ತುಮಕೂರು :

       ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗೆ ಸಿಕ್ಕ ಹೊರ ರಾಜ್ಯದ ಕುಖ್ಯಾತ ಕಳ್ಳ ಪೊಲೀಸರಿಂದ ಪರಾರಿಯಾಗಿರುವ ಸುದ್ಧಿ ಹೊರಬಿದ್ದಿದೆ.
ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಪೇದೆ ಶಾಂತರಾಜು ಎನ್ನುವವರು ಕಳೆದ 2 ದಿನಗಳ ಹಿಂದೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಶಮ್ಮು ಎನ್ನುವ ಕುಖ್ಯಾತ ಕಳ್ಳನನ್ನು ಆಭರಣಗಳ ಸಮೇತ ಹಿಡಿದಿದ್ದರು.

       ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಾಮಿಯಾ ಮಸೀದಿಯ ಬಳಿ ಕುಖ್ಯಾತ ಕಳ್ಳ ಶಮ್ಮು ಚಲನ-ವಲನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಾಹಿತಿದಾರರ ಮಾಹಿತಿಯನ್ನಾಧರಿಸಿ ಶಮ್ಮು ಎನ್ನುವ ಕುಖ್ಯಾತ ಕಳ್ಳನನ್ನು ಆಭರಣಗಳ ಸಮೇತವಾಗಿ ಸಾರ್ವಜನಿಕ ಸ್ಥಳದಲ್ಲಿ ಹಿಡಿದುಕೊಳ್ಳಲಾಯಿತು. ಆತನ ಬಳಿಯಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದ ಪೊಲೀಸ್ ಪೇದೆ ಕಳ್ಳನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಕರೆದುಕೊಂಡು ಹೋದರು. ಆದರೆ, ಸೋಮವಾರದ ತಡರಾತ್ರಿಯ ಮಾಹಿತಿಯ ಪ್ರಕಾರ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಾಗಲೀ ಅಥವಾ ತಿಲಕ್ ಪಾರ್ಕ್ ವೃತ್ತ ವ್ಯಾಪ್ತಿಯ ಯಾವುದೇ ಪೊಲೀಸ್ ಠಾಣೆ ಅಥವಾ ಉಪ ಪೊಲೀಸ್ ಠಾಣೆಗಳಲ್ಲಿ ಯಾವುದೇ ಠಾಣಾಧಿಕಾರಿಗಳ ಬಳಿ ವಶಕ್ಕಿಟ್ಟುಕೊಂಡಿರುವ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ತನ್ನ ಗಂಡನನ್ನು ತಿಲಕ್ ಪಾರ್ಕ್ ಪೊಲೀಸರು ಕರೆದೊಯ್ದು ಏನೋ ಮಾಡಿದ್ದಾರೆ ಎಂದು ಆತನ ಪತ್ನಿ ನ್ಯಾಯಾಲಯದ ಆವರಣದಲ್ಲಿ ರೋದನೆಗೈಯುತ್ತಿರುವ ಸುದ್ಧಿ ನ್ಯಾಯಾಲಯದ ಆವರಣದಲ್ಲಿ ವ್ಯಾಪಕವಾಗಿ ಹರಡಿತ್ತು.

