ತುಮಕೂರು:


ಕಳೆದ ಎರಡು ದಶಕಗಳಿಗೂ ಅಧಿಕ ಕಾಲದಿಂದ ತುಂಬದೇ ಇದ್ದ ನಗರದ ಮರಳೂರು ಕೆರೆ ಈ ಬಾರಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭರ್ತಿಯಾಗಿ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಶಾಸಕ ಜ್ಯೋತಿಗಣೇಶ್, ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ ಹಾಗೂ ಸದಸ್ಯ ಧರಣೇಂದ್ರಕುಮಾರ್ ಅವರು ಕೆರೆಗೆ ಬಾಗಿನ ಅರ್ಪಿಸಿದರು.
ನಗರದ ದಕ್ಷಿಣ ಭಾಗದಲ್ಲಿರುವ ಮರಳೂರು ಕೆರೆ 22 ವರ್ಷಗಳಿಂದ ತುಂಬಿರಲಿಲ್ಲ. ಆದ ರೆ ಈ ಬಾರಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭರ್ತಿಯಾಗಿ ಕೋಡಿ ಹರಿಯುತ್ತಿರುವುದರಿಂದ ಮರಳೂರು, ಗಂಗಸಂದ್ರ ಗ್ರಾಮಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿವತ್ತಾಗಿ ಕೆರೆಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನೆರವೇರಿಸಲಾಯಿತು. ಕೆರೆಗೆ ಬಾಗಿನ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ನಗರದ ದಕ್ಷಿಣ ಭಾಗದಲ್ಲಿರುವ ಮರಳೂರು ಕೆರೆ 22 ವರ್ಷದ ನಂತರ ಮಳೆ ನೀರಿನಿಂದ ಕೋಡಿ ಬಿದ್ದಿರುವುದು ತುಂಬಾ ಸಂತೋಷ ತಂದಿದೆ ಎಂದರು. ಈ ಮರಳೂರು ಕೆರೆ ಮರಳೂರು ಗ್ರಾಮ ಮತ್ತು ಗಂಗಸಂದ್ರ ಗ್ರಾಮಗಳಿಗೆ ಕಲ್ಪತರು ಇದ್ದಂತೆ. ಈ ಕೆರೆ ತುಂಬಿದರೆ ಈ ಎರಡು ಗ್ರಾಮಗಳ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಮರಳೂರು ಕೆರೆ ನಗರದ ಹೊರವಲಯದಲ್ಲಿರುವುದರಿಂದ ಎಲ್ಲ ಗಲೀಜು ತಂದು ಈ ಕೆರೆ ದಡದಲ್ಲೇ ಹಾಕಲಾಗುತ್ತಿದೆ. ಇದನ್ನು ತಪ್ಪಿಸಲು ಪಾಲಿಕೆಯೊಂದಿಗೆ ಸ್ಥಳೀಯ ಜನರು ಮುಂದಾಗಬೇಕು ಎಂದರು. ನನಗೆ ಸಣ್ಣ ನೀರಾವರಿ ಇಲಾಖೆಯಿಂದ ನೀಡಲಾಗಿರುವ 1.50 ಕೋಟಿ ರೂ.ಗಳನ್ನು ಈ ಕೆರೆಗೆ ಹೇಮಾವತಿ ನೀರು ತುಂಬಿಸುವ ಕಾಮಗಾರಿಗೆ ನೀಡಲಾಗಿದ್ದು, ಈ ಕಾಮಗಾರಿ ಸದ್ಯ ಅರ್ಧದಷ್ಟು ನಡೆದಿದೆ. ಪೈಪ್‍ಲೈನ್ ಮೂಲಕ ಈ ಕೆರೆಗೆ ಹೇಮಾವತಿ ನೀರು ತುಂಬಿಸಿ ಶುದ್ಧ ಕುಡಿಯುವ ನೀರು ಬಳಕೆಗೆ ಈ ಕೆರೆಯನ್ನು ಉಪಯೋಗಿಸಲಾಗುವುದು ಎಂದರು.
ಮೇಯರ್ ಬಿ.ಜಿ. ಕೃಷ್ಣಪ್ಪ ಮಾತನಾಡಿ. ತುಮಕೂರಿನ ಉತ್ತರಕ್ಕೆ ಅಮಾನಿಕೆರೆ, ದಕ್ಷಿಣಕ್ಕೆ ಮರಳೂರು ಕೆರೆ ಇದೆ. ಇಂದು ಈ ಕೆರೆ ತುಂಬಿ ಗಂಗಾಮಾತೆಗೆ ಪೂಜೆ ಸಲ್ಲಿಸಿರುವುದು ಒಂದು ಪುಣ್ಯದ ಕೆಲಸ ಎಂದರು. ಈ ಕೆರೆಯ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಂಡು ಕೆರೆಯ ಸ್ವಚ್ಚತೆ ಕಾಪಾಡಲು ಮುಂದಾಗಬೇಕು ಎಂದರು. ಸ್ಮಾರ್ಟ್‍ಸಿಟಿ ಯೋಜನೆಯಡಿ ಈ ಕೆರೆಯನ್ನು ನಗರಕ್ಕೆ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ ಉಪಯೋಗಿಸಲಾಗುವುದು. ಹಾಗಾಗಿ ಪ್ರತಿಯೊಬ್ಬರು ಕೆರೆಯ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು. ಕೆರೆಗೆ ಹೇಮಾವತಿ ನೀರು ಹರಿಸಿದರೆ ನಗರದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆ ತಲೆದೋರುವುದಿಲ್ಲ. ಈ ಯೋಜನೆಯ ಕಾರ್ಯ ಆದಷ್ಟು ಬೇಗ ನೆರವೇರಲಿ ಎಂದರು.

(Visited 19 times, 1 visits today)