ಸೋಲನ್ನು ಸವಾಲಾಗಿ ಸ್ವೀಕರಿಸಿ – ಆರ್.ಸುದೀಪ್ ಕುಮಾರ್

 ಮಿಡಿಗೇಶಿ :

      ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶ್ರಮಸಂಸ್ಕøತಿ ಹಿನ್ನೆಲೆ ಹೊಂದಿದ್ದು, ಅವರಲ್ಲಿ ಕ್ರೀಡಾಸ್ಪೂರ್ತಿ ಹೆಚ್ಚಾಗಿದೆ. ಇಂತಹ ಪ್ರತಿಭೆಗಳಿಗೆ ಸೂಕ್ತ ತರಬೇತಿ ನೀಡಿದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ. ಆಟಗಾರರು ಕ್ರೀಡಾಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಎದುರಾಗುವ ಪ್ರತಿಯೊಂದು ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡಾಗ, ಬಹುದೊಡ್ಡ ಗೆಲುವು ನಿಮ್ಮದಾಗಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಂಯೋಜಕರಾದ ಆರ್.ಸುದೀಪ್‍ಕುಮಾರ್ ಕರೆ ನೀಡಿದರು.

       ಅವರು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರಕಾಲೇಜುಗಳ ಮಹಿಳೆಯರ ಥ್ರೋಬಾಲ್ ಮತ್ತು ಟೆನ್ನಿಕಾಯ್ಟ್ ಪಂದ್ಯಾವಳಿಗಳ ವಿಜೇತರಿಗೆ ಬಹುಮಾನ ಮತ್ತು ಟ್ರೋಫಿ ವಿತರಿಸಿ ಮಾತನಾಡಿ ಇಡೀ ಜೀವನ ಒಂದು ಕ್ರೀಡೆಯಿದ್ದಂತೆ ಆಟಗಾರರು ಗೆಲುವಿಗಾಗಿ ಸತತ ಶ್ರಮಪಡುತ್ತಿದ್ದರೆ, ಪ್ರತಿಸ್ಪರ್ಧಿಗಳು ಅವರನ್ನು ಸೋಲಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೆಯೇ ನಿಜಜೀವನದಲ್ಲಿಯೂ ಸಹ ಸಾಧನೆಗೆ ಬರುವ ಅಡ್ಡಿಆತಂಕಗಳನ್ನು ನಿವಾರಿಸಿ ಯಶಸ್ಸಿನ ಮೆಟ್ಟಿಲನ್ನು ಏರಬೇಕಾಗಿದೆ. ಕ್ರೀಡೆಗೆ ಹೆಚ್ಚಿನ ಮಹತ್ವ ಸಿಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಜೀವನ ರೂಪಿಸಿಕೊಳ್ಳಬೇಕೆಂದರು.

      ಮುಖ್ಯಅತಿಥಿಗಳಾಗಿದ್ದ ಮುಖ್ಯಶಿಕ್ಷಕ ಪುಟ್ಟಲಿಂಗಪ್ಪ ಮಾತನಾಡಿ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಉತ್ತಮ ಕ್ರೀಡಾಪಟುಗಳು ಉತ್ತಮ ನಾಯಕತ್ವ, ಮುಂದಾಳತ್ವ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಆದುದರಿಂದ ಬಾಲ್ಯಾವಸ್ಥೆಯಿಂದಲೇ ಕ್ರೀಡೆಗಳಲ್ಲಿ ಭಾಗವಹಿಸಲು ಮಕ್ಕಳಿಗೆ ಪ್ರೋತ್ಸಾಹಿಸಬೇಕೆಂದರು.

       ಮುಖ್ಯ ಅತಿಥಿಗಳಾಗಿದ್ದ ವೈದ್ಯಾಧಿಕಾರಿ ಡಾ||ಅರವಿಂದರೆಡ್ಡಿ ಮಾತನಾಡಿ ಆಟಗಳನ್ನು ನಿರಂತರವಾಗಿ ಆಡುವುದರಿಂದ ಅನೇಕ ಕಾಯಿಲೆಗಳನ್ನು ದೂರವಿಡಬಹುದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಆದುದರಿಂದ ಯಾವ ವಯಸ್ಸಿನ ಬೇಧವಿಲ್ಲದೆ ಎಲ್ಲರೂ ತಮಗೊಪ್ಪುವ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.

      ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಕ್ರೀಡೆಗಳು ಎಲ್ಲರ ಮನಸ್ಸನ್ನೂ ಒಗ್ಗೂಡಿಸುವ ಸಾಮಾಜಿಕ ಒಕ್ಕೂಟವಿದ್ದಂತೆ. ಕ್ರೀಡಾಕೂಟಗಳಿಂದ ಎಲ್ಲರೂ ಒಂದೆಡೆ ಸೇರುವ ಅವಕಾಶ ಲಭ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕ್ರೀಡಾಕೂಟಗಳಿಂದ ಕ್ರೀಡಾಸ್ಪೂರ್ತಿ ಲಭಿಸಿ, ರಾಷ್ಟ್ರಮಟ್ಟದ ಪ್ರತಿಭೆಗಳು ಉದಯಿಸುವ ಅವಕಾಶ ಲಭಿಸುತ್ತದೆ. ಉತ್ತಮ ಕ್ರೀಡಾಪಟುಗಳಿಗೆ ಸರ್ಕಾರಿ ಮತ್ತು ಖಾಸಗೀ ರಂಗದಲ್ಲಿ ಉದ್ಯೋಗಾವಕಾಶಗಳು ಲಭ್ಯವಿದ್ದು, ಅವುಗಳನ್ನು ಪಡೆಯಲು ಕ್ರೀಡಾಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಅವಶ್ಯಕ. ಸರ್ಕಾರ ಕ್ರೀಡಾಕ್ಷೇತ್ರಕ್ಕೆ ಅನೇಕ ಸವಲತ್ತುಗಳನ್ನು ನೀಡಿ ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿ ವೇತನ, ಕ್ರೀಡಾ ಹಾಸ್ಟೆಲ್‍ಗಳು, ತರಬೇತಿ ಶಾಲೆಗಳನ್ನು ತೆರೆಯುವ ಮೂಲಕ ಕ್ರೀಡೆಗಳಿಗೆ, ಆಟಗಾರರಿಗೆ ಉತ್ತೇಜನ ನೀಡುತ್ತಿದೆ. ಈ ವಿಪುಲ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಸತತ ಪರಿಶ್ರಮ, ಕಟ್ಟುನಿಟ್ಟಿನ ತಯಾರಿ ಅತ್ಯವಶ್ಯಕ ಎಂದರು.

       ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಿಂದ ತಲಾ ಎಂಟು ತಂಡಗಳು ಮಹಿಳೆಯರ ಥ್ರೋಬಾಲ್ ಮತ್ತು ಮಹಿಳೆಯರ ಟೆನ್ನಿಕಾಯ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಮಹಿಳೆಯರ ಥ್ರೋಬಾಲ್‍ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಿಪಟೂರಿನ ವಿದ್ಯಾರ್ಥಿನಿಯರು ಪ್ರಥಮ ಸ್ಥಾನಗಳಿಸಿ ಟ್ರೋಫಿ ಪಡೆದುಕೊಂಡರು ಮತ್ತು ಸಿದ್ದಗಂಗಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ಟಿನ್ನಿಕಾಯ್ಟ್ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯ ಕಲಾ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಸ್ಥಾನಗಳಿಸಿ ಟ್ರೋಫಿ ಪಡೆದುಕೊಂಡರು, ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದ ಎರಡೂ ತಂಡಗಳಿಗೆ ನಿವೃತ್ತ ಮುಖ್ಯಶಿಕ್ಷಕರಾದ ಬಸವರಾಜಪ್ಪ ನೀಡಿದ ನಗದು ಪುರಸ್ಕಾರ ನೀಡಿ ಗೌರವಿಸಿದರು.

      ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಜಯಮ್ಮ, ನಿವೃತ್ತ ಶಿಕ್ಷಕರಾದ ಬಸವರಾಜು, ದೈಹಿಕ ಶಿಕ್ಷಣ ನಿರ್ದೇಶಕರಾದ ಮನೋಜ್‍ಕುಮಾರ್, ಡಾ.ಪ್ರಕಾಶ್, ವಿಶ್ವನಾಥ್, ಮುಖ್ಯಶಿಕ್ಷಕ ಪುಟ್ಟಲಿಂಗಪ್ಪ, ಮಿಡಿಗೇಶಿ ಅಂಜಿನಪ್ಪ, ಉಪನ್ಯಾಸಕರಾದ ಮುನಿರಾಜ, ಲಕ್ಷ್ಮೀನಾರಾಯಣ, ಸತೀಶ್, ಸತೀಶ್‍ಕುಮಾರ್, ಶ್ರೀನಿವಾಸಮೂರ್ತಿ, ಮಹೇಶ್ ಎ. ಸುರೇಶ್, ರಹಮತ್,ಮಂಜುಳ ಮತ್ತಿತರರು ಭಾಗವಹಿಸಿದ್ದರು.

(Visited 12 times, 1 visits today)

Related posts

Leave a Comment