಷ ಭೇದ ಮಾಡದೆ ರಾಜಕೀಯ ಮಾಡುವ ಶಾಸಕರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಈ ರಸ್ತೆಯು ನಾನು ಸದಸ್ಯನಾಗಿ ಮೂರು ವರ್ಷಕ್ಕೆ ದುರಸ್ಥಿಯಾಗುತ್ತಿದ್ದು, ಸಂತಸ ತಂದಿದೆ. ಮುಂದೆಯೂ ಇದೇ ರೀತಿಯ ಸಹಕಾರವನ್ನು ಶಾಸಕರಿಂದ ಬಯಸುವುದಾಗಿ ತಿಳಿಸಿ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲು ಸರ್ಕಾರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದರು.