ತುಮಕೂರು:

      ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಬೇಕೆಂದು ಸೂಚನೆ ನೀಡಲಾಗಿದ್ದರೂ ಕಸವನ್ನು ಬೀದಿ ಬದಿ ಎಸೆಯುವುದು ತಪ್ಪಿಲ್ಲ. ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಪ್ರತೀ ದಿನ ಮನೆ ಬಳಿಗೆ ಬರುವ ಕಸ ಸಂಗ್ರಹಿಸುವ ವಾಹನಗಳಲ್ಲಿಯೇ ವಿಲೇವಾರಿ ಮಾಡಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಮಧ್ಯರಾತ್ರಿ, ಬೆಳಗಿನ ಜಾವ, ಬೀದಿ ದೀಪ (ವಿದ್ಯುತ್ ಇಲ್ಲದಿದ್ದಾಗ) ದ್ವಿಚಕ್ರದಲ್ಲಿ ಬಂದು ಖಾಲಿನಿವೇಶನಗಳಲ್ಲಿ ಕಸ ಸುರಿದು ಹೋಗುವವರಿಗೇನು ಕಡಿಮೆ ಇಲ್ಲ. ಇಂಥ ಅವೈಜ್ಞಾನಿಕ ಕಸ ವಿಲೇವಾರಿಯನ್ನು ತಪ್ಪಿಸಲು ನಗರದ ವಾಣಿಜ್ಯ ಹಾಗೂ ವಸತಿ ಪ್ರದೇಶಗಳಲ್ಲಿ ಪಾಲಿಕೆ ಸಿಬ್ಬಂದಿಗಳು ರಾತ್ರಿ-ಹಗಲು ಪಾಳಿಯಲ್ಲಿ ಕಾರ್ಯ ನಿರ್ವಹಿಸಿ ಕಸ ಹಾಕುವವರನ್ನು ಹಿಡಿದು ಕೆಲವರಿಗೆ ತಿಳುವಳಿಕೆ ನೀಡಿ, ಕೆಲವರಿಗೆ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭೂಬಾಲನ್ ತಿಳಿಸಿದ್ದಾರೆ.

      ಪಾಲಿಕೆಯು ಕಸ ವಿಲೇವಾರಿ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದಲ್ಲದೆ ನಗರವನ್ನು ಅಂದಗೊಳಿಸುವ ನಿಟ್ಟಿನಲ್ಲಿ ತನ್ನ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಕಸ ಹಾಕುವ ಸುಮಾರು 80ಕ್ಕೂ ಹೆಚ್ಚು ಕಪ್ಪು ಚುಕ್ಕೆ(ಬ್ಲಾಕ್ ಸ್ಪಾಟ್ಸ್)ಪ್ರದೇಶಗಳನ್ನು ಗುರುತಿಸಿ ಆಕರ್ಷಕವಾಗಿ ಕಾಣುವಂತೆ ರೂಪಾಂತರಗೊಳಿಸುವ ಕಾರ್ಯ ಮಾಡುತ್ತಿದೆ. ಪಾಲಿಕೆ ಪೌರ ಕಾರ್ಮಿಕರು, ದಫೇದಾರ್‍ಗಳು, ಸೂಪರ್ ವೈಸರ್ಸ್, ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು, ಆರೋಗ್ಯ ಅಧಿಕಾರಿಗಳ ಶ್ರಮದಿಂದ ಯಾವುದೇ ಖರ್ಚಿಲ್ಲದೆ ಈ ರೂಪಾಂತರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ರೂಪಾಂತರಗೊಳಿಸಿದ ಸ್ಥಳಗಳ ವಿವರ:

      ಪಾಲಿಕೆ ವ್ಯಾಪ್ತಿಯ 2ನೇ ವಾರ್ಡ್‍ನ ಸತ್ಯಮಂಗಲ ರಸ್ತೆ; 3ನೇ ವಾರ್ಡ್‍ನ ಅರಳೀಮರದಪಾಳ್ಯ ರಸ್ತೆ; 4ನೇ ವಾರ್ಡ್‍ನ ವಾಸವಿ ಕಲ್ಯಾಣ ಮಂಟಪ, ಕವಿತಾ ಮೆಟಲ್, ಸಂತೇಪೇಟೆಯ ಮುಖ್ಯರಸ್ತೆ, ಮಸೀದಿ ಬಳಿ ಹಾಗೂ ಜೈನ್ ಟೆಂಪಲ್ ರಸ್ತೆ; 5ನೇ ವಾರ್ಡ್‍ನ ಪಾಂಡು ಪಾನಿಪೂರಿ ಪಕ್ಕದ ರಸ್ತೆ, ಪೊಲೀಸ್ ಕ್ವಾರ್ಟಸ್, ಕಾರಂಜಿ ದೇವಸ್ಥಾನ, ಮಾರುತಿ ಪ್ಲಾಜಾ ಹಿಂಭಾಗ, ವಿವೇಕಾನಂದ ರಸ್ತೆ, ಕೃಷ್ಣ ಚಿತ್ರಮಂದಿರದ ಎದುರು; 6ನೇ ವಾರ್ಡ್‍ನ ಭೀಮಸಂದ್ರ ಹಾಗೂ ಬೆಳ್ಳಾವಿ ರಸ್ತೆ, 7ನೇ ವಾರ್ಡ್‍ನ ಜಿ.ಸಿ.ಆರ್ ಕಾಲೋನಿ, ಅಗ್ರಹಾರ ಮುಖ್ಯರಸ್ತೆ, ಬಿ.ಎಚ್. ರಸ್ತೆ, ಗಾರ್ಡನ್ ರಸ್ತೆ, ತೋಟದಸಾಲು ರಸ್ತೆ ಬಳಿ; 8ನೇ ವಾರ್ಡ್‍ನ ಮಾರುತಿ ಟಾಕೀಸ್ ಮಧ್ಯದ ರಸ್ತೆ; 11ನೇ ವಾರ್ಡ್‍ನ ಸಮುದಾಯ ಭವನ, ಮೆಳೇಕೋಟೆ, ಟೂಡಾ ಲೇಔಟ್, ರಾಜೀವ್‍ಗಾಂಧಿ ನಗರ; 12ನೇ ವಾರ್ಡ್‍ನ ಇಸ್ರಾ ಶಾದಿ ಮಹಲ್, ಗಣಪತಿ ದೇವಸ್ಥಾನದ ರಸ್ತೆ, ಮೆಳೇಕೋಟೆ ರಸ್ತೆ, 7ನೇ ಕ್ರಾಸ್ ಶಾದಿ ಮಹಲ್ ರಸ್ತೆ, ಹಣ್ಣಿ ಅಂಗಡಿ, 5ನೇ ಮುಖ್ಯರಸ್ತೆ, ನರಸಿಂಹಸ್ವಾಮಿ ದೇವಸ್ಥಾನದ ರಸ್ತೆ, ವೀರಭದ್ರಸ್ವಾಮಿ ದೇವಸ್ಥಾನದ ರಸ್ತೆ, ನಜರಬಾದ್ ರೈಲ್ವೇ ಹಳಿ ಪಕ್ಕದ ರಸ್ತೆ; 13ನೇ ವಾರ್ಡ್‍ನ ರಾಜಣ್ಣ ಅಂಗಡಿ ಮುಂಭಾಗ, 7ನೇ ಕ್ರಾಸ್, ಟಿಪ್ಪುನಗರ; 14ನೇ ವಾರ್ಡ್‍ನ ರಂಗಮಂದಿರ, ಕ್ಯಾಂಟೀನ್ ರಸ್ತೆ, ಮೀನು ಮಾರ್ಕೆಟ್ ರಸ್ತೆ; 15ನೇ ವಾರ್ಡ್‍ನ ಗಾಂಧಿನಗರ, ಸೆಂಟ್ ಮೆರೀಸ್ ಶಾಲೆ, ಟೌನ್‍ಹಾಲ್, ರೈಲ್ವೇಸ್ಟೇಷನ್, ಸಿಎಸ್‍ಐ ಲೇಔಟ್, ಎಸ್.ಎಸ್. ಪುರಂ, 15ನೇ ಕ್ರಾಸ್, 3ನೇ ಕ್ರಾಸ್; 16ನೇ ವಾರ್ಡ್‍ನ ಕೆ.ಆರ್. ಬಡಾವಣೆ, ಕರಿಬಸವ ದೇವಸ್ಥಾನ, ಕೆಇಬಿ ಕಾಂಪೌಂಡ್, ಬಾರ್ಲೈನ್ ಓವರ್‍ಹೆಡ್ ಟ್ಯಾಂಕ್; 17ನೇ ವಾರ್ಡಿನ ಬಚ್ಚೆಬೀಳು, ಪದ್ಮಪ್ರಿಯ ಮುಂಭಾಗ, ಸಿದ್ದಲಿಂಗೇಗೌಡರ ಮನೆ ಮುಂಭಾಗ, ಹುಣಸೇಮರದ ರಸ್ತೆ; 19ನೇ ವಾರ್ಡ್‍ನ ಹೊರಪೇಟೆ ಮುಖ್ಯರಸ್ತೆ, ಅಮಾನಿಕೆರೆ ಮುಖ್ಯರಸ್ತೆ; 20 ನೇ ವಾರ್ಡ್‍ನ ಬೈಲಾಂಜನೇಯಸ್ವಾಮಿ ದೇವಸ್ಥಾನದ ಮುಖ್ಯರಸ್ತೆ; 21ನೇ ವಾರ್ಡ್‍ನ ಕುವೆಂಪುನಗರ ಲಿಂಕ್ ರಸ್ತೆ; 22ನೇ ವಾರ್ಡ್‍ನ ವಿವೇಕಾನಂದ ಶಾಲೆ ಬಳಿ; 24ನೇ ವಾರ್ಡ್‍ನ ನಮ್ಮೂರ ಆಹಾರದ ಹತ್ತಿರ; 25ನೇ ವಾರ್ಡ್‍ನ ಉರ್ದು ಶಾಲೆ ಮುಂಭಾಗ; 26ನೇ ವಾರ್ಡ್‍ನ ದೋಬಿಘಾಟ್; 27ನೇ ವಾರ್ಡ್‍ನ ಎಸ್.ಐ.ಟಿ ಮುಖ್ಯರಸ್ತೆ; 28ನೇ ವಾರ್ಡ್‍ನ ಎಸ್‍ಎಸ್‍ಐಟಿ ಹಿಂಭಾಗ; 29ನೇ ವಾರ್ಡಿನ 7ನೇ ಕ್ರಾಸ್, ಗೆದ್ದಲಹಳ್ಳಿ ರಿಂಗ್‍ರಸ್ತೆ, 31ನೇ ವಾರ್ಡ್‍ನ ಶೆಟ್ಟಿಹಳ್ಳಿ ಮುಖ್ಯರಸ್ತೆ, ಮಾರುತಿನಗರ; 32ನೇ ವಾರ್ಡ್‍ನ ಕೃಷ್ಣನಗರ; 33ನೇ ವಾರ್ಡ್‍ನ ಕ್ಯಾತ್ಸಂದ್ರದ ಇಂದಿರಾಕ್ಯಾಂಟೀನ್ ಮತ್ತು ಪೇಟೆಬೀದಿ; 34ನೇ ವಾರ್ಡ್‍ನ ಯಳ್ಳಾರಬಂಡೆ ಬ್ರಿಡ್ಜ್ ಹಾಗೂ ಕ್ಯಾತ್ಸಂದ್ರದ ಕೆನರಾ ಬ್ಯಾಂಕ್ ಮುಂಭಾಗ; 35ನೇ ವಾರ್ಡ್‍ನ ಶ್ರೀನಗರ ಬ್ರಿಡ್ಜ್ ಹಾಗೂ ದೇವರಾಯಪಟ್ಟಣದ ಹೊಸ ಬಡಾವಣೆ.

