ತುಮಕೂರು:
ಸಮವಸ್ತ್ರದಲ್ಲಿರುವ ನಮ್ಮ ವರ್ತನೆಗಳನ್ನು ಸಮಾಜವು ಸೂಕ್ಷ್ಮವಾಗಿ ಗಮನಿಸುತ್ತದೆ ಆದ್ದರಿಂದ ಯಾವುದೇ ಇಲಾಖೆಯ ಸಮವಸ್ತ್ರಧಾರಿ ಸಿಬ್ಬಂದಿಗೆ ವರ್ತನೆ ಎಂಬುದು ಬಹಳ ಮುಖ್ಯ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಗೃಹ ರಕ್ಷಕ ದಳವು ಶನಿವಾರ ಸಿದ್ಧಗಂಗಾಮಠದಲ್ಲಿ ನೂತನ ಗೃಹ ರಕ್ಷಕರಿಗೆ ಆಯೋಜಿಸಿದ್ದ 10 ದಿನಗಳ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೊಲೀಸ್, ಅಗ್ನಿಶಾಮಕ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಒಬ್ಬರಿಗೊಬ್ಬರು ಪೂರಕವಾಗಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಾರೆ. ಕರ್ತವ್ಯದ ವೇಳೆ ನಾವೆಲ್ಲ ನಮ್ಮ ಸಮವಸ್ತ್ರದ ಶರ್ಟಿನ ತೋಳನ್ನು ಅರ್ಧಕ್ಕೆ ಮಡಚಿರುತ್ತೇವೆ. ಶರ್ಟಿನ ತೋಳನ್ನು ಪೂರ್ತಿ ಬಿಟ್ಟುಕೊಂಡು ಓಡಾಡಬಹುದು ಆದರೆ ನಾವು ಆ ರೀತಿ ಮಾಡುವುದಿಲ್ಲ, ಶರ್ಟಿನ ಅರ್ಧ ತೋಳನ್ನು ಮಡಚುವುದು ನಾವು ಸದಾ ಕಾಲ ಕರ್ತವ್ಯಕ್ಕೆ ಸಿದ್ಧ ಎಂಬುದನ್ನು ಸಂಕೇತಿಸುತ್ತದೆ ಎಂದು ಗೃಹ ರಕ್ಷಕ ದಳದ ಪ್ರಶಿಕ್ಷಾಣಾರ್ಥಿಗಳಿಗೆ ಹುಮ್ಮಸ್ಸು ತುಂಬಿದ ಅವರು, ಮುಂದಿನ ದಿನಗಳಲ್ಲಿ ನಿಮ್ಮನ್ನು ವಿವಿಧ ಇಲಾಖೆಗಳಿಗೆ ನಿಯೋಜನೆ ಮಾಡಲಾಗುತ್ತದೆ ಆಗ ನೀವು ಅಲ್ಲಿ ಸಭ್ಯತೆಯಿಂದ ಕರ್ತವ್ಯ ನಿರ್ವಹಿಸಿದರೆ ಈ ತರಬೇತಿಯ ಶ್ರಮ ಸಾರ್ಥಕ ಎಂದು ನೂತನ ಗೃಹ ರಕ್ಷಕರಿಗೆ ಕಿವಿಮಾತನ್ನು ಹೇಳಿದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಹಿಮಾನಂದ್ ಮಾತನಾಡಿ, ಈ 10 ದಿನಗಳ ತರಬೇತಿಯು ನಿಮ್ಮಲ್ಲಿ ದೈಹಿಕ, ಮಾನಸಿಕ ಬದಲಾವಣೆಗೆ ಕಾರಣವಾಗಿರುತ್ತದೆ. ಸಮವಸ್ತ್ರದ ಮೇಲೆ ನನಗೂ ಸಹ ವ್ಯಾಮೋಹವಿತ್ತು. ಆ ಕಾರಣದಿಂದ ಕೇಂದ್ರ ಮತ್ತು ರಾಜ್ಯದ ಹಲವು ಹುದ್ದೆಗಳಿಗೆ ಅರ್ಜಿ ಹಾಕಿ ಪರೀಕ್ಷೆ ಬರೆದಿದ್ದೆ ಆದರೇ ನನಗೆ ಇದರ ಋಣವಿಲ್ಲ. ಆದರೇ ಸಮವಸ್ತ್ರ ಧರಿಸಿರುವ ನಿಮ್ಮನ್ನು ನೋಡಿದರೆ ನನಗೆ ಖುಷಿಯಾಗುತ್ತದೆ ಎಂದರಲ್ಲದೆ ಯಾವುದೇ ರಾಗ-ದ್ವೇಷಗಳಿಗೆ ಒಳಗಾಗದೆ ಕಾನೂನು ಬದ್ಧವಾಗಿ ನಿಮ್ಮ ಅಧಿಕಾರ ಚಲಾಯಿಸಿ, ನಮ್ಮ ಕಿವಿ ಎಲ್ಲವನ್ನೂ ಆಲಿಸಬೇಕು ಆಗ ಮಾತ್ರ ನಾವು ಪ್ರತಿ ಸಂದರ್ಭದಲ್ಲೂ ಹೊಸ ವಿಚಾರಗಳನ್ನು ಕಲಿಯುತ್ತೇವೆ ಎಂದು ಪ್ರಶಿಕ್ಷಾಣಾರ್ಥಿಗಳಲ್ಲಿ ಹುರುಪು ಮೂಡಿಸಿದರು.
ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಆರ್.ಪಾತಣ್ಣ ಅವರು ಮಾತನಾಡಿ, 10 ದಿನಗಳ ಸೀಮಿತಾವಧಿಯ ತರಬೇತಿಯಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತಿದ್ದೀರಿ. ಮುಂದೆ ನೀವುಗಳು ಕರ್ತವ್ಯ ನಿರ್ವಹಿಸುವಾಗ ಈ ತರಬೇತಿ ಅವಧಿಯ ತಾಲೀಮುಗಳು ಅನುಕೂಲಕ್ಕೆ ಬಂದರೆ ನಮ್ಮ ಶ್ರಮ ಸಾರ್ಥಕ. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿರಬೇಕು, ಇಲ್ಲದಿದ್ದರೆ ಸಮಾಜದಲ್ಲಿ ನಿಮಗೆ ಮನ್ನಣೆ ಸಿಗಲಾರದು ಎಂದು ಪ್ರಶಿಕ್ಷಣಾರ್ಥಿಗಳಿಗೆ ಎಚ್ಚರಿಸಿದರಲ್ಲದೆ ಮುಂದೆ ನೀವು ಯಾವುದೇ ಇಲಾಖೆಯಲ್ಲಿರಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಗೃಹ ರಕ್ಷಕ ದಳಕ್ಕೆ ಹೆಸರು ತನ್ನಿ ಎಂದು ತಿಳಿಸಿದರು.
ಸಮಾರಂಭದಲ್ಲಿ ಅಗ್ನಿ ಶಾಮಕ ದಳ ಠಾಣೆಯ ಅಧಿಕಾರಿ ಅಡವೀಶಪ್ಪ ಅವರು ಮಾತನಾಡಿ ಪ್ರಶಿಕ್ಷಾಣಾರ್ಥಿಗಳಿಗೆ ಶುಭಕೋರಿದರು. ಆಯ್ದ ಪ್ರಶಿಕ್ಷಾಣಾರ್ಥಿಗಳು ಶಿಬಿರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ಗೃಹ ರಕ್ಷಕ ದಳದ ಸುರೇಶ್ ನಿರೂಪಣೆ, ಪರಮೇಶ್ ಪ್ರಾರ್ಥನೆ, ಜಿ.ಎಲ್.ರಂಗನಾಥ್ ಸ್ವಾಗತ, ಕ್ಯಾಂಪ್ ಕಮಾಂಡೆಂಟ್ ಮಂಜುನಾಥ ಅರಸ್ ವಂದನಾರ್ಪಣೆ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಬಿರದ ಉಸ್ತುವಾರಿಗಳಾದ ಡಿ.ಸಿ.ಪ್ರಕಾಶ್‍ಮೂರ್ತಿ, ಬಿ.ಎಸ್.ಶಿವಪ್ರಸಾದ್, ಪ್ರಕಾಶ್, ಹನುಂತಯ್ಯ, ಶ್ರೀನಿವಾಸ್, ಯತಿರಾಜು ಮೊದಲಾದವರು ಉಪಸ್ಥಿತರಿದ್ದರು.

(Visited 5 times, 1 visits today)