ತುಮಕೂರು :

       ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಗಮನಕ್ಕೆ, ರಾಷ್ಟ್ರ ವ್ಯಾಪ್ತಿ ಹರಡಿರುವ ಕೋವಿಡ್-19 ಸೋಂಕು ರೋಗವನ್ನು ತಡೆಯುವ ಸಂಬಂಧ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2020ರ ಮಾರ್ಚ್ 13ರಂದು ನಡೆದ ಸಭೆಯಲ್ಲಿ ನಿರ್ದೇಶಿಸಿರುವಂತೆ, ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇವರ ಆದೇಶದಲ್ಲಿ ಸೂಚಿಸಿರುವಂತೆ ಮತ್ತು ತುಮಕೂರು ಜಿಲ್ಲಾಧಿಕಾರಿಗಳು ನಿರ್ದೇಶಿಸಿರುವಂತೆ 2020ರ ಮಾರ್ಚ್ 14ರ ಮಧ್ಯರಾತ್ರಿಯಿಂದ ಒಂದು ವಾರಗಳ ಕಾಲ ಅತಿ ಹೆಚ್ಚು ಜನ ಸೇರುವ ಸಿನಿಮಾ ಮಂದಿರಗಳು, ಮಾಲ್‍ಗಳು, ನಾಟಕಗಳು, ರಂಗಮಂದಿರಗಳು, ಪಬ್‍ಗಳು, ನೈಟ್ ಕ್ಲಬ್‍ಗಳು, ವಸ್ತುಪ್ರದರ್ಶನಗಳು, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳು ಹಾಗೂ ಇತರೆ ಹೆಚ್ಚಾಗಿ ಜನ ಸೇರುವಂತಹ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ತುಮಕೂರು ಮಹಾನಗರ ಪಾಲಿಕೆಯ ಪೂರ್ವಾನುಮತಿ ಪಡೆಯದೇ ಯಾವುದೇ ಬೇಸಿಗೆ ಶಿಬಿರಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ.

       ಹೆಚ್ಚು ಜನರು ಬಳಸುವ ಜಿಮ್ ಸೆಂಟರ್‍ಗಳು, ಪಿಜಿಗಳು, ಕೋಚಿಂಗ್ ಕ್ಲಾಸ್‍ಗಳು, ಈಜುಕೊಳಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು. ಹೋಟೆಲ್‍ಗಳ ಹಾಲ್‍ಗಳಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಅವಕಾಶವಿರುವುದಿಲ್ಲ. ಆಲ್ಕೋಹಾಲ್ ಅಂಶವನ್ನು ಒಳಗೊಂಡಂತಹ ಹ್ಯಾಂಡ್‍ವಾಶ್/ಹ್ಯಾಂಡ್/ಸ್ಯಾನಿಟೈಜರ್‍ಗಳನ್ನು ಎಲ್ಲಾ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳು, ಶಾಲಾ-ಕಾಲೇಜುಗಳು, ಸರ್ಕಾರಿ/ಖಾಸಗಿ ಕಚೇರಿಗಳಲ್ಲಿ ಹಾಗೂ ಇತರೆ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು. ಸರ್ಕಾರಿ ಹಾಗೂ ಸರ್ಕಾರೇತರ ವಿದ್ಯಾರ್ಥಿನಿಲಯಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಲು ಅತಿ ಹೆಚ್ಚಿನ ಆದ್ಯತೆ ನೀಡುವುದು.

       ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ನೋವೆಲ್ ಕೋರೋನ ಲಕ್ಷಣವುಳ್ಳ ವ್ಯಕ್ತಿಗಳು ದಾಖಲಾಗಿದ್ದಲ್ಲಿ ತುರ್ತಾಗಿ ಆರೋಗ್ಯ ಇಲಾಖೆಗೆ ಮಾಹಿತಿ ಒದಗಿಸುವುದು.

      ಬೀದಿ ಬದಿಯಲ್ಲಿ ಮಾರಾಟ ಮಾಡುವ ಕತ್ತರಿಸಿದ ಹಣ್ಣುಗಳ ಮಾರಾಟಗಾರರು, ಮಾಂಸಾಹಾರಿ ಖಾದ್ಯ ತಯಾರಕರು/ಮಾರಾಟಗಾರರು, ತೆರೆದ ಸ್ಥಳಗಳಲ್ಲಿ ಆಹಾರವನ್ನು ತಯಾರಿಸಿ ಮಾರಾಟ ಮಾಡುವವರು ತಮ್ಮ ಉದ್ದಿಮೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವುದು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ಮಹಾನಗರಪಾಲಿಕೆಯ ವಾಹನಗಳಿಗೆ ನೀಡುವುದು.

       ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿ ಆದೇಶಿಸಿದೆ. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದೆಂದು ತುಮಕೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

(Visited 12 times, 1 visits today)