       ನಿಜಕ್ಕೂ ತಿಲಕ್ ಪಾರ್ಕ್ ಕ್ರೈಂ ಕಾನ್‍ಸ್ಟೇಬಲ್ ಶಾಂತರಾಜು ಯಾವ ಪ್ರಕರಣದಲ್ಲಿ ಶಮ್ಮು ಎಂಬ ಕಳ್ಳನನ್ನು ವಶಕ್ಕೆ ಪಡೆದಿದ್ದರು..? ವಶಕ್ಕೆ ಪಡೆದ ನಂತರ ಠಾಣೆಗೆ ಕರೆತರದೇ ಯಾವ ಸ್ಥಳಕ್ಕೆ ಕೊಂಡೊಯ್ದರು..? ಪೊಲೀಸರ ವಶದಲ್ಲಿದ್ದ ಕುಖ್ಯಾತ ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವೇ…? ಕ್ರೈಂ ಕಾನ್‍ಸ್ಟೇಬಲ್ ಬಂಧಿಸಿ ಕರೆತಂದ ಕಳ್ಳತನದ ಆರೋಪಿಯನ್ನ ಸಬ್‍ಇನ್‍ಸ್ಪೆಕ್ಟರ್ ಮತ್ತು ಇನ್‍ಸ್ಪೆಕ್ಟರ್ ಗಮನಕ್ಕೆ ತರಲಿಲ್ಲವೇ..? ಪೊಲೀಸರ ವಶದಲ್ಲಿದ್ದ ಕಳ್ಳತನದ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವೇ..? ವಶಕ್ಕೆ ಪಡೆದ ಕ್ರೈಂ ಕಾನ್‍ಸ್ಟೇಬಲ್ ಆಭರಣಗಳನ್ನು ಅನಧಿಕೃತವಾಗಿ ವಶಕ್ಕೆ ಪಡೆದು ಕಳ್ಳನನ್ನು ಬಿಟ್ಟುಕಳಿಸಿದರಾ..? ಪೊಲೀಸರ ವಶದಲ್ಲಿದ್ದ ಕಳ್ಳನಿಗೆ ಪೊಲೀಸರು ಏನನ್ನಾದರೂ ಮಾಡಿದರಾ..? ಇಲ್ಲಾ ಅವರೇ ಆತನನ್ನು ಬಿಟ್ಟು ಕಳಿಸಿದರಾ..? ನಿಜಕ್ಕೂ ಕಳ್ಳತನದ ಆರೋಪಿ ಜೀವಂತವಾಗಿ ಉಳಿದಿರುವನೇ..? ಅಥವಾ ಕ್ರೈಂ ಕಾನ್‍ಸ್ಟೇಬಲ್ ತಮ್ಮ ವಶದಲ್ಲಿ ಇಟ್ಟುಕೊಂಡಿರುವೇ..? ಆತನ ಬಳಿಯಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣದ ಆಸೆಗಾಗಿ ಕ್ರೈಂ ಕಾನ್‍ಸ್ಟೇಬಲ್ ಏನಾದರೂ ಮಾಡಬಾರದ ಅವಘಡ ಮಾಡಿಬಿಟ್ಟರಾ..? ಪೊಲೀಸರ ವಶದಲ್ಲಿದ್ದ ಕಳ್ಳ ತಪ್ಪಿಸಿಕೊಂಡಿರುವ ವಿಚಾರ ಸಬ್ ಇನ್‍ಸ್ಪೆಕ್ಟರ್ ಮತ್ತು ಇನ್‍ಸ್ಪೆಕ್ಟರ್‍ಗೆ ತಿಳಿದಿಲ್ಲವೇ..? ಕಳ್ಳ ತಪ್ಪಿಸಿಕೊಂಡಿರುವ ಅಥವಾ ಬಿಟ್ಟು ಕಳಿಸಿರುವ ವಿಚಾರ ನಗರ ಉಪಾಧೀಕ್ಷಕರು ಅಥವಾ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ..? ಕಳ್ಳನ ಪರಾರಿಯ ವಿಷಯವನ್ನು ಮುಚ್ಚಿಟ್ಟ ಬಗೆಯೇನು..? ಸದರಿ ವಿಚಾರಕ್ಕೆ ಸಂಬಂಧಪಟ್ಟ ವಿಚಾರಗಳು ಹೊರ ಹೋಗದಂತೆ ಗೌಪ್ಯತೆ ಕಾಪಾಡಿರುವ ಹಿನ್ನೆಲೆ ಹಲವು ಅನುಮಾನಕ್ಕೆಡೆಮಾಡಿಕೊಡುತ್ತದೆ.  ಈ ಬಗ್ಗೆ ತನಿಖೆ ನಡೆದರೆ ಸತ್ಯಾಸತ್ಯತೆ ಬಹಿರಂಗಗೊಳ್ಳುವ ಸಾಧ್ಯತೆಗಳಿದೆ.

        ಕ್ರೈಂ ಕಾನ್‍ಸ್ಟೇಬಲ್ ಮತ್ತು ಕಳ್ಳನ ನಡುವ ನಡೆದ ವಿಚಾರ ಪೊಲೀಸ್ ಇಲಾಖೆಯಲ್ಲಿ ಗುಸುಗುಡುವುದರ ಜೊತೆಗೆ ನ್ಯಾಯಾಲಯದ ಆವರಣದಲ್ಲಿ ನಡೆದ ಕೆಲವು ಚರ್ಚೆಗಳು ಪೊಲೀಸರ ಕಾರ್ಯ ವೈಖರಿಯನ್ನು ಎತ್ತಿ ತೋರಿಸುವಂತಿದೆ.

(Visited 3,357 times, 1 visits today)