ತುಮಕೂರು:


ಯುವ ಪೀಳಿಗೆಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊರಿಸುವಾಗ ಅವರಿಗೆ ಯಾವ ರೀತಿಯ ಶಿಕ್ಷಣ ನೀಡಬೇಕು ಎಂಬ ಆಲೋಚನೆ ಅಗತ್ಯ. ಅವರಲ್ಲಿ ದೇಶಾಭಿಮಾನ, ಸಾಮಾಜಿಕ ಕಾಳಜಿ ತುಂಬುವ ಶಿಕ್ಷಣ ಕೊಡಬೇಕಾಗಿದೆ. ಈ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದವರ ಕೊಡುಗೆ, ಆಶಯಗಳನ್ನು ಪರಿಚಯಿಸಬೇಕಾಗಿದೆ. ತಾನು ಈ ದೇಶಕ್ಕಾಗಿ, ಈ ಸಮಾಜಕ್ಕಾಗಿ ಏನು ಮಾಡಬೇಕೆಂಬ ಚಿಂತನೆಯ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕೊಡಬೇಕು ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಚಿಂತಕರ ಚಾವಡಿ ಏರ್ಪಡಿಸಿದ್ದ ಪಠ್ಯ ರಾಜಕಾರಣ ಕಾಳಜಿಯೇ? ಲೆಕ್ಕಾಚಾರವೇ? ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ನಮ್ಮ ದೇಶದ ಆಸ್ಮಿತೆ, ಸಂಸ್ಕøತಿ, ಆಚಾರ ವಿಚಾರಗಳನ್ನು ಅವಹೇಳನ ಮಾಡಿದ, ಇತಿಹಾಸದ ಸತ್ಯ ಮರೆಮಾಚಿದ್ದ ಈವರೆಗಿನ ಪಠ್ಯ ಸಮಿತಿಗಳು ಮಾಡಿದ್ದ ರಾದ್ಧಾಂತ ಈಗ ಎಲ್ಲರಿಗೂ ಗೊತ್ತಾಗಿದೆ. ನಮ್ಮ ಮಕ್ಕಳು ಯಾವ ರೀತಿಯ ಶಿಕ್ಷಣ ಕಲಿಯಬೇಕು ಎಂದು ಪೋಷಕರು ಚಿಂತಿಸುವತಾಗಿದೆ ಎಂದರು. ಸನಾತನ ಧರ್ಮದ ಭಾರತ ಜಗತ್ತಿಗೆ ಆಯುರ್ವೇದ ಪರಿಚಯಿಸಿದೆ. ಪ್ರಾಣಿಗಳಿಗೆ ಮಾತ್ರವಲ್ಲ ಗಿಡಮರಗಳಿಗೂ ಜೀವ ಇದೆ ಎಂದು ಸಾಬೀತು ಮಾಡಿದ್ದು ನಮ್ಮ ದೇಶ, ನಿನ್ನೊಳಗೆ ನೀನು ನೋಡಬಹುದಾದ ಆಧ್ಯಾತ್ಮದ ಅರಿವನ್ನು ಜಗತ್ತಿಗೆ ಪರಿಚಯಿಸಿದ್ದು ಈ ದೇಶ. ಋಷಿ ಮುನಿಗಳು ನಮ್ಮ ನೆಲದಲ್ಲಿ ಓಡಾಡಿದ್ದರು. ಭಾರತವಲ್ಲದೆ ಬೇರೆ ಯಾವ ನೆಲದಲ್ಲೂ ಋಷಿ ಮುನಿಗಳು ಓಡಾಡಿಲ್ಲ. ಒಂದು ದೇಶದ ಸಂಸ್ಕøತಿ ಹಾಳು ಮಾಡಿದರೆ ಆ ದೇಶದ ಆಸ್ಮಿತೆ ಹಾಳು ಮಾಡಿದಂತೆ. ಅತಿ ಹೆಚ್ಚು ಬಾರಿ ಭಾರತದ ಮೇಲೆ ದಾಳಿ ಮಾಡಿ ದೇಶದ ಆಸ್ಮಿತೆ ನಾಶ ಮಾಡುವ ಪ್ರಯತ್ನಗಳು ನಡೆದಿವೆ. ಇವುಗಳ ಬಗ್ಗೆ ನಮ್ಮ ಮಕ್ಕಳಿಗೆ ಪರಿಚಯಿಸಿ, ಕಾಪಾಡುವ ಕಾಳಜಿ ಬೆಳೆಸುವ ಶಿಕ್ಷಣ ನೀಡಬೇಕಲ್ಲವೇ? ಎಂದರು.
ಬರಗೂರು ಸಮಿತಿಯ ಒಂದು ಪಠ್ಯ ಪುಸ್ತಕದಲ್ಲಿ ಪ್ರಸಿದ್ಧ ದೇವಾಲಯಗಳು ಎಂಬ ಪಾಠವಿದೆ. ಅದರಲ್ಲಿ ಟಿಪ್ಪುವಿನ ಅರಮನೆ, ವಿಧಾನಸೌಧ, ಜಾಮಿಯಾ ಮಸೀದಿ, ಸೇಂಟ್‍ಮೇರಿ ಚರ್ಚ್‍ಯಾಕೆ ಬಂತು ಎಂದು ಗೊತಿಲ್ಲ. ಟಿಪ್ಪು ಅರಮನೆ ಯಾವಾಗ ಪ್ರಸಿದ್ಧ ದೇವಾಲಯವಾಯಿತು? ವಿಧಾನಸೌಧ ದೇವಾಲಯವೇ? ಎಂದ ಅವರು, ತಮಗೆ ಅಧಿಕಾರ ಕೊಟ್ಟ ದೇವರು ಇರುವ ವಿಧಾನಸೌಧ ಅವರಿಗೆ ದೇವಾಲಯವಾಗಿರಬಹುದು ಎಂದು ವ್ಯಂಗ್ಯ ಮಾಡಿದ ಅವರು, ಈ ಪಠ್ಯದಲ್ಲಿ 2015ರಲ್ಲಿ ಕಟ್ಟಲಾದ ಬಿಲಾಲ್ ಮಸೀದಿಯ ಉಲ್ಲೇಕವಿದೆ. ಆದರೆ ನಾಡಿನ ಪ್ರಸಿದ್ಧ ದೇವಾಲಯಗಳನ್ನು ಮರೆತೇಬಿಟ್ಟಿದ್ದಾರೆ ಎಂದರು.
ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆ ಈ ರೀತಿ ತುರುಕುವ ಪ್ರಯತ್ನ ಈವರೆಗಿನ ಪಠ್ಯ ಸಮಿತಿಗಳು ಮಾಡುತ್ತಾ ಬಂದಿವೆ. ಜನರ ಸಾಮರಸ್ಯ ಒಡೆಯುವ ಪ್ರಯೋಗ ನಡೆಯುತ್ತಾ ಬಂದಿದೆ. ನಾವು ಇವನ್ನು ಪ್ರಶ್ನೆ ಮಾಡಿದರೆ ಅಸಹಿಷ್ಣುತೆ, ದಬ್ಬಾಳಿಕೆ ಎನ್ನುತ್ತಾರೆ ಇನ್ನೂ ಮುಂದೆ ಹೋಗಿ ಕೇಸರೀಕರಣ ಎಂದುಬಿಡುವ ಮೆಕಾಲೆ ಮನಸ್ಥಿತಿಗಳು ಈಗ ಶುರುವಾಗಿವೆ. ಯಾಕೆ ಇತಿಹಾಸದ ಸತ್ಯಗಳನ್ನು ಮಕ್ಕಳಿಗೆ ತಿಳಿಸುವುದು ಬೇಡವೇ? ಈಗ ಪಠ್ಯ ವಿವಾದ ಶುರುವಾಗಿರುವುದು ಒಳ್ಳೆಯದಾಯಿತು. ಈ ಮೂಲಕ ಜನ ಎಚ್ಚೆತ್ತುಗೊಂಡಿದ್ದಾರೆ, ನಮ್ಮ ಮಕ್ಕಳು ಯಾವ ಶಿಕ್ಷಣ ಕಲಿಯಬೇಕು ಎಂದು ಪೋಷಕರು ಗಮನ ಹರಿಸುವಂತಾಗಿದೆ ಎಂದು ಪಿ.ರಾಜೀವ್ ಹೇಳಿದರು.
ಪಠ್ಯದಲ್ಲಿ ಕೆಂಪೇಗೌಡರನ್ನು ಬಿಟ್ಟು ಟಿಪ್ಪುವನ್ನು ವೈಭವೀಕರಿಸಲಾಗಿದೆ. ಮೈಸೂರ ಸಂಸ್ಥಾನದ ನಾಲ್ವಡಿ ಕೃಷ್ಣರಾಜರ ಪರಿಚಯವಿಲ್ಲ, ಸುಭಾಶ್‍ಚಂದ್ರ ಬೋಸ್ ಪಾಠ ಬಿಟ್ಟು ನೆಹರೂ ಮಗಳಿಗೆ ಬರೆದ ಪತ್ರಗಳನ್ನು ಪಾಠವಾಗಿ ತುರುಕಲಾಗಿದೆ. ಈ ರೀತಿಯ ಅಭಾಸಗಳು ತುಂಬಿವೆ. ಆರ್ಯರು ದೇಶದ ಮೂಲ ನಿವಾಸಿಗಳಲ್ಲ ಎಂದು ಹೇಳುತ್ತಾ ರಾಜಕಾರಣಿಗಳ ಓಲೈಕೆ, ತಮ್ಮ ಅಧಿಕಾರದ ಹಪಾಹಪಿಗಾಗಿ ಇಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ತಮ್ಮ ನೈತಿಕ ಅಧ:ಪತನಕ್ಕೆ ಕಾರಣವಾಗಿದೆ. ಡಾ.ಅಂಬೇಡ್ಕರ್ ಅವರೇ ಬರೆದಿರುವ ಪುಸ್ತಕದಲ್ಲಿ ಆರ್ಯ, ದ್ರಾವಿಡ ಸಿದ್ಧಾಂತ ಜಾರಿಗೆ ತಂದರೆ ಅಸ್ಪøಶ್ಯತೆಯನ್ನು ಜೀವಂತವಾಗಿ ಇಟ್ಟಂತೆ ಎಂದು ಹೇಳಿದ್ದಾರೆ ಎಂದರು.
ಮೆಕಾಲೆಯ ನವಜಾತ ಶಿಶುವಾಗಿ ಬರಗೂರು ಸಮಿತಿ ಕೆಲಸ ಮಾಡಿದೆ. ಈಗಿನ ಸಮಿತಿ ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಗಳನ್ನು ಹುಟ್ಟುಹಾಕುವ ಪ್ರಯತ್ನ ಮಾಡಿದೆ. ಮುಂದೆ ಪಠ್ಯ ಪರಿಷ್ಕರಣೆಯಲ್ಲಿ ಪೋಷಕರ ಸಮರ್ಪಕ ಅಭಿಪ್ರಾಯ ಪಡೆದು ಸಿದ್ಧಪಡಿಸಬೇಕು ಎಂದು ಶಾಸಕ ರಾಜೀವ್ ಸಲಹೆ ಮಾಡಿದರು.

(Visited 1 times, 1 visits today)