ದಂಡ ಸಂಗ್ರಹ:

       ಮಹಾನಗರ ಪಾಲಿಕೆಯು ನಿಯಮ ಉಲ್ಲಂಘಿಸಿದ ಒಟ್ಟು 445 ಪ್ರಕರಣಗಳಿಗೆ ಸಂಬಂಧಿಸಿದಂತೆ 9,17,950 ರೂ.ಗಳ ದಂಡವನ್ನು ಸಂಗ್ರಹಿಸಿದ್ದು, 240 ಪ್ಲಾಸ್ಟಿಕ್ ನಿಷೇಧ ಪ್ರಕರಣಗಳಲ್ಲಿ 7,86,950 ರೂ., ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವ 126 ಪ್ರಕರಣಗಳಲ್ಲಿ 56,200 ರೂ., ಕಟ್ಟಡ ನಿರ್ಮಾಣ ಮತ್ತು ಉರುಳಿಸುವ ತ್ಯಾಜ್ಯ ಸುರಿಯುವ 25 ಪ್ರಕರಣಗಳಲ್ಲಿ 30,200 ರೂ., ತ್ಯಾಜ್ಯ ಸಮರ್ಪಕವಾಗಿ ವಿಂಗಡಣೆಯಾಗದ 22 ಪ್ರಕರಣಗಳಲ್ಲಿ 16,300 ರೂ., ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವ 21 ಪ್ರಕರಣಗಳಲ್ಲಿ 2,300 ರೂ., ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವ 11 ಪ್ರಕರಣಗಳಲ್ಲಿ 26,000 ರೂ.ಗಳ ದಂಡ ಸಂಗ್ರಹಿಸಿದೆ ಎಂದು ಅವರು ತಿಳಿಸಿದ್ದಾರೆ.

(Visited 83 times, 1 visits today)