ತುಮಕೂರು :

       ತುಮಕೂರು ನಗರದಲ್ಲಿ ಮುಖ್ಯರಸ್ತೆಗಳು ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ, ಬಡಾವಣೆಗಳಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

      ತುಮಕೂರು ನಗರವು ಸ್ಮಾರ್ಟ್ ಸಿಟಿಯಾಗುತ್ತಿದ್ದು, ವಿವಿಧ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿವೆ. ಇದರ ಜೊತೆಯಲ್ಲಿ ಬೆಸ್ಕಾಂ ಇಲಾಖೆಯವರು, 24 ಗಂಟೆಗಳ ಕುಡಿಯುವ ನೀರಿನ ಸರಬರಾಜು, ಉಜ್ವಲ ಯೋಜನೆಯಡಿಯಲ್ಲಿ ಮನೆಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಲು ವಿವಿಧ ಭಾಗಗಳಲ್ಲಿ ಹಳ್ಳಗಳನ್ನು ತೆಗೆದು ಹಾಗೆ ಬಿಡಲಾಗುತ್ತಿದೆ. ಅಲ್ಲದೆ ಒಂದು ಕಡೆ ಹಳ್ಳ ಮುಚ್ಚಿದರೆ ಇನ್ನೊಂದು ಕಡೆ ಹಳ್ಳ ತೆಗೆಯುತ್ತಾರೆ. ಯಾರು ಯಾವ ಕಾಮಗಾರಿ ಮಾಡುತ್ತಿದ್ದಾರೆ ಎಂಬುದು ತಿಳಿಯದಾಗಿದೆ ಎಂದು 15ನೇ ವಾರ್ಡ್ ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್ ಆರೋಪಿಸಿದ್ದಾರೆ.

      ಸ್ಮಾರ್ಟ್ ಸಿಟಿ ಕಾಮಗಾರಿಗಳು ಎಲ್ಲೆಲ್ಲಿ ನಡೆಯುತ್ತಿದೆಯೋ..? ಯಾವ ಹಂತದಲ್ಲಿದೆ. ಎಂಬುದು ಏನು ತಿಳಿಯದಾಗಿದೆ. ಒಂದು ಕಡೆ ಗುಂಡಿ ಅಗಿದು ಹೋಗಿರುತ್ತಾರೆ. ಮತ್ತೊಂದು ಕಡೆ ಪೈಪ್‍ಲೈನ್ ಹಾಕುತ್ತೇವೆ ಎನ್ನುತ್ತಾರೆ. ಇನ್ನೊಬ್ಬರು ಗ್ಯಾಸ್ ಲೈನ್ ಹಾಕುತ್ತೇವೆ ಎನ್ನುತ್ತಾರೆ. ಹೀಗೆ ಒಬ್ಬರಿಗೊಬ್ಬರು ತಮ್ಮ ಪಾಡಿಗೆ ತಾವು ಬಂದು ಗುಂಡಿ ತೆಗೆಯುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಯಾವ ಅಧಿಕಾರಿಗಳಿಗೆ ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

      15ನೇ ವಾರ್ಡಿನ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಂದು ವಾರದಲ್ಲಿ ಒಳಚರಂಡಿ ಕಾಮಗಾರಿ ಮುಗಿಸುತ್ತೇವೆ ಹೇಳಿದ್ದ ಗುತ್ತಿಗೆದಾರರು ಒಂದು ತಿಂಗಳಾದರೂ ಮುಗಿಸಿಲ್ಲ. ಇದರಿಂದ ಚರಂಡಿ ನೀರು ರಸ್ತೆಮೇಲೆಲ್ಲಾ ಹರಿದಾಡುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್ ತಿಳಿಸಿದರು.

      ಒಂದು ವಾರದಲ್ಲಿ ಮುಗಿಯಬೇಕಿದ್ದ ಕಾಮಗಾರಿ ತಿಂಗಳಾದರೂ ಇನ್ನು ನಡೆಯುತ್ತಿದೆ. ಇತ್ತೀಚೆಗೆ ವಿಪರೀತ ಮಳೆ ಬರುತ್ತಿದ್ದು, ಕಾಮಗಾರಿ ನಡೆಯುವ ಸ್ಥಳದ ಪಕ್ಕದಲ್ಲೇ ಇರುವಂತಹ ದೇವಸ್ಥಾನದ ಒಳಕ್ಕೆ ಮಳೆ ನೀರು, ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ವಾರ್ಡ್‍ನಲ್ಲಿ ಸಮಸ್ಯೆ ಬಂದರೆ ಪಾಲಿಕೆ ಸದಸ್ಯರ ಬಂದು ಹೇಳುತ್ತಾರೆ. ಈ ಬಗ್ಗೆ ನಾವು ಅಧಿಕಾರಿಗಳ ಬನಳಿ ಪ್ರಶ್ನಿಸಿದರೆ ಇಲ್ಲಸಲ್ಲದ ಸಬೂಬು ನೀಡುತ್ತಾರೆ. ಆದರೆ ಜನರು ಮಾತ್ರ ನಮ್ಮ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಾರೆ. ಇದಕ್ಕೆ ನಾವು ಸ್ಥಳೀಯರಿಗೆ ಏನೆಂದು ಉತ್ತರ ಕೊಡಬೇಕು ಎಂದು ಗಿರಿಜಾ ಧನಿಯಾಕುಮಾರ್ ಪ್ರಶ್ನಿಸಿದರು.

      ದೇವಾಲಯದ ಅರ್ಚಕರು ಮಾತನಾಡಿ, ದೇವಾಲಯಕ್ಕೆ ತುಂಬಾ ಭಕ್ತರು ಬರುತ್ತಾರೆ. ಈ ನಿಟ್ಟಿನಲ್ಲಿ ಕಾಮಗಾರಿ ಬೇಗ ಮುಗಿಸುವಂತೆ ಮನವಿ ಮಾಡಿಕೊಂಡಾಗ ಒಂದು ವಾರದಲ್ಲಿ ಕಾಮಗಾರಿ ಮುಗಿಸುವ ಭರವಸೆ ಕೊಟ್ಟಿದ್ದರು.

      ಆದರೆ ಈಗಾಗಲೇ ಒಂದು ತಿಂಗಳಾಗುತ್ತಾ ಬಂದರೂ ಕಾಮಗಾರಿ ಮಾತ್ರ ಮುಗಿದಿಲ್ಲ. ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದೇವಾಲಯದ ಒಳಗೆ ಮಳೆ ನೀರು ನುಗ್ಗುತ್ತಿದೆ. ಇದಕ್ಕೆ ಪಾಲಿಕೆ ವತಿಯಿಂದಾಗಲಿ ಅಥವಾ ಸ್ಮಾರ್ಟ್‍ಸಿಟಿಯವರಾಗಲಿ, ಜಿಲ್ಲಾಡಳಿತವಾಗಲಿ ಸೂಕ್ತ ವ್ಯವಸ್ತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

(Visited 41 times, 1 visits